ಶಿವಮೊಗ್ಗ, ಆ.12 : ಶಿವಕುಮಾರ ಸ್ವಾಮೀಜಿಗಳ ನೌಕರರ ಸಂಘದ ವತಿಯಿಂದ ಆ.16 ರಂದು ಸಂಜೆ 5 ಗಂಟೆಗೆ ಕೃಷಿನಗರದಲ್ಲಿರುವ ತರಳಬಾಳು ಹಾಸ್ಟೆಲ್ ಹಿಂಭಾಗದಲ್ಲಿ “ಸಮರ್ಪಣೆ” ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಹೇಳಿದರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪರಿಗೆ ಅಭಿನಂದನೆ, ಬಿ.ಎಸ್. ಯಡಿಯೂರಪ್ಪನವರ ವೀರಶೈವ ಉಚಿತ ವಿದ್ಯಾರ್ಥಿನಿಲಯ ಹಾಗೂ ಮೈತ್ರಿದೇವಿ ಬಿ.ಎಸ್. ಯಡಿಯೂರಪ್ಪನವರ ವೀರಶೈವ ವಿದ್ಯಾರ್ಥಿನಿಲಯ ಮತ್ತು ಸಂಘದ ಆಡಳಿತ ಕಛೇರಿ ಉದ್ಘಾಟನೆ ಪ್ರತಿಭಾ ಪುರಸ್ಕಾರ, ದಾನಿಗಳು ಮತ್ತು ಸಮಾಜ ಬಾಂಧವರಿಗೆ ಕೃತಜ್ಞತೆ ಹಾಗೂ ಸಿದ್ಧಗಂಗಾ ಮಠಕ್ಕೆ ಅಕ್ಕಿ ಸಮರ್ಪಣಾ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಂಡರಗಿ ತೋಂಟದಾರ್ಯ ಮಠದ ನಿಜಗುಣ ಪ್ರಭುತೋಂಟದಾರ್ಯ ಸ್ವಾಮೀಜಿ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಬಸವ ಕೇಂದ್ರದ ಬಸವಮರಳಸಿದ್ಧ ಸ್ವಾಮೀಜಿ ಸಾನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿದ್ಯಾರ್ಥಿನಿಲಯವನ್ನು, ಸಂಸದ ಬಿ.ವೈ. ರಾಘವೇಂದ್ರ ಆಡಳಿತ ಕಛೇರಿ ಉದ್ಘಾಟಿಸಲಿದ್ದಾರೆ. ಶಾಸಕರಾದ ಬಿ.ಕೆ. ಸಂಗಮೇಶ್ವರ್, ಎಸ್.ಎನ್. ಚನ್ನಬಸಪ್ಪ, ಬಿ.ವೈ. ವಿಜಯೇಂದ್ರ, ಸಮಾಜದ ಶಾಸಕರು, ಮಾಜಿ ಶಾಸಕರು, ಜನಪ್ರತಿನಿಧಿಗಳು, ಗಣ್ಯರು, ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದರು.
ಸಮಾಜದ 200 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಿಸಲಾಗುವುದು. ಈ ಸಮಾರಂಭದಲ್ಲಿ ೨೦೦೦ಕ್ಕೂ ಹೆಚ್ಚು ಸಮಾಜ ಬಾಂಧವರು ಭಾಗವಹಿಸುವ ನಿರೀಕ್ಷೆಯಿದೆ ಎಂದರು.2003 ರ ಮಾರ್ಚ್ 21 ರಂದು ಆರಂಭಗೊಂಡ ಸಂಘ 22 ವರ್ಷಗಳನ್ನು ಪೂರೈಸಿ, ಅನೇಕ ಸಮಾಜಮುಖಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡು ಸಂಘ ಮುನ್ನಡೆಯುತ್ತಿದೆ. 2011 ರಲ್ಲಿ ನಗರದ ಚನ್ನಮುಂಬಾಪುರದಲ್ಲಿ ಸಮಾಜದ ವಿದ್ಯಾರ್ಥಿಗಳಿಗೆ ಉಚಿತ ವಿದ್ಯಾರ್ಥಿನಿಲಯವನ್ನು ಸುಮಾರು 50 ವಿದ್ಯಾರ್ಥಿಗಳಿಗೆ ಬಾಡಿಗೆ ಕಟ್ಟಡದಲ್ಲಿ ಆರಂಭಿಸಲಾಯಿತು ಎಂದರು.
ಚನ್ನಮುಂಬಾಪುರದಲ್ಲಿ ಸುಮಾರು 10 ಸಾವಿರ ಚದರಡಿಯ ಜಾಗವನ್ನು ಎಸ್ ಎಸ್ ಜ್ಯೋತಿಪ್ರಕಾಶ್ ದಾನ ಮಾಡಿದ್ದು, ಇಲ್ಲಿ ಸಮಾಜದ ಬಡ ವಿದ್ಯಾರ್ಥಿಗಳಿಗಾಗಿ ಬಿ. ಎಸ್. ಯಡಿಯೂರಪ್ಪ ಉಚಿತ ವಿದ್ಯಾರ್ಥಿ ನಿಲಯವನ್ನು ಸಮಾಜ ಬಾಂಧವರ ಸಹಕಾರದಿಂದ ನಿರ್ಮಿಸಲಾಗಿದೆ. ಕೃಷಿನಗರದಲ್ಲಿ ಸೂಡಾದಿಂದ ನಿವೇಶನ ಪಡೆದು, 2 ಕೋಟಿ ರೂ. ವೆಚ್ಚದಲ್ಲಿ ನಾಲ್ಕು ಮಹಡಿಯ 25 ಕೊಠಡಿಗಳುಳ್ಳ ಮಹಿಳಾ ವಿದ್ಯಾರ್ಥಿನಿಲಯಕ್ಕೆ 2020 ರಲ್ಲಿ ಕಾಮಗಾರಿ ಆರಂಭಿಸಿ 2025 ರಲ್ಲಿ ಕಾಮಗಾರಿ ಮುಗಿಸಿ ಈಗ ಉದ್ಘಾಟನೆಗೆ ಸಜ್ಜಾಗಿದೆ ಎಂದರು.
ಇದರ ಜೊತೆಗೆ ಕಾರ್ಪೋರೇಟ್ ಮಾದರಿಯ ಕಛೇರಿ ಹಾಗೂ ಅತಿಥಿಗೃಹ ನಿರ್ಮಿಸಲಾಗಿದೆ. ಪ್ರತಿವರ್ಷವೂ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸ್ಕೂಲ್ ಬ್ಯಾಗ್, ಶೂ, ಪುಸ್ತಕ-ನೋಟ್ ಪುಸ್ತಕಗಳನ್ನು ವಿತರಿಸಿ, ಪೋಷಕರ ಆರ್ಥಿಕ ಹೊರೆ ಕಡಿಮೆ ಮಾಡುವ ಮೂಲಕ ಸಮಾಜದ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಗೌರವಾಧ್ಯಕ್ಷ ಸಿ.ಜಿ. ಪರಮೇಶ್ವರಪ್ಪ, ನಿರ್ದೇಶಕರಾದ ಕೆ. ಮೋಹನ್‌ಕುಮಾರ್, ಕೆ. ಪ್ರಸನ್ನ, ಕೆ.ವಿ. ಲೋಕೇಶಪ್ಪ, ಎ.ಜಿ. ಸಿದ್ಧಣ್ಣ, ಡಾ. ಟಿ.ಹೆಚ್. ನಟರಾಜ, ಎನ್.ಎಸ್. ಲವಕುಮಾರಸ್ವಾಮಿ, ಹೆಚ್.ಎಸ್. ಸುರೇಶ್ ಇನ್ನಿತರರು ಉಪಸ್ಥಿತರಿದ್ದರು.