ಹೊಸಪೇಟೆ ,ಜ.10 : ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ, ಸಿದ್ದರಾಮಯ್ಯ ಅವರೇ ಪೂರ್ತಿ ಐದು ವರ್ಷ ಮುಖ್ಯ ಮಂತ್ರಿ ಆಗಿರುತ್ತಾರೆ ಎಂದು ಬೃಹತ್ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಶುಕ್ರವಾರ ಸಿರಸಂಗಿ ಲಿಂಗರಾಜ ದೇಸಾಯಿ ಅವರ 164 ನೇ ಜಯಂತ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ರಾಜ್ಯ ಮಟ್ಟದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ, ಎರಡೂವರೆ ವರ್ಷದ ಬಳಿಕ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಗ್ಗೆ ಯಾವ ಒಪ್ಪಂದ ಆಗಿರುವ ಬಗ್ಗೆ ನನಗೆ ಮಾಹಿತಿ ಇಲ್ಲ, ಪೂರ್ತಿ ಅವಗೆ ಸಿದ್ದರಾಮಯ್ಯ ಅವರೇ ಸಿಎಂ ಆಗಿರುತ್ತಾರೆ ಎಂದರು.
ಡಿನ್ನರ್ ಪಾರ್ಟಿ ಮಾಡುವುದರಲ್ಲಿ ತಪ್ಪೇನಿಲ್ಲ, ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯ ಇಲ್ಲ ಎಂದರು.
ಕನ್ನಡ ವಿವಿ ನೆಲ ಸಂರಕ್ಷಣೆಗೆ ಬದ್ಧ: ಹಂಪಿ ಕನ್ನಡ ವಿಶ್ವವಿದ್ಯಾಲಯ ಸಮೀಪ ನಿರ್ಮಾಣವಾಗಲಿರುವ ರೆಸಾರ್ಟ್ ಒಂದಕ್ಕಾಗಿ ವಿಶ್ವವಿದ್ಯಾಲಯಕ್ಕೆ ಒಳಪಟ್ಟ ಸ್ಥಳ ಕಬಳಿಸಲು ಅವಕಾಶ ನೀಡುವುದಿಲ್ಲ, ಕೆಐಎಡಿಬಿ ಈ ನಿಟ್ಟಿನಲ್ಲಿ ನೋಟಿಸ್ ನೀಡಿದ್ದರೂ ವಿಶ್ವವಿದ್ಯಾಲಯಕ್ಕೆ ಸೇರಿದ ಸ್ಥಳಕ್ಕೆ ಚ್ಯುತಿ ಬರಲು ಬಿಡುವುದಿಲ್ಲ ಎಂದರು.