ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪಿ ಸೆರೆ

Kranti Deepa
ಭದ್ರಾವತಿ , ಮೇ.07 : ವ್ಯಕ್ತಿಯೋರ್ವರಿಗೆ ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ ಆರೋಪದ ಮೇರೆಗೆ, ವ್ಯಕ್ತಿಯೋರ್ವನನ್ನು ಭದ್ರಾವತಿ ತಾಲೂಕು ಹೊಳೆಹೊನ್ನೂರು ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ದಾವಣಗೆರೆ ಜಿಲ್ಲೆ ಚನ್ನಗಿರಿ ತಾಲೂಕು ಸಂತೆಬೆನ್ನೂರು ಎಸ್ ಬಿ ಆರ್ ಕಾಲೋನಿ ನಿವಾಸಿ ರಾಮಪ್ಪ ಯಾನೆ ಬೆಂಕಿ ರಾಮಪ್ಪ (65) ಬಂಧಿತ ವ್ಯಕ್ತಿ.  ಆರೋಪಿಯಿಂದ ವಂಚನೆ ಮಾಡಲಾಗಿದ್ದ 3.08 ಲಕ್ಷ ನಗದನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಮಾಹಿತಿ ನೀಡಿದೆ.
ಹೊಸಪೇಟೆ ನಗರದ ನಿವಾಸಿ ರಾಜೇಶ್ ಎಂಬುವರಿಗೆ 21-7-2024  ರಂದು ಸುರೇಶ್ ಎಂದು ಪರಿಚಯಿಸಿಕೊಂಡಿದ್ದ ವ್ಯಕ್ತಿಯೂ ಅಸಲಿ ಬಂಗಾರ ಸಿಕ್ಕಿದೆ ಎಂದು ನಂಬಿಸಿ, ನಕಲಿ ಬಂಗಾರ ನೀಡಿ ಲಕ್ಷಾಂತರ ರೂ. ವಂಚಿಸಿದ್ದ. ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಭದ್ರಾವತಿ ಡಿವೈಎಸ್ಪಿ ನಾಗರಾಜ್ ಕೆ ಆರ್ ಮೇಲ್ವಿಚಾರಣೆಯಲ್ಲಿ ಇನ್ಸ್’ಪೆಕ್ಟರ್ ಲಕ್ಷ್ಮೀಪತಿ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಮಂಜುನಾಥ್ ಎಸ್ ಕುರಿ, ಕೃಷ್ಣನಾಯ್ಕ್, ಸಿಬ್ಬಂದಿಗಳಾದ ಹೆಚ್ ಸಿ ಅಣ್ಣಪ್ಪ, ಪ್ರಕಾಶ್ ನಾಯ್ಕ್, ಮಂಜುನಾಥ್, ಪ್ರಸನ್ನ, ಪಿಸಿಗಳಾದ ವಿಶ್ವನಾಥ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

Share This Article
";