ಶಿವಮೊಗ್ಗ, ಜ. 17 : ತುಂಗಭದ್ರಾ ನದಿ ತೀರದಲ್ಲಿನಡೆಯುತ್ತಿದ್ದ ಅಕ್ರಮ ಮರಳು ಗಣಿಗಾರಿಕೆ ಅಡ್ಡೆ ಮೇಲೆ, ತಹಶೀಲ್ದಾರ್ ವಿ ಎಸ್ ರಾಜೀವ್ ನೇತೃತ್ವದ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡ, ದಿಢೀರ್ ದಾಳಿಸಿ ಅಪಾರ ಪ್ರಮಾಣದ ಮರಳು ವಶಕ್ಕೆ ಪಡೆದ ಘಟನೆ, ಜ. 16 ರ ಸಂಜೆ ಶಿವಮೊಗ್ಗ ತಾಲೂಕಿನ ಹೊಳೆಹಟ್ಟಿ ಗ್ರಾಮದಲ್ಲಿ ನಡೆದಿದೆ.
ಖಚಿತ ವರ್ತಮಾನದ ಮೇರೆಗೆ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ದಾಳಿಯ ಮಾಹಿತಿ ಅರಿತ ಅಕ್ರಮ ಮರಳು ಗಣಿಗಾರಿಕೆ ನಡೆಸುತ್ತಿದ್ದವರು, ವಾಹನ ಸಮೇತ ಸ್ಥಳದಿಂದ ಪರಾರಿಯಾಗಿದ್ದಾರೆ.
ಸ್ಥಳದಲ್ಲಿ ಸುಮಾರು 25 ಟನ್ ನಷ್ಟು ಮರಳು ಮರಳು ವಶಕ್ಕೆ ಪಡೆಯಲಾಗಿದೆ. ಸದರಿ ಮರಳನ್ನು ಲೋಕೋಪಯೋಗಿ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ. ದಾಳಿಯ ವೇಳೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ಇಲಾಖೆ ಸೇರಿದಂತೆ ಕಂದಾಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
ಅಕ್ರಮ ಮರಳುಗಾರಿಕೆಗೆ ಅವಕಾಶ ಕೊಡಿ ಎಂದ ಗ್ರಾಮಸ್ಥರು:
ಅಧಿಕಾರಿಗಳ ತಂಡದ ದಾಳಿಯ ಮಾಹಿತಿ ಅರಿತ ಕೆಲ ಗ್ರಾಮಸ್ಥರು ಸ್ಥಳಕ್ಕಾಗಮಿಸಿ, ವಶಕ್ಕೆ ಪಡೆದ ಮರಳು ಬಿಡುವಂತೆ ಹಾಗೂ ಅಕ್ರಮ ಗಣಿಗಾರಿಕೆ ನಡೆಸಲು ಅವಕಾಶ ನೀಡುವಂತೆ ತಹಶೀಲ್ದಾರ್ ಅವರಿಗೆ ಮನವಿ ಮಾಡಿದ ಘಟನೆಯೂ ನಡೆದಿದೆ.
ತಹಶೀಲ್ದಾರ್ ವಿ ಎಸ್ ರಾಜೀವ್ ಮಾತನಾಡಿ, ‘ನಿಯಮಕ್ಕೆ ವಿರುದ್ಧವಾಗಿ ಮಾತನಾಡುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಅಕ್ರಮ ಮರಳು ಗಣಿಗಾರಿಕೆ ನಡೆಸಬಾರದು. ನಿಯಮಿತವಾಗಿ ದಿಢೀರ್ ದಾಳಿ ನಡೆಸಲಾಗುವುದು. ಅಕ್ರಮ ನಡೆಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.