ಶಿವಮೊಗ್ಗ,ಫೆ .05 : ಸಹಕಾರಿ ಪ್ರತಿಷ್ಠಾನದವರು ಮಾಮ್ಕೋಸ್ ನಲ್ಲಿನ ಸಹಕಾರ ಭಾರತಿಯ ಸಾಧನೆಯನ್ನು ಸಹಿಸಲಾಗದೆ ಎರಡು ವರ್ಷಗಳಿಂದ ಸಂಘದ ಅಭಿವೃದ್ಧಿಯ ಪ್ರತಿಯೊಂದು ಕೆಲಸಕ್ಕೂ ಹಿನ್ನಡೆಯನ್ನು ಉಂಟು ಮಾಡಲು ಶ್ರಮಿಸಿತ್ತು.
ಆದರೆ ಅದೆಲ್ಲವನ್ನೂ ಮೀರಿ ಈ ಸಂದರ್ಭದಲ್ಲಿ ಷೇರುದಾರರು ನಮ್ಮ ಆಡಳಿತವನ್ನು ಒಪ್ಪಿ ಅಭೂತಪೂರ್ವ ಗೆಲುವಿಗೆ ಸಹಕರಿಸಿದ್ದಾರೆ ಎಂದು ಸಹಕಾರ ಭಾರತಿ ಜಿಲ್ಲಾಧ್ಯಕ್ಷರೂ, ಮ್ಯಾಮ್ಕೋಸ್ ಉಪಾಧ್ಯಕ್ಷರೂ ಆದ ಹುಲ್ಕುಳಿ ಮಹೇಶ್ ಹೇಳಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘದ ವಾರ್ಷಿಕ ಸಭೆಗಳಲ್ಲಿ ಮತ್ತು ಷೇರುದಾರರ ಸಭೆಗಳಲ್ಲಿ ಪ್ರತಿರೋಧವನ್ನು ನಡೆಸುತ್ತಾ ಬಂದಿರುವ ಸಹಕಾರಿ ಪ್ರತಿಷ್ಠಾನದವರಿಗೆ ಷೇರುದಾರರು ಈ ಚುನಾವಣೆಯಲ್ಲಿ ತಕ್ಕ ಉತ್ತರವನ್ನು ನೀಡಿರುವುದು ಸ್ವಾಗತಾರ್ಹ ಎಂದರು.
ಸಹಕಾರ ಭಾರತಿಯು ಈಗಾಗಲೇ ಆಶ್ವಾಸನೆ ನೀಡಿದಂತೆ ಎಲ್ಲಾ ಭರವಸೆಗಳನ್ನು ಈಡೇರಿಸುವತ್ತ ಶ್ರಮಿಸುತ್ತಾ, ಸಂಘದ ಮತ್ತು ಸದಸ್ಯರ ಕ್ಷೇಮಾಭಿವೃದ್ಧಿಗಾಗಿ ಕಂಕಣ ಬದ್ಧವಾಗಿದೆ. ಫೆ. 4ರಂದು ನಡೆದ ಮಾಮ್ಕೋಸ್ ಚುನಾವಣೆಯ ಸಂದರ್ಭದಲ್ಲಿ ಶಿವಮೊಗ್ಗ ಮತ್ತು ತೀರ್ಥಹಳ್ಳಿಯಲ್ಲಿ ದುರುದ್ದೇಶದಿಂದ ಸಹಕಾರ ಭಾರತಿ ಕರ್ನಾಟಕ ಹೆಸರಿನಲ್ಲಿ ಕರಪತ್ರವನ್ನು ಮುದ್ರಿಸಿ ಅದರಲ್ಲಿ ತಮ್ಮ ಅಭ್ಯರ್ಥಿಗಳ ಸಂಖ್ಯೆ ಮತ್ತು ಚಿಹ್ನೆಯನ್ನು ನೀಡಿ ಮತದಾರರ ದಿಕ್ಕು ತಪ್ಪಿಸಿರುವುದನ್ನು ಸಹಕಾರ ಭಾರತಿ ಈ ಮೂಲಕ ಖಂಡಿಸುತ್ತದೆ ಹಾಗೂ ಇವರು ಹತಾಶ ಮನೋಭಾವದಿಂದ ಮತ್ತು ದುರುದ್ದೇಶಪೂರ್ವಕವಾಗಿ ಈ ಕೃತ್ಯ ನಡೆಸಿರುವುದು ಕಂಡು ಬಂದಿದೆ.
ವೈಯಕ್ತಿಕ ಹಿತಾಸಕ್ತಿಯಿಂದ ಮಾಮ್ಮೋಸ್ ಆಡಳಿತವನ್ನು ನಡೆಸಲು ಇವರು ಮುಂದೆ ಬಂದಿದ್ದು, ಈ ಹಿಂದೆ ನಿಸ್ವಾರ್ಥತೆಯಿಂದ ಈ ಸಂಸ್ಥೆಯನ್ನು ಸ್ಥಾಪಿಸಿ, ಹಣಬಲ ಮತ್ತು ಅಧಿಕಾರ ಕಟ್ಟಿ, ಬೆಳೆಸಿದ ಮಹನೀಯರಿಗೆ ಅಪಚಾರ ಎಸಗಿದಂತಾಗಿದೆ. ಹಣಬಲದಿಂದ ಇಂತಹ ಘನತೆವೆತ್ತ ಸಂಸ್ಥೆಯನ್ನು ಹಾಳುಗೆಡುವಲು ಷೇರುದಾರ ಬಿಡುವುದಿಲ್ಲವೆಂದು ಮತ್ತೊಮ್ಮೆ ಸಾಬೀತಾಗಿದೆ ಎಂದರು. ಆದ್ದರಿಂದ ಮತ್ತೊಮ್ಮೆ ಸಹಕಾರ ಭಾರತಿಗೆ ಈ ಅಭೂತಪೂರ್ವ ಗೆಲುವನ್ನು ಸಾಧಿಸಲು ಅನುವು ಮಾಡಿಕೊಟ್ಟ ಸರ್ವರಿಗೂ ಧನ್ಯವಾದ ಹೇಳಿದರು.