ಚನ್ನಗಿರಿ,ಅ.16 : ತಾಲ್ಲೂಕು ಉಬ್ರಾಣಿ ಹೋಬಳಿ ಹನುಮಲಾಪುರದಿಂದ ತಾವರೆಕೆರೆ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಸಂಪೂರ್ಣವಾಗಿ ಗುಂಡಿಗಳು ಬಿದ್ದು ಹಾಳಾಗಿ ಹೋಗಿದ್ದು, ರಸ್ತೆ ದುರಸ್ತಿಗೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಹನಮಲಾಪುರದಿಂದ ತಾವರೆಕೆರೆ ಗ್ರಾಮಕ್ಕೆ ಹೋಗುವ ರಸ್ತೆ ಹಾಳಾಗಿ ಹೋಗಿ ವರ್ಷಗಳೇ ಉರುಳಿವೆ. ಸ್ವಾತಂತ್ರ್ಯ ಬಂದು 77 ವಸಂತಗಳು ಕಳೆದರೂ ಕೂಡಾ ಇನ್ನು ನಮ್ಮ ಗ್ರಾಮೀಣ ಪ್ರದೇಶದ ರಸ್ತೆಗಳು ದುರಸ್ತಿಯ ಭಾಗ್ಯ ಕಂಡಿಲ್ಲ ಎಂದರೆ ಆಳುವ ಸರ್ಕಾರದ ಆಡಳಿತ ವೈಖರಿಗೆ ಹಿಡಿದ ಕನ್ನಡಿಯಾಗಿದೆ. ರಸ್ತೆಯಷ್ಟೇ ಅಲ್ಲದೇ ಈ ಗ್ರಾಮೀಣ ಪ್ರದೇಶಗಳಿಗೆ ಹೋಗಲು ಬಸ್ ವ್ಯವಸ್ಥೆ ಕೂಡಾ ಇಲ್ಲದೇ ಇರುವುದು ಜನಪ್ರತಿ ನಿಗಳ ನಿರ್ಲಕ್ಷ್ಯಕ್ಕೆ ಉದಾಹರಣೆಯಾಗಿದೆ.
ಹನುಮಲಾಪುರ ಒಂದು ಕುಗ್ರಾಮವಾಗಿದ್ದು ಈಗ ರಸ್ತೆಯೂ ಕೂಡಾ ಇಲ್ಲದೇ ತುಂಬಾ ಇಲ್ಲಿನ ಜನರು ಕೆಲಸ ಕಾರ್ಯಗಳಿಗೆ ಬೇರಡೆ ಹೋಗಲು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಗ್ರಾಮದ ಶಾಲಾ ಮಕ್ಕಳು, ರೈತರು ತಮ್ಮ ಕೆಲಸ ಕಾರ್ಯಗಳಿಗಾಗಿ ಹೋಗಬೇಕೆಂದರೆ ಈ ರಸ್ತೆ ಮಾರ್ಗ ಬಿಟ್ಟು ಬೇರೆ ಮಾರ್ಗವಿರುವುದಿಲ್ಲ. ಬೇರೆ ಮಾರ್ಗ ದಲ್ಲಿ ಹೋಗಬೇಕೆಂದರೆ 7 ರಿಂದ8 ಕಿಮೀ ಸುತ್ತಿಬಳಸಿ ಹೋಗಬೇಕು. ಸ್ವಂತ ವಾಹನಗಳು ಹೊಂದಿರುವವರು ಹೇಗೋ ಹೋಗುತ್ತಾರೆ. ಆದರೆ ಸ್ವಂತ ವಾಹನಗಳು ಇಲ್ಲದೇ ಇರುವ ವರು ಈ ರಸ್ತೆಯಲ್ಲಿಯೇ ನಡೆದುಕೊಂಡು ಹೋಗಬೇಕಾಗಿದೆ.
ಜತೆಗೆ ರಸ್ತೆ ಅತ್ಯಂತ ಕಿರಿದಾಗಿದ್ದು, ಒಂದು ವಾಹನ ಬಂದರೆ ಮತ್ತೊಂದು ವಾಹನ ಹೋಗಲು ಕೂಡಾ ತೊಂದರೆ ಅನುಭವಿಸು ವಂತಾಗಿದೆ. ರಸ್ತೆ ಬದಿಯಲ್ಲಿ ಯಥೇಚ್ಛ ಪ್ರಮಾಣದಲ್ಲಿ ಗಿಡಮರಗಳು ಬೆಳೆದು ನಿಂತಿವೆ. ಕಾಡಿನ ಪ್ರದೇಶವಾಗಿರುವುದರಿಂದ ಕಾಡು ಪ್ರಾಣಿಗಳ ಕಾಟ. ಹಾಗೆಯೇ ತಾವರೆಕೆರೆ ಗ್ರಾಮದ ರೈತರ ತೋಟಗಳು ಈ ಭಾಗದಲ್ಲಿ ಹೆಚ್ಚಾಗಿದ್ದು ಅಡಿಕೆ ಹಾಗೂ ತೆಂಗಿನ ಕೊಯ್ಲು ಮಾಡಲು ಇದೇ ರಸ್ತೆಯಲ್ಲಿ ಹೋಗಬೇಕಾ ಗಿದ್ದು, ರಸ್ತೆ ಹಾಳಾಗಿರುವುದರಿಂದ ರೈತರು ತಮ್ಮ ಜಮೀನುಗಳಿಗೆ ಹೋಗಲು ತುಂಬಾ ತೊಂದರೆ ಅನುಭವಿಸುವಂತಾಗಿದೆ.
ರಸ್ತೆ ದುರಸ್ತಿಯ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಇಲಾಖೆಯ ಅಕಾರಿಗಳಿಗೆ ಹಾಗೂ ಜನಪ್ರತಿನಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಯಾವುದೇ ಪ್ರಯೋಜನ ವಾಗಿರುವುದಿಲ್ಲ. ಈ ರಸ್ತೆ ಗ್ರಾಮೀಣಾಭಿವೃದ್ಧಿ ಇಲಾಖೆ ವ್ಯಾಪ್ತಿಗೆ ಸೇರಿದ್ದು, ದುರಸ್ತಿಯ ಬಗ್ಗೆ ಅಕಾರಿಗಳನ್ನು ಕೇಳಿದರೆ ಅನುದಾನ ಬಂದಿಲ್ಲ ಎಂದು ಸಿದ್ಧ ಉತ್ತರ ನೀಡುತ್ತಾರೆ. ಇದರಿಂದ ಈ ಗ್ರಾಮದ ಜನರು ತೊಂದರೆಯನ್ನು ಅನುಭವಿ ಸುವಂತಾಗಿದೆ. ಕೂಡಲೇ ಸಂಬಂಧಪಟ್ಟ ಇಲಾಖೆಯವರು ಹಾಗೂ ಜನಪ್ರತಿನಿಗಳು ಈ ಹಾಳಾಗಿರುವ ರಸ್ತೆಯನ್ನು ದುರಸ್ತಿಗೊಳಿಸಿ ಜನರಿಗೆ ಆಗುತ್ತಿರುವ ತೊಂದರೆಯನ್ನು ತಪ್ಪಿಸಬೇಕೆನ್ನುತ್ತಾರೆ ಹನುಮಲಾಪುರ ಗ್ರಾಮದ ವಾಸಿ ವೆಂಕಟೇಶ್.
ನನಗೆ ಈ ರಸ್ತೆ ಬಗ್ಗೆ ಮಾಹಿತಿ ಇರುವುದಿಲ್ಲ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಆಗಿದ್ದು, ಒಂದು ವಾರದ ಹಿಂದೆ ಪ್ರಭಾರ ಎಇಇ ಆಗಿ ಅಕಾರ ವಹಿಸಿಕೊಂಡಿದ್ದೇನೆ. ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಇಲಾಖೆ ಪ್ರಭಾರ ಎಇಇ ಜಿ.ಎಂ. ಲೋಹಿತ್ ಕುಮಾರ್ ತಿಳಿಸಿದರು.