ಚಿನ್ನದಂಗಡಿಯಲ್ಲಿ ಅಸಲಿ ಸರ ಕದ್ದು ನಕಲಿ ಸರ ಇಟ್ಟ ಮಹಿಳೆಯರಿಬ್ಬರು ಬಂಧನ

Kranti Deepa

ಶಿವಮೊಗ್ಗ, ಫೆ.20 : ಬುರ್ಕಾವನ್ನು ಧರಿಸಿದ್ದ ಇಬ್ಬರು ಮಹಿಳೆಯರು ಚಿನ್ನದ ಅಂಗಡಿಗೆ ಬಂದು ಬಂಗಾರವನ್ನು ನೋಡುವ ನೆಪದಲ್ಲಿ ಮೋಸದಿಂದ ನಕಲಿ ಬಂಗಾರದ ಸರವನ್ನು ಇಟ್ಟು ಅಸಲಿ ಬಂಗಾರದ ಸರವನ್ನು ಕಳ್ಳತನ ಮಾಡುವಾಗಲೇ ಅಂಗಡಿಯಲ್ಲಿ ಸಿಕ್ಕಿಬಿದ್ದ ಘಟನೆ ನಗರದ ಗಾಂಧಿಬಜಾರ್‌ನಲ್ಲಿ ಸಂಭವಿಸಿದೆ.

ಈ ಬಗ್ಗೆ ಷಾ ಸದಾಜೀ ಸೋಗ್‌ಮಲ್‌ಜೀ ಜ್ಯುವೆಲರಿ ಅಂಗಡಿಯ ವ್ಯವಸ್ಥಾಪಕ ಕಿರಣ್ ಷಾ (49) ಕೋಟೆ ಪೊಲೀಸರಿಗೆ ದೂರು ನೀಡಿದ್ದು, ದೂರಿನನ್ವಯ ಪೊಲೀಸರು ಆರ್ ಎಂ ಎಲ್ ನಗರದ ನಿಗರ್ ಸುಲ್ತಾನಾ ಮತ್ತು ನೂರೈನ್ ಎನ್ನುವವರನ್ನು ಬಂಧಿಸಿದ್ದಾರೆ ಫೆ. 18 ರಂದು ಮಧ್ಯಾಹ್ನ ಸುಮಾರು 2.40 ಗಂಟೆಗೆ ಬುರ್ಕಾ ಹಾಕಿಕೊಂಡು ಬಂದಿದ್ದ ಇಬ್ಬರು ಹೆಣ್ಣುಮಕ್ಕಳು ಬಂಗಾರವನ್ನು ಖರೀದಿಸುವ ರೀತಿಯಲ್ಲಿ ಅಂಗಡಿಗೆ ಬಂದು, 15 ರಿಂದ 20 ಗ್ರಾಂ ತೂಕದ ಬಂಗಾರದ ಸರವನ್ನು ತೋರಿಸಿ ಅಂತ ಹೇಳಿದಾಗ ಅಂಗಡಿಯ ಕೆಲಸಗಾರರು ಶೋಕೇಸ್ ನಲ್ಲಿ ಇಟ್ಟಿದ್ದ ಬಂಗಾರದ ಸರವಿರುವ ಟ್ರೇಯನ್ನು ತೆಗೆದು ಆ ಇಬ್ಬರು ಮಹಿಳೆಯರಿಗೆ ತೋರಿಸಿದ್ದರು. ಇದೇ ವೇಳೆ ಬಂಗಾರದ ಖರೀದಿಗೆ ಬಂದಿದ್ದ ಇನ್ನೊಬ್ಬ ಗ್ರಾಹಕರ ಕಡೆಗೆ ಗಮನವನ್ನು ಕೊಡುತ್ತಿದ್ದಾಗ, ಬಂಗಾರವನ್ನು ನೋಡುತ್ತಿದ್ದ ಇಬ್ಬರು ಮಹಿಳೆಯರು ಟ್ರೇಯಲ್ಲಿದ್ದ ಒಂದು ಸರವನ್ನು ತೆಗೆದು ತೂಕ ಮಾಡಲು ಕೊಟ್ಟಿದ್ದರು.

ಆ ಬಂಗಾರವನ್ನು ತೂಕ ಮಾಡಿ, ಅದರ ಬೆಲೆ ಹೇಳಿದಾಗ ಅವರು ಬಂಗಾರದ ಸರವಿರುವ ಟ್ರೇಯನ್ನು ವಾಪಾಸು ಕೊಟ್ಟು, ತಮ್ಮ ಬಳಿ ಬಂಗಾರವಿದೆ. ಅದನ್ನು ತೆಗೆದುಕೊಳ್ಳುತ್ತಿರಾ ಅಂತ ಕೇಳಿದ್ದರು. ಅದಕ್ಕೆ ಆಯಿತು ಆ ಬಂಗಾರದ ಸರವನ್ನು ತೋರಿಸಿ, ಅಂತ ಕೇಳಿ ಟ್ರೇಯಲ್ಲಿದ್ದ ಬಂಗಾರದ ಸರವನ್ನು ಚೆಕ್ ಮಾಡಿದಾಗ, ಅವುಗಳಲ್ಲಿ ಒಂದು 15 ಗ್ರಾಂ ತೂಕದ ಸುಮಾರು 1,12,000 ಸಾ. ರೂ ಬೆಲೆಬಾಳುವ ಬಂಗಾರದ ಸರ ಬದಲಾಗಿದ್ದು ಕಂಡುಬಂದಿತು ಎಂದಿದ್ದಾರೆ. ಬಂಗಾರದ ಸರಗಳಿಗೆ ಕಂಪ್ಯೂಟರ್ ಪ್ರಿಂಟ್ ಆಗಿರುವ ನಂಬರ್‌ಗಳಿರುವ ಸ್ಲಿಪ್ ಟ್ಯಾಗ್ ಅನ್ನು ಹಾಕಲಾಗಿತ್ತು.

ಆ ಸ್ಥಳದಲ್ಲಿ ನಮ್ಮ ಸರ ಬದಲಾಗಿ ಕೈ ಬರಹದಿಂದ ಬರೆದಿರುವ ಸ್ಲಿಪ್ ಟ್ಯಾಗ್ ಇದ್ದ ಸರ ವನ್ನು ಆ ಮಹಿಳೆಯರು ಇಟ್ಟಿದ್ದರು. ಆದ್ದರಿಂದ ಇವರ ಮೇಲೆ ಅನುಮಾನ ಬಂದು ಅವರನ್ನು ವಿಚಾರಿಸಿದಾಗ, ಅವರು ಸರಿಯಾಗಿ ಉತ್ತರ ಕೊಡದ ಕಾರಣ ಸಿಸಿ ಕ್ಯಾಮರ್‍ನಾ ಚೆಕ್ ಮಾಡಿದಾಗ, ಮಹಿಳೆಯು ಟ್ರೇಯನ್ನು ಅಡ್ಡ ಇಟ್ಟುಕೊಂಡು, ಇನ್ನೊಬ್ಬ ಮಹಿಳೆಯು ಸರಗಳಿದ್ದ ಟ್ರೇಗೆ ತನ್ನ ಬಳಿ ಇದ್ದ ನಕಲಿ ಬಂಗಾರದ ಸರವನ್ನು ಇಟ್ಟು, ಅದರಲ್ಲಿ ಇದ್ದ ಅಸಲಿ ಬಂಗಾರದ ಸರವನ್ನು ತೆಗೆದು ತನ್ನ ಬೂರ್ಕಾದ ಉದ್ದ ತೋಳಿನ ಬಟ್ಟೆಯ ಒಳಗೆ ಹಾಕಿಕೊಳ್ಳುವ ದೃಶ್ಯ ಕಂಡು ಬಂದಿತು ಎಂದು ದೂರಿನಲ್ಲಿ ವಿವರಿಸಿದ್ದಾರೆ.

ಅವರು ತೆಗೆದುಕೊಂಡಿದ್ದ ಅಸಲಿ ಬಂಗಾರವನ್ನು ಪಡೆದುಕೊಂಡು, ಅವರ ಹೆಸರು ವಿಳಾಸ ಕೇಳಲಾಗಿ ಅವರಲ್ಲಿ ಒಬ್ಬರು ನಿಗರ್ ಸುಲ್ತಾನ ಮತ್ತು ನೂರೈನ್ ಪರಿ ಎಂದು ಹೇಳಿದ್ದು, ಆರ್ ಎಂ ಎಲ್ ನಗರದ ವಾಸಿಗಳು ಎಂಬ ಮಾಹಿತಿ ಕೊಟ್ಟಿದ್ದರು. ನಂತರ ಪೊಲೀಸರಿಗೆ ಮಾಹಿತಿ ಕೊಟ್ಟು ಅವರು ಧಾವಿಸಿ ಮಹಿಳೆಯರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Share This Article
";