ಶಿವಮೊಗ್ಗ ,ಜ.14 : ಬೇಡಿದ ವರವ ಕರುಣಿಸುವ ದೇವಿ ಎಂದೇ ಭಕ್ತರಿಂದ ಪೂಜಿಸಲ್ಪಡುವ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಿಯ ಸಂಕ್ರಾಂತಿ ಜಾತ್ರ ಮಹೋತ್ಸವ ಬುಧವಾರ ಸಂಭ್ರಮದಿಂದ ಆರಂಭವಾಯಿತು. ಚೌಡಮ್ಮ ದೇವಿಯ ಮೂಲಸ್ಥಾನ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸೀಗೆ ಕಣಿವೆಯಲ್ಲಿ ಬೆಳಗ್ಗೆಯಿಂದ ಚಂಡಿಕಾ ಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿವಿಧಾನಗಳು ಜರುಗಿದವು.
ಸೀಗೆ ಕಣಿವೆಯ ಮೂಲ ಸ್ಥಳದಲ್ಲಿ ಹಿನ್ನೀರು ಇಳಿದಿದ್ದು, ಮೂಲ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಶಿಲಾ ಮಂಟಪದೊಳಗೆ ಮೂಲ ಮೂರ್ತಿಗೆ ಅಭಿಷೇಕ ಪೂಜೆಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ಅನುವಂಶಿಕ ಧರ್ಮದರ್ಶಿ ಡಾ.ಎಸ್. ರಾಮಪ್ಪ ,ಮೀನಾಕ್ಷಮ್ಮ ದಂಪತಿ ಹಾಗೂ ಅವರ ಪುತ್ರರಾದ ರವಿಕುಮಾರ್ ದಂಪತಿ ಅವರು ಚಂಡಿಕಾ ಹೋಮದಲ್ಲಿ ಭಾಗಿಯಾಗಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಹಾಗೂ ಕರೂರು ಮತ್ತು ಬಾರಂಗಿ ಹೋಬಳಿಯ ಜನರು ಭಾಗಿಯಾಗಿ
ಪೂಜಾ ಕಾರ್ಯಕ್ರಮ ವೀಕ್ಷಿಸಿದರು. ಇದಾದ ಬಳಿಕ ಶರಾವತಿ ಹಿನ್ನೀರಲ್ಲಿಯೇ ನಿರ್ಮಾಣ ಮಾಡಿರುವ ಶಿಲಾಮಂಟಪದಲ್ಲಿ ಅಭಿಷೇಕ ಹಾಗೂ ವಿವಿಧ ಧಾರ್ಮಿ ವಿವಿಧಾನಗಳನ್ನು ಧರ್ಮದರ್ಶಿಗಳ ಕುಟುಂಬದ ಸಮ್ಮುಖದಲ್ಲಿ ಅರ್ಚಕರು ನೆರವೇರಿಸಿದರು. ಶರಾವತಿ ನದಿ ತಟದಲ್ಲಿ ನಡೆದ ಈ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರೂ ಸೇರಿದಂತೆ ಸಹಸ್ರಾರು ಜನರು ಸಾಕ್ಷಿಯಾದರು.
ದೇವಿಯ ಮೂಲ ಸ್ಥಾನದಲ್ಲಿ ನಡೆದ ಪೂಜೆಯ ಬಳಿಕ ಜ್ಯೋತಿಯೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಸಿಗಂದೂರು ದೇವಸ್ಥಾನಕ್ಕೆ ಕರೆತರಲಾಯಿತು. ಶಾಸಕ ಬೇಳೂರು ಗೋಪಾಲಕೃಷ್ಣ ಮತ್ತು ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್ ಜ್ಯೋತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಧರ್ಮದರ್ಶಿ ಡಾ. ಎಸ್.ರಾಮಪ್ಪ. ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಸ್ಥಳೀಯ ಜನಪ್ರತಿನಿಗಳು, ಮುಖಂಡರು ಭಾಗವಹಿಸಿದ್ದರು.
ಸಿಗಂದೂರು ಚೌಡಮ್ಮ ದೇವಿ ದೇವಸ್ಥಾನ ಅಭಿವೃದ್ಧಿಯ ಹಿಂದೆ ಶರಾವತಿ ಮುಳುಗಡೆಯ ಕರುಣಾಜನಕ ಕತೆಯೂ ಇದೆ. ರಾಮಪ್ಪ ಅವರ ಪರಿಶ್ರಮದಿಂದಾಗಿ ಕ್ಷೇತ್ರ ಇಂದು ಪ್ರಸಿದ್ದಿಯಾಗಿದೆ. ಚೌಡೇಶ್ವರಿ ತಾಯಿಯ ಅಪಾರವಾದ ಶಕ್ತಿ ಈ ಎಲ್ಲ ಕೆಲಸವನ್ನು ಮಾಡಿಸಿದೆ. ಭಕ್ತರ ಇಷ್ಟಾರ್ಥ ಈಡೇರಿಸುವ ತಾಯಿಯ ಕೃಪೆ ನಾಡಿನ ಜನರ ಮೇಲಿರಲಿ. ಎಲ್ಲರ ಬಾಳಲ್ಲಿ ಸಂಕ್ರಮಣ ಸಂಭ್ರಮಿಸಲಿ
-ಶ್ರೀ ಯೋಗೇಂದ್ರ ಅವಧೂತರು,
ಶ್ರೀಕ್ಷೇತ್ರ ಕಾರ್ತಿಕೇಯ ಪೀಠ
ಸಿಗಂದೂರು ಚೌಡೇಶ್ವರಿ ನಾಡದೇವತೆಯಾಗಿ ಜನರನ್ನು ಪೊರೆವ ಪವಿತ್ರ ಪುಣ್ಯ ಕ್ಷೇತ್ರ ಇದಾಗಿದೆ. ಈ ದೇವಾಲಯವನ್ನು ಇಷ್ಟು ದೊಡ್ಡ ಮಟ್ಟದಲ್ಲಿ ಬೆಳೆಸಿರುವ ರಾಮಪ್ಪ ಅವರ ಸಾಧನೆ ಬಹುದೊಡ್ಡದು. ಅವರ ಶ್ರಮದಿಂದಾಗಿ ಇಂದು ಈ ಕ್ಷೇತ್ರ ಪ್ರಸಿದ್ಧಿಯಾಗಿದೆ. ಭಕ್ತ ಜನರು ಅವರೊಂದಿಗೆ ಯಾವತ್ತೂ ನಿಲ್ಲುತ್ತಾರೆ.
-ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ,
ಕಡೇನಂದಿಹಳ್ಳಿ ಮಠ
