ಶಿರಸಿಯಲ್ಲಿ ಸರಕಾರಿ ಬಸ್‌ನಲ್ಲಿಯೇ ಸಾಗರದ ನಿವಾಸಿಯ ಹತ್ಯೆ: ಪತ್ನಿ, ಪ್ರಿಯಕರ ಬಂಧನ

Kranti Deepa

ಶಿವಮೊಗ್ಗ,ಫೆ. 24 : ಶಿರಸಿಯಲ್ಲಿ ಸಾಗರ ತಾಲ್ಲೂಕು ನಿವಾಸಿಯೊಬ್ಬರನ್ನು ಬಸ್‌ನಲ್ಲಿಯೇ ಇರಿದು ಹತ್ಯೆ ಮಾಡಲಾಗಿದೆ.

ಸಾಗರ ತಾಲ್ಲೂಕು ನಿಚಡಿಯ ಗಂಗಾಧರ್ ಮೃತ ಯುವಕ. ಇವರು ಶಿರಸಿಯ ಯವತಿಯ ಜೊತೆ ನಾಲ್ಕು ತಿಂಗಳ ಹಿಂದೆಷ್ಟೆ ಮದುವೆಯಾಗಿ ಬೆಂಗಳೂರಿನಲ್ಲಿ ನೆಲೆಸಿದ್ದವರು, ಸಂಬಂಧಿಕರ ಮನೆಯ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳುವ ಸಲುವಾಗಿ ಶನಿವಾರ ಶಿರಸಿಗೆ ಬಂದಿದ್ದರು. ವಾಪಸ್ ಬೆಂಗಳೂರಿಗೆ ಹೋಗಲು ಸಂಜೆ ೭ರ ಸುಮಾರಿಗೆ ಹೊಸ ಬಸ್ ನಿಲ್ದಾಣದಲ್ಲಿ ಸರಕಾರಿ ಬಸ್ ಹತ್ತಿದ್ದನು ದಂಪತಿಯ ಜೊತೆ ಆರೋಪಿ ಪ್ರೀತಮ್ ಡಿಸೋಜಾ ಎಂಬಾತ ಜಗಳ ತೆಗೆದಿದ್ದನು. ಬಸ್ ಸರಕಾರಿ ಆಸ್ಪತ್ರೆ ಬಳಿ ಬರುತ್ತಿದ್ದಂತೆಯೇ ಬಸ್‌ನಲ್ಲಿಯೇ ಗಂಗಾಧರ್ ಎದೆಗೆ ಇರಿದು ಅವರನ್ನು ಹತ್ಯೆ ಮಾಡಿದ್ದಾನೆ.

ಘಟನೆ ಕಾರಣ:
ಪ್ರೀತಮ್ ಡಿಸೋಜಾ 10 ವರ್ಷಗಳಿಂದ ಶಿರಸಿಯ ಪೂಜಾಳನ್ನು ಪ್ರೀತಿಸುತ್ತಿದ್ದನು. ಆಕೆಯು ಸಹ ಪ್ರೀತಿಯಲ್ಲಿದ್ದಳು. ಈ ನಡುವೆ ಬೆಂಗಳೂರಿಗೆ ಕೆಲಸಕ್ಕೆ ಸೇರಿದ್ದ ಯುವತಿ ಅಲ್ಲಿ ನಾಲ್ಕು ತಿಂಗಳ ಹಿಂದೆ ಗಂಗಾಧರ್‌ರನ್ನು ಮದುವೆಯಾಗಿದ್ದರು. ಇದರಿಂದ ಪ್ರೀತಮ್ ಡಿಸೋಜಾ ಆಕ್ರೋಶಗೊಂಡಿದ್ದ. ಸಂಬಂಧಿಕರ ಮನೆಗೆ ಯುವತಿ ಹಾಗೂ ಗಂಗಾಧರ್ ಬರುವ ಮಾಹಿತಿ ಹೊಂದಿದ್ದ ಪ್ರೀತಮ್ ಶಿರಸಿ ಬಸ್ ನಿಲ್ದಾಣದ ಸಮೀಪ, ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಗಂಗಾಧರ್ ಜೊತೆ ಜಗಳ ತೆಗೆದಿದ್ದಾನೆ. ಜಗಳದ ನಡುವೆ ಪ್ರೀತಮ್ ಗಂಗಾಧರ್‌ರವರ ಎದೆಗೆ ಚಾಕುವನಿಂದ ಇರಿದಿದ್ದ. ಗಂಭೀರವಾಗಿ ಗಾಯಗೊಂಡಿದ್ದ ಗಂಗಾಧರ್ ಅವರನ್ನು ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಅವರು ಮೃತಪಟ್ಟಿದ್ದರು.
ಇತ್ತ ಪ್ರೀತಮ್ ಕೃತ್ಯವೆಸಗಿದ ಬೆನ್ನಲ್ಲೆ ಪೊಲೀಸರಿಗೆ ಶರಣಾಗಿದ್ದಾನೆ. ಪ್ರಕರಣ ದಾಖಲಿಸಿರುವ ಪೊಲೀಸರು ಗಂಗಾಧರ್ ಪತ್ನಿ ಪೂಜಾಳನ್ನು ಸಹ ಬಂಧನ ಮಾಡಿ ವಿಚಾರಣೆ ನಡೆಸುತ್ತಿದ್ದಾರೆ.

 

Share This Article
";