ಅಂತೂ ಶಿವಮೊಗ್ಗಕ್ಕೆ ತಂಪೆರೆದ ಮಳೆರಾಯ

Kranti Deepa
ಶಿವಮೊಗ್ಗ,ಎ.05 : ಯುಗಾದಿ ನಂತರದ ವರ್ಷದ ಮೊದಲ ಮಳೆ ಶಿವಮೊಗ್ಗ ನಗರದ ಜನತೆಗೆ ತಂಪಿನ ಅನುಭವವನ್ನು ನೀಡಿತು.
ಕಳೆದ ಮೂರು ತಿಂಗಳಿಂದ ಬಿಸಿಲಿನ ತಾಪದಿಂದ ಬಳಲಿ ಬೆಂಡಾಗಿದ್ದ ಜನತೆಗೆ ಕಳೆದ ಕೆಲವು ದಿನಗಳಿಂದ ಮೇಘರಾಜ ತೂಗುವ ಮೂಲಕ ಬೀಳಲು ಬೇಡ ಎಂದು ಯೋಚಿಸುತ್ತಿದ್ದ ಒಂದೆರಡು ಹನಿಗಳನ್ನು ಉದುರಿಸಿ ಶಾಖದ ಪ್ರಮಾಣವನ್ನು ಮತ್ತಷ್ಟು ಹೆಚ್ಚಿಸಿದ್ದ,  ಆದರೆ ಇಂದು ಸತತ 40 ನಿಮಿಷಗಳ ಕಾಲ ನೆನೆಮಳೆ ಸುರಿದು ಭೂಮಿ ತಂಪಾಯ್ತು.
ಶಿವಮೊಗ್ಗ ನಗರದಲ್ಲಿ ಬಯಲು ಸೀಮೆಯ ಬಿಸಿಲನ್ನ ಮೀರಿಸುವಂತಹ ತಾಪಮಾನ ದಿನೇ ದಿನೇ ಏರಿಕೆ ಆಗುತ್ತಿದ್ದು ಇದರಿಂದಾಗಿ ನಗರದ ಜನತೆ ಸಾಕಷ್ಟು ಪರಿತಪಿಸಿದ್ದರು.
ಇಂದು ಸುರಿದ ಮಳೆಯಿಂದಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು ಮಕ್ಕಳು ಹಾಗೂ ಮಹಿಳೆಯರು ಮೊದಲ ಮಳೆಯಲ್ಲಿ ನೆನೆದು ಖುಷಿ ಪಟ್ಟರು. ಯಾವುದೇ ಮಿಂಚು ಗುಡುಗಿನ ಆರ್ಭಟವಿಲ್ಲದೆ ಕೇವಲ ಮೇಘರಾಜನ ಆಗಮನ ನಗರದ ಜನತೆಗೆ ಖುಷಿ ಕೊಟ್ಟಿತು.
ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನ ಮತ್ತೆ ಬಿಸಿಲಿಗೆ ಜನರು ಬಸವಳಿದಿತ್ತು. ಆದರೆ ಸಂಜೆ ಬಳಿಕ ಶಿವಮೊಗ್ಗ ನಗರ, ಸಾಗರ, ಹೊಸನಗರ, ಸೊರಬ, ಶಿಕಾರಿಪುರ ತಾಲೂಕಿನ ಹಲವೆಡೆ ಮಳೆ ಸುರಿ ಯಿತು. ಇದರಿಂದ ಹಲವು ದಿನಗಳಿಂದ ಬಿಸಿಲಿನ ತಾಪದಿಂದ ಕಂಗಾಲಾಗಿದ್ದ ಜನರಿಗೆ ವಾತಾವರಣ ತುಸು ತಂಪಾಗಿಸಿತು.
ಸಂಜೆ ಶಿವಮೊಗ್ಗ ನಗರದಲ್ಲಿ ದಟ್ಟ ಮೋಡ ಆವರಿಸಿದ ನಂತರ ವಿವಿಧ ಬಡಾವಣೆಯಲ್ಲಿ ಜೋರು ಮಳೆ ಯಾಯಿತು. ನಾಲ್ಕೈದು ದಿನದಿಂದ ಶಿವಮೊಗ್ಗದಲ್ಲಿ ಮೋಡ ಆವರಿಸಿದ್ದರೂ ಮಳೆಯಾಗಿರಲಿಲ್ಲ. ಈಗ ನಗರದಲ್ಲಿ ಮೊದಲ ಬಾರಿಗೆ ವರ್ಷಧಾರೆ ಯಾಗಿದೆ.
ಹೊಸನಗರದ ಸೋನಲೆ, ಮೇಲಿನ ಬೆಸಿಗೆ, ಹೊಸೂರು ಸಂಪೆಕಟ್ಟೆ ಸುತ್ತ ಮುತ್ತ, ಸೊರಬ, ಸಾಗರ, ಶಿಕಾರಿಪುರ ತಾಲೂಕಿನಲ್ಲಿ ಮಳೆಯಾಗಿರುವುದು ರೈತರಲ್ಲಿ ಮಂದಹಾಸ ಮೂಡಿಸಿದೆ.

Share This Article
";