ಶಿವಮೊಗ್ಗ, ಅ.04 : ತಾಳಗುಪ್ಪ ದಿಂದ ಶಿವಮೊಗ್ಗಕ್ಕೆ ಬಂದು ಇಲ್ಲಿಂದ ಮೈಸೂರಿಗೆ ಹೊರಟಿದ್ದ ರೈಲು ವೊಂದರ ಬೋಗಿಗಳ ನಡುವಿನ ಸಂಪರ್ಕ ಕಟ್ಟಾಗಿ, ರೈಲಿನ ಬೋಗಿಗಳು ಬೇರ್ಪಟ್ಟ ಘಟನೆ ನಗರದ ಹೊಳೆ ಬಸ್ ಸ್ಟಾಪ್ ಬಳಿ ಬುಧವಾರ ಸಂಜೆ ಸಂಭವಿಸಿದೆ.ಘಟನೆಯಲ್ಲಿ ರೈಲಿನ ಒಂದಷ್ಟು ಬೋಗಿಗಳು ಸೇತುವೆ ಮೇಲೆ ನಿಂತಿದ್ದವು. ಇನ್ನೊಂದಿಷ್ಟು ಬೋಗಿಗಳು ಮಲ್ಲೇಶ್ವರ ರೈಲ್ವೆ ಕ್ರಾಸಿಂಗ್‌ನಲ್ಲಿ ನಿಂತಿದ್ದವು. ಈ ಘಟನೆಯಿಂದಾಗಿ ಸ್ಥಳಿಯರು ಸೇರಿದಂತೆ ಪ್ರಯಾಣಿಕರಲ್ಲಿ ಆತಂಕ ಮೂಡಿಸಿತ್ತು.
ಸಾಮಾನ್ಯವಾಗಿ ರೈಲು, ಸೇತುವೆಗಳ ಸಮೀಪ ಹಾಗೂ ಸೇತುವೆಗಳ ಮೇಲೆ ನಿಧಾನವಾಗಿ ಸಂಚರಿಸುತ್ತವೆ. ಈ ಹಿನ್ನೆಲೆಯಲ್ಲಿ ಇವತ್ತು ಬೋಗಿಗಳು ಬೇರ್ಪಟ್ಟರೂ ಯಾವುದೇ ಅಪಾಯ ಸಂಭವಿಸಿಲ್ಲ. ಸೇತುವೆ ಮೇಲೆ ರೈಲ್ವೆ ಬೋಗಿಗಳು ಬೇರ್ಪಟ್ಟ ಬೆನ್ನಲ್ಲೆ, ಅದನ್ನು ಗಮನಿಸಿದ ಲೋಕೋ ಪೈಲೆಟ್ ತಕ್ಷಣ ರೈಲನ್ನು ನಿಲ್ಲಿಸಿದರು.
ಬಳಿಕ ಸ್ಥಳಕ್ಕೆ ರೈಲ್ವೆ ಸಿಬ್ಬಂದಿ ದೌಡಾಯಿಸಿದ್ದು, ಬೋಗಿಗಳನ್ನು ಮತ್ತೆ ಸೇರಿಸುವ ಕೆಲಸದಲ್ಲಿ ನಿರತರಾದರು. ಆ ವೇಳೆಗಾಗಲೇ ಮಲ್ಲೇಶ್ವರ ಕ್ರಾಸಿಂಗ್‌ನಲ್ಲಿ ನಿಂತಿದ್ದ ಬೋಗಿಗಳನ್ನು ನೋಡಲು ಬರುವವರ ಸಂಖ್ಯೆ ಹೆಚ್ಚಾಯಿತು. ಸ್ಥಳಕ್ಕೆ ಬಂದ ಪೊಲೀಸರು ಜನರನ್ನು ಸ್ಥಳದಿಂದ ತೆರಳುವಂತೆ ಮನವಿ ಮಾಡಿದರು.
45 ನಿಮಿಷಗಳ ಕಾರ್ಯಾಚರಣೆ ನಂತರ ರೈಲ್ವೆ ಸಿಬ್ಬಂದಿಗಳು ಇಂಜಿನ್ ಮತ್ತು ಬೋಗಿಗಳನ್ನು ಸೇರಿಸಿದರು. ಅಂತಿಮವಾಗಿ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳಸಿತು. ಘಟನೆಯಲ್ಲಿ ಆರು ಬೋಗಿಗಳು ಸಂಪರ್ಕ ಕಳೆದುಕೊಂಡಿದ್ದವು.