ಬೆಂಗಳೂರು,ಡಿ.27 :ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಹಾಲಿ ಅಧ್ಯಕ್ಷ ಸಿ.ಎಸ್. ಷಡಾಕ್ಷರಿ ಅವರು ಪುನರಾಯ್ಕೆಯಾಗಿದ್ದಾರೆ.
ಷಡಾಕ್ಷರಿ ಅವರು 507 ಮತಗಳು ಹಾಗೂ ಬಿ.ಪಿ. ಕೃಷ್ಣೇಗೌಡ ಅವರು 442 ಮತಗಳನ್ನು ಪಡೆದರು. ಷಡಾಕ್ಷರಿ ಅವರು 65 ಮತಗಳ ಅಂತರದಿಂದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ. ಹನುಮನರಸಯ್ಯ ಘೋಷಿಸಿದರು.
ಖಜಾಂಚಿ ಸ್ಥಾನಕ್ಕೆ ಶಿವರುದ್ರಯ್ಯ ವಿ.ವಿ. ಆಯ್ಕೆ:
ಖಜಾಂಚಿ ಸ್ಥಾನಕ್ಕೆ ರ್ಸ್ಪಸಿದ್ದ ಷಡಾಕ್ಷರಿ ಬಣದ ನಾಗರಾಜ ಆರ್. ಜುಮ್ಮನ್ನವರ ಅವರು ಸೋಲು ಕಂಡಿದ್ದು, ಕೃಷ್ಣೇಗೌಡ ಬಣದ ಶಿವರುದ್ರಯ್ಯ ವಿ.ವಿ. 18 ಮತಗಳ ಅಂತರದಿಂದ ಆಯ್ಕೆಯಾಗಿದ್ದಾರೆ. ಶಿವರುದ್ರಯ್ಯ 485 ಮತಗಳನ್ನು ಪಡೆದರೆ, ನಾಗರಾಜ ಅವರು 467 ಪಡೆದರು.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಶಾಖೆಯಿಂದ ಆರಂಭ ಗೊಂಡು ರಾಜ್ಯ ಸಂಘದ ಅಧ್ಯಕ್ಷರು, ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆ ಸೆ. 17 ರಿಂದ ವಿವಿಧ ಹಂತದಲ್ಲಿ ಆರಂಭವಾಗಿತ್ತು. ಮೊದಲ ಹಂತದಲ್ಲಿ ಮೂರು ಶೈಕ್ಷಣಿಕ ಜಿಲ್ಲೆ ಒಳಗೊಂಡ 33 ಜಿಲ್ಲೆಗಳು ಹಾಗೂ 191 ತಾಲ್ಲೂಕುಗಳ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆದಿತ್ತು. ನಂತರ ಆಯಾ ತಾಲ್ಲೂಕು ಹಾಗೂ ಜಿಲ್ಲಾ ಘಟಕಗಳ ಅಧ್ಯಕ್ಷರು, ಖಜಾಂಜಿ ಹಾಗೂ ರಾಜ್ಯ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲಾಗಿತ್ತು.
ತಾಲ್ಲೂಕು, ಜಿಲ್ಲಾ ಘಟಕಗಳ ತಲಾ ನಾಲ್ವರು ಪದಾಕಾರಿಗಳು ಸೇರಿದಂತೆ ಬೆಂಗಳೂರು ನಗರ ವ್ಯಾಪ್ತಿಯ ೧೦೨ ರಾಜ್ಯ ಪರಿಷತ್ ಸದಸ್ಯರು ಹಾಗೂ ಎಂಟು ಯೋಜನಾ ಘಟಕಗಳ ಪದಾಕಾರಿಗಳು ಶುಕ್ರವಾರ ಕಬ್ಬನ್ ಉದ್ಯಾನದ ನೌಕರರ ಸಂಘದ ಕಚೇರಿ ಆವರಣದಲ್ಲಿ ನಡೆದ ಚುನಾವಣೆಯಲ್ಲಿ ಮತ ಚಲಾಯಿಸಿದರು. ಮತದಾನದ ನಂತರ ಮತ ಎಣಿಕೆ ಕಾರ್ಯ ನಡೆಯಿತು.