ಶಿವಮೊಗ್ಗ, ಸೆ. 3: ಶಿವಮೊಗ್ಗ ಪಾಲಿಕೆ ವ್ಯಾಪ್ತಿ ಪರಿಷ್ಕರಣೆ ಕುರಿತಂತೆ ಸಕಾಲದಲ್ಲಿ ವರದಿ ಸಲ್ಲಿಸುವಲ್ಲಿ ವಿಫಲರಾಗಿರುವ ಹಾಗೂ ನಿರ್ಲಕ್ಷ್ಯ ಧೋರಣೆ ತಳೆದಿರುವ ಆರೋಪದ ಮೇರೆಗೆ ಏಳು ಅಧಿಕಾರಿಗಳಿಗೆ ಶೋಕಾಸ್ ನೋಟೀಸ್ ನೀಡಿ ನಿಮ್ಮ ವಿರುದ್ಧ ಏಕೆ ಕಾನೂನು ಕ್ರಮ ಜರುಗಿಸಬಾರದೆಂದು ಆಯುಕ್ತರು ನೋಟಿಸ್ ನೀಡಿರುವ ಘಟನೆ ವರದಿಯಾಗಿದೆ.
ಪಾಲಿಕೆಯ ಆಡಳಿತ, ಅಭಿವೃದ್ಧಿ, ಕಂದಾಯ ವಿಭಾಗದ ಮೂವರು ಉಪ ಆಯುಕ್ತರು, ಸಹಾಯಕ ಪಟ್ಟಣ ಯೋಜನಾಧಿಕಾರಿ,ಪರಿಷತ್ ಕಾರ್ಯದರ್ಶಿ, ಎಸ್ಟೇಟ್ ಹಾಗೂ ಸರ್ವೇಯರ್‌ಗೆ ಆ. 30 ರಂದು ಆಯುಕ್ತರು ನೋಟೀಸ್ ಜಾರಿಮಾಡಿದ್ದಾರೆ.
ಆಯುಕ್ತರು ಹೊರಡಿಸಿರುವ ನೋಟೀಸ್ ನಲ್ಲಿರುವ ವಿವರ ಈ ರೀತಿ ಇದೆ. ಪೌರಾಡಳಿತ ನಿರ್ದೇಶನಾಲಯದ ಪತ್ರದ ಅನುಸಾರ ಶಿವಮೊಗ್ಗ ಮಹಾನಗರ ಪಾಲಿಕೆ ಗಡಿ ವಿಸ್ತರಿಸುವುದಕ್ಕಾಗಿ, ಕರ್ನಾಟಕ ಮಹಾನಗರ ಪಾಲಿಕೆ ಅಧಿನಿಯಮ 1976 ರ ಅನ್ವಯ ಪರಿಶೀಲಿಸಿ ಅಗತ್ಯ ಮಾಹಿತಿಗಳೊಂದಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ. ಅದರಂತೆ ಸರ್ಕಾರಕ್ಕೆ ಸೂಕ್ತ ಸಮಯದಲ್ಲಿ ಪ್ರಸ್ತಾವನೆ ಸಲ್ಲಿಸಲು ಪಾಲಿಕೆಯ 7 ಅಧಿಕಾರಿಗಳ ಕ್ರಿಯಾ ಸಮಿತಿ ರಚಿಸಿ, ನಿಯಮಾನುಸಾರ ಪರಿಶೀಲಿಸಿ ನಿಗದಿತ ಕಾಲಮಿತಿಯೊಳಗೆ ಆಯುಕ್ತರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಸೂಚಿಸಲಾಗಿರುತ್ತದೆ.
ಇಲ್ಲಿಯವರೆಗೂ ಮಹಾನಗರ ಪಾಲಿಕೆ ಗಡಿ ವಿಸ್ತರಿಸುವ ಕುರಿತಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸುವ ಯಾವುದೇ ಬೆಳವಣಿಗೆಯಾಗಿಲ್ಲ.ಅತ್ಯಂತ ತುರ್ತು ವಿಷಯದ ಬಗ್ಗೆ ಯಾವುದೇ ರೀತಿಯ ನಿರ್ಲಕ್ಷ್ಯ ತೋರದೆ. ಜರೂರಾಗಿ ಕಾರ್ಯೋನ್ಮುಖರಾಗಬೇಕು. ಪಾಲಿಕೆ ಗಡಿ ವಿಸರಣೆ ಕುರಿತಂತೆ ನಿಯಮಾನುಸಾರ ಪರಿಶೀಲಿಸಿ, ಅಗತ್ಯ ದಾಖಲೆಗಳೊಂದಿಗೆ 2 ದಿನದಲ್ಲಿ ಸಿದ್ದಪಡಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು.
ಇಲ್ಲದಿದ್ದರೆ ನಿಮ್ಮ ಕರ್ತವ್ಯ ನಿರ್ಲಕ್ಷ್ಯ, ಬೇಜವಾಬ್ದಾರಿತನಕ್ಕೆ ಸೂಕ್ತ ಕ್ರಮಕೈಗೊಳ್ಳಲು ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು’ ಎಂದು ಆಯುಕ್ತರು, ಅಧಿಕಾರಿಗಳಿಗೆ ಹೊರಡಿಸಿರುವ ನೋಟೀಸ್ ನಲ್ಲಿ ಎಚ್ಚರಿಕೆ ನೀಡಿದ್ದಾರೆ.