ವರದಿ: ಸನತ್, ಶಿವಮೊಗ್ಗ
ಮಲೆನಾಡಿನಲ್ಲಿ ಮತ್ತೆ ಬೀದಿ ನಾಯಿಗಳ ಹಾವಳಿ ಮರುಕಳಿಸಿದೆ. ಇಡೀ ಊರನ್ನೇ ತಮ್ಮ ಸಾಮ್ರಾಜ್ಯ ಮಾಡಿಕೊಂಡಿದ್ದು ನಾಗರಿಕರಲ್ಲಿ ನಡುಕ ಹುಟ್ಟಿಸಿವೆ. ಯಾವ ಕ್ಷಣದಲ್ಲಿ ದಾಳಿ ನಡೆಸುತ್ತವೆ ಎಂಬುದನ್ನು ಊಹಿಸಲು ಸಾಧ್ಯವಾಗುತ್ತಿಲ್ಲ.ಕಳೆದ ನಾಲ್ಕೈದು ತಿಂಗಳಿನಿಂದ ಬೀದಿನಾಯಿಗಳ ಹಾವಳಿ ನಿಯಂತ್ರಣಕ್ಕೆ ಎಷ್ಟೇ ಪತ್ರಿಕೆಗಳಲ್ಲಿ ಬರೆದರು ಯಾವ ಕ್ರಮವು ಪಾಲಿಕೆಯವರು ತೆಗೆದುಕೊಳ್ಳುತ್ತಿಲ್ಲ. ಯಾವ ಬೀದಿಯಲ್ಲಿ ನಾಯಿಗಳಿಲ್ಲ ಎಂದು ಹುಡುಕುವ ಪರಿಸ್ಥಿತಿ ಬಂದಿದೆ.
ನಗರದ ವೆಂಕಟೇಶ ನಗರ , ಶರಾವತಿ ನಗರ , ಅಣ್ಣಾನಗರ , ತಿಲಕ್ ನಗರ ,ಎಲ್‌ಬಿಎಸ್ ನಗರ , ವಿನೋಬನಗರ , ಅಶೋಕ್ ನಗರ , ಗೋಪಾಳ ,ಬಸವನಗುಡಿ, ಹೊಸಮನೆ , ರವೀಂದ್ರ ನಗರ , ರಾಜೇಂದ್ರ ನಗರ , ಜಯನಗರ , ಟ್ಯಾಂಕ್ ಮೊಹಲ್ಲಾ ಇನ್ನು ಹಲವಾರು ಏರಿಯಾಗಳಲ್ಲಿ ಬೀದಿ ನಾಯಿಗಳ ಕಾಟ ಹೇಳುವಂತಿಲ್ಲ ಎನ್ನುವಂತಾಗಿದೆ.
ಇನ್ನು ಬಹುತೇಕ ಕಡೆ ಮಕ್ಕಳೇ ನಿರಂತರವಾಗಿ ಬೀದಿ ನಾಯಿಗಳ ದಾಳಿಗೆ ಒಳಗಾಗುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ಮೊನ್ನೆ ಶಿಕಾರಿಪುರದ ಖಾಸಗಿ ಶಾಲೆಯೊಂದರ ಯುಕೆಜಿ ವಿದ್ಯಾರ್ಥಿನಿಯೊಬ್ಬಳಿಗೆ ಶಿಕಾರಿಪುರ ಪಟ್ಟಣದಲ್ಲಿ ನಾಯಿಗಳು ದಾಳಿ ಮಾಡಿ ಗಾಯಗೊಳಿಸಿವೆ. ದಾಳಿಯಿಂದ ಬಾಲಕಿ ಮುಖದ ಮೇಲೆ ಗಂಭೀರ ಗಾಯಗಳಾಗಿವೆ ನಂತರ ಶಿವಮೊಗ್ಗದ ಆಸ್ಪತ್ರೆಗೆ ಮಗುವನ್ನು ದಾಖಲಿಸಲಾಗಿದೆ.ಹೀಗೆ ನಾಯಿಗಳ ಆಟ್ಟಹಾಸ ಮಿತಿಮೀರಿದೆ.
ಖಾಲಿ ನಿವೇಶನ ಹಾಗೂ ಮೋರಿಗಳು ಹೆಚ್ಚಾಗಿರುವ ಪ್ರದೇಶದ ನಿವಾಸಿಗಳ ನಿದ್ದೆಗೆಡಿಸಿವೆ. ಗುಂಪಾಗಿ ಓಡಾಡುವ ನಾಯಿಗಳು ಹೆಚ್ಚಾಗಿ ಮಕ್ಕಳು, ಮಹಿಳೆಯರು ಹಾಗೂ ವೃದ್ಧರ ಮೇಲೆ ದಾಳಿ ನಡೆಸಿ, ಕಚ್ಚಿ ಗಾಯಗೊಳಿಸುವುದು ಮಾಮೂಲಿ ಎಂಬಂತಾಗಿದೆ.ಮನೆಯ ಮುಂಭಾಗ ನಾಯಿಗಳ ಹಿಂಡು ಸದಾ ಇರುತ್ತವೆ. ಚಿಕ್ಕಮಕ್ಕಳು ಮನೆಯ ಅಂಗಳದಲ್ಲಿ ನೆಮ್ಮದಿಯಾಗಿ ಆಟವಾಡದ ಸ್ಥಿತಿ ನಿರ್ಮಾಣವಾಗಿದೆ. ಕೈಯಲ್ಲಿ ತಿಂಡಿ ತಿನಿಸುಗಳಿದ್ದರೆ ಏಕಾಏಕಿ ದಾಳಿ ನಡೆಸುತ್ತಿವೆ. ದಿನದ 24 ಗಂಟೆ ದ್ವಿಚಕ್ರ ವಾಹನ ಸವಾರರ ಮೇಲೆ ಏಕಾಏಕಿ ಎರಗುತ್ತಿವೆ.
ಇನ್ನು ಬಹುತೇಕ ಬಡಾವಣೆಗಳಲ್ಲಿ ಮನೆಯ ಕಾಂಪೌಂಡ್‌ಗಳನ್ನು ಆಶ್ರಯ ತಾಣವಾಗಿಸಿಕೊಂಡಿವೆ.
ಕೆಲವರ ಕಾಂಪೌಂಡ್ ಒಳಗೆ ಬರುವ ನಾಯಿಗಳು ಮಲ, ಮೂತ್ರ ವಿಸರ್ಜಿಸಿ ಗಲೀಜು ಮಾಡುವುದು ಸಾಮಾನ್ಯವಾಗಿದೆ.ಪಟ್ಟಣದ ಎಲ್ಲಾ ವಾರ್ಡ್‌ಗಳಲ್ಲಿಯೂ ಬೀದಿನಾಯಿಗಳ ಹಿಂಡುಗಳು ಕಂಡು ಬರುತ್ತಿವೆ. ಹೀಗೆ ಗುಂಪಲ್ಲಿರುವ ನಾಯಿಗಳು ಜನ ಓಡಾಡುವಾಗ ಮತ್ತು ವಾಹನ ಚಲಾಯಿಸುವ ವೇಳೆ ಬೊಗಳುತ್ತಾ ಹಿಂಬಾಲಿಸುತ್ತವೆ. ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ,ವಯೋವೃದ್ಧರು ವಾಯು ವಿಹಾರಕ್ಕೆ ,ಮಹಿಳೆಯರು ತರಕಾರಿ ದಿನಸಿ ಸಾಮಗ್ರಿಗಳಿಗಾಗಿ ತೆರಳುವಾಗಲು ಕಾಟ ಹೆಚ್ಚಿದೆ.ಬೆಳಿಗ್ಗೆ ಪೇಪರ್ ಹಾಕುವ ಹುಡಗರಿಗಂತೂ ಇದರ ಉಪಟಳ ತಪ್ಪಿದಲ್ಲ. ಕೈಯಲ್ಲಿ ಬ್ಯಾಗ್ ಪ್ಲಾಸ್ಟಿಕ್ ಕವರು ನೋಡಿದರೆ ದಾಳಿ ಮಾಡಿ ಕಿತ್ತುಕೊಳ್ಳುತ್ತಿವೆ. ಇಂತಹ ಘಟನೆಯಲ್ಲಿ ಹಲವು ಮಂದಿ ಬಿದ್ದು ಗಾಯಗೊಂಡಿದ್ದಾರೆ. ಸೈಕಲ್ ಮತ್ತು ಬೈಕ್‌ಗಳು ಸಂಚರಿಸುವಾಗ ಹಿಂಬಾಲಿಸಿಕೊಂಡು ಬಂದು ದಾಳಿ ನಡೆಸುತ್ತವೆ. ಇದರಿಂದ ಜನರು ಹೈರಾಣಾಗಿದ್ದಾರೆ.
ಇನ್ನು ತಿಲಕ್ ನಗರದಲ್ಲಿ ಸರತಿ ಸಾಲಿನಲ್ಲಿರುವ ಮಾಂಸದ ಹೋಟೆಲ್ ಗಳ ಬಳಿ ಅಂತೂ ನಾಯಿಗಳ ಅಡ್ಡೆಯಾಗಿದೆ. ರಾತ್ರಿ ವೇಳೆ ನಾಯಿಗಳ ಕೂಗಾಟ ಚೀರಾಟದಿಂದ ನೆಮ್ಮದಿಯ ನಿದ್ದೆ ಮಾಡಲು ಸಾಧ್ಯವಾಗುವುದಿಲ್ಲ. ಇನ್ನಾದರು ಪಾಲಿಕೆಯವರು ನಾಯಿಗಳ ಉಪಟಳಕ್ಕೆ ಕಡಿವಾಣ ಹಾಕಬೇಕು ಎಂದು ನಮ್ಮ ಮನವಿ.
ಬೀದಿ ನಾಯಿಗಳ ಹಾವಳಿಗೆ ಬೆವರಿಳಿಸಿದ ಸಾರ್ವಜನಿಕರು
ಬೀದಿ ನಾಯಿಗಳ ಹಾವಳಿಗೆ ಜನರು ಬೇಸತ್ತು ಹೋಗಿದ್ದು ಇವುಗಳ ತಡೆಗೆ ನಗರ ಪಾಲಿಕೆಯವರು ಕಿಂಚಿತ್ತು ಕ್ರಮ ಕೈಗೊಳ್ಳದಿರುವ ಬಗ್ಗೆ ಸಾರ್ವಜನಿಕರು ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿ ಬೀದಿಯಲ್ಲೂ ಹತ್ತಾರು ನಾಯಿಗಳ ಹಿಂಡು ಕಚ್ಚಾಡುತ್ತಾ ಜನರಿಗೆ ಕಿರಿಕಿರಿ ಮಾಡುತ್ತಿವೆ. ಮಕ್ಕಳು ಮಹಿಳೆಯರು ಹಾಗೂ ವೃದ್ಧರು ಮತ್ತು ದ್ವಿಚಕ್ರ ವಾಹನ ಸವಾರರು ರಸ್ತೆಯಲ್ಲಿ ಸಂಚರಿಸುವುದೇ ದುಸ್ತರವಾಗಿದೆ. ಕೆಲ ನಾಯಿಗಳಿಗೆ ಗಂಭೀರವಾದ ಗಾಯಗಳಾಗಿವೆ. ಗಾಯಗೊಂಡ ಜಾಗದಲ್ಲಿ ಹುಳುಗಳಾಗಿ ದುರ್ನಾತ ಬೀರುತ್ತಿದ್ದು ಕೆಲ ನಾಯಿಗಳಿಗೆ ರೇಬಿಸ್ ತಗುಲಿವೆ ಎಂಬುದು ಸಾರ್ವಜನಿಕರ ಆರೋಪವಾಗಿದೆ.
“ಮುಂಜಾನೆ ಪತ್ರಿಕೆ ವಿತರಣೆ ಕಷ್ಟವಾಗಿದೆ. ರಸ್ತೆಗಳಲ್ಲಿ ಗುಂಪಾಗಿ ಬರುವ ನಾಯಿಗಳು ಏಕಾಏಕಿ ದಾಳಿ ನಡೆಸುತ್ತವೆ. ಇವುಗಳ ನಿಯಂತ್ರಣಕ್ಕೆ ಕ್ರಮವಹಿಸಬೇಕು ಇಲ್ಲದಿದ್ದರೆ ಪೇಪರ್ ಹಾಕಲು ಹುಡುಗರೇ ಬರದಿರುವ ಸ್ಥಿತಿ ನಿರ್ಮಾಣವಾಗಲಿದೆ.”
-ಧನಂಜಯ (ಅರುಣ್) , ಪತ್ರಿಕಾ ವಿತರಕರು ,ಶಿವಮೊಗ್ಗ
“ಕೋಳಿ ಮಾಂಸದ ಅಂಗಡಿಗಳ ತ್ಯಾಜ್ಯ,ಮನೆಯ ಕಸಗಳನ್ನು ಎಲ್ಲೆಂದರಲ್ಲಿ ಬಿಸಾಡುತ್ತಿದ್ದು ಇದರಿಂದ ಬೀದಿನಾಯಿಗಳ ಹಾವಳಿ ಹೆಚ್ಚಾಗಲು ಕಾರಣವಾಗಿದೆ”.
-ದರ್ಶನ್.ಟಿ.ಹೆಚ್., ಸಮಾಜ ಸೇವಕರು , ಶಿವಮೊಗ್ಗ
