ಕ್ರೀಡಾ ಶಿಕ್ಷಕರೇ ಕ್ರೀಡಾಪಟುಗಳಾಗಿರುವುದು ಸಂತಸ

Kranti Deepa

ಶಿವಮೊಗ್ಗ,ನ.25 : ಕ್ರೀಡಾ ಶಿಕ್ಷಕರೇ ಕ್ರೀಡಾಪಟುಗಳಾಗಿ ಪಂದ್ಯದಲ್ಲಿ ಪಾಲ್ಗೊಳ್ಳುತ್ತಿರುವುದು ಅತ್ಯಂತ ಸಂತೋಷದ ವಿಷಯವಾದರೂ ಇದೊಂದು ವಿನೂತನ ಪ್ರಯೋಗ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸಾಯಿನಾಥ ಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ನೆಹರು ಕ್ರೀಡಾಂಗಣದಲ್ಲಿ ನಗರದ ಹೆಸರಾಂತ ದೈಹಿಕ ಶಿಕ್ಷಕ ಫಿಲೋಮಿನ್ ರಾಜ್ ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ದೈಹಿಕ ಶಿಕ್ಷಣದ ಶಿಕ್ಷಕರಿಗೆ ಜಿಲ್ಲಾ ಮಟ್ಟದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಹೆಸರಾಂತ ದೈಹಿಕ ಶಿಕ್ಷಕರಾಗಿ ತಮ್ಮದೇ ಛಾಪು ತೋರಿಸಿದ್ದ ಫಿಲೋಮಿನಾರಾಜ್ ರವರ ಹೆಸರಿನಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಿಗೆ ಈ ಕ್ರೀಡಾಕೂಟವನ್ನು ಏರ್ಪಡಿಸಿರುವುದು ಸಹ ಅಷ್ಟೇ ಸಮಯೋಚಿತವಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳಿಗೆ ಕಲಿಸುವ ಸಂದರ್ಭದಲ್ಲಿ ಶಿಕ್ಷಕರಾಗಿ, ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ಕ್ರೀಡಾಪಟುಗಳಾಗಿ ಭಾಗವಹಿಸಿ ಪಾಲ್ಗೊಳ್ಳುತ್ತಿರುವ ನಿಮ್ಮ ಮನಸ್ಸಿನ ಸ್ಥಿತಿ ಮೆಚ್ಚುವಂತೆ ಇದೊಂದು ವಿಶೇಷ  ಕ್ರೀಡಾಕೂಟವಾಗಿದೆ. ಇದು ದೈಹಿಕ ಶಿಕ್ಷಣ ಶಿಕ್ಷಕರಿಗೆ ಒಂದು ಸವಾಲೆ ಎಂದು ಭಾವಿಸುತ್ತೇನೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಶಿವಮೊಗ್ಗ ಟ್ರಸ್ಟ್ ಅಧ್ಯಕ್ಷ ಹಾಗೂ ಕ್ರಾಂತಿದೀಪ ಪತ್ರಿಕೆಯ ಎನ್.ಮಂಜುನಾಥ್ ಮಾತನಾಡಿ, ಫಿಲೋಮಿನಾರಾಜ್‌ರವರು ತಮ್ಮ ಜೀವಿತಾವಧಿಯ ಹೆಚ್ಚು ದಿನಗಳನ್ನು ಕ್ರೀಡಾಂಗಣದಲ್ಲಿ ಕಳೆದಿದ್ದಾರೆ . ಆ ಮೂಲಕ ಕ್ರೀಡಾ ಕ್ಷೇತ್ರಕ್ಕೆ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಒಂದು ಲಕ್ಷಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಕ್ರೀಡಾ ತರಬೇತಿಯನ್ನು ನೀಡಿದ್ದಾರೆ. ಆ ಮೂಲಕ ಕ್ರೀಡಾಕ್ಷೇತ್ರದಲ್ಲಿ ತಮ್ಮದೇ ಆದ ಚಾಪನ್ನ ಮೂಡಿಸಿದ್ದರು ಎಂದು ಸ್ಮರಿಸಿದರು.

ಫಿಲೋಮಿನಾರಾಜ್ ರವರು ನನ್ನನ್ನು ಪತ್ರಕರ್ತನಾಗಿ ನೋಡಿದ್ದಕ್ಕಿಂತ ಹೆಚ್ಚಾಗಿ ಕ್ರೀಡಾಪಟುವಾಗಿ ಪ್ರೀತಿಸಿದ್ದೇ ಹೆಚ್ಚು. ಆ ಕ್ಷೇತ್ರದಲ್ಲಿಯೇ ನನ್ನನ್ನ ಆತ್ಮೀಯವಾಗಿ ಕಾಣುತ್ತಿದ್ದರು. ಅಂದರೆ ಅದು ಅವರ ಕ್ರೀಡಾಕ್ಷೇತ್ರದ ಅಭಿಮಾನವನ್ನು ತೋರಿಸುತ್ತದೆ ಎಂದ ಅವರು ಇಂದಿಗೂ ಸಹ ಲೋಮಿನಾ ರಾಜ್‌ರವರ ಆತ್ಮ ಇದೆ ಕ್ರೀಡಾಂಗಣದಲ್ಲಿ ಓಡಾಡುತ್ತಿದೆ ಎಂದರೆ ತಪ್ಪಾಗಲಾರದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಾಜಿ ಸದಸ್ಯ ಎಚ್ ಸಿ ಯೋಗೇಶ್, ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಮಂಜುನಾಥ್ , ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪ್ರಕಾಶ್, ಪುಟ್ಬಾಲ್ ಅಸೋಸಿಯೇಷನ್ ಅಧ್ಯಕ್ಷ ಶ್ರೀನಾಥ್, ಯುವಜನ ಕ್ರೀಡಾ ಇಲಾಖೆಯ ಅಧಿಕಾರಿ ಲೋಕ್ಯಾನಾಯ್ಕ್  ಇತರರು ಉಪಸ್ಥಿತರಿದ್ದರು.

Share This Article
";