ಆನ್‌ಲೈನ್ ರಿವ್ಯೂ ಹೆಸರಲ್ಲಿ ಶಿವಮೊಗ್ಗದ ವ್ಯಕ್ತಿ ಕಳೆದುಕೊಂಡಿದ್ದು ಬರೋಬ್ಬರಿ 25 ಲಕ್ಷ

Kranti Deepa

ಶಿವಮೊಗ್ಗ, ಜು.21 : ಗೂಗಲ್‌ನಲ್ಲಿ ಹೋಟೆಲ್‌ಗಳಿಗೆ ರಿವ್ಯೂ ಬರೆದರೆ ಹೆಚ್ಚಿನ ಕಮಿಷನ್ ನೀಡುವುದಾಗಿ ಆಮಿಷವೊಡ್ಡಿ, ಶಿವಮೊಗ್ಗದ ಬಿ.ಬಿ. ಸ್ಟ್ರೀಟ್‌ನ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 25.92  ಲಕ್ಷ ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ ಶಿವಮೊಗ್ಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್‌ಐಆರ್‌ನಲ್ಲಿ ಏನಿದೆ

ದೂರುದಾರರು ಟೆಲಿಗ್ರಾಂ ಖಾತೆಯೊಂದಕ್ಕೆ ಸೇರಿದ್ದರು. ಆ ಖಾತೆಯಲ್ಲಿ ಸಕ್ರಿಯರಾಗಿದ್ದ ವಂಚಕರು, ಗೂಗಲ್‌ನಲ್ಲಿ ಹೋಟೆಲ್‌ಗಳ ಬಗ್ಗೆ ರಿವ್ಯೂ ನೀಡಿದರೆ ದೊಡ್ಡ ಮೊತ್ತದ ಕಮಿಷನ್ ಸಿಗುತ್ತದೆ ಎಂದು ದೂರುದಾರರನ್ನು ನಂಬಿಸಿದ್ದಾರೆ. ಇದನ್ನು ನಂಬಿದ ದೂರುದಾರರಿಂದ ಹಂತ ಹಂತವಾಗಿ 25,92,200  ರೂಪಾಯಿಗಳನ್ನು ತಮ್ಮ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ.

ಆದರೆ, ಹಣ ವರ್ಗಾವಣೆಯಾದ ನಂತರವೂ ವಂಚಕರು ಹೋಟೆಲ್ ರಿವ್ಯೂ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಅಷ್ಟೇ ಅಲ್ಲದೆ, ಪಡೆದ ಹಣವನ್ನು ಹಿಂದಿರುಗಿಸದೆ, ಮತ್ತೆ ಹಣ ನೀಡುವಂತೆ ದೂರುದಾರರಿಗೆ ಮೆಸೇಜ್ ಮಾಡಿದ್ದಾರೆ.

ಇದರಿಂದ ಅನುಮಾನಗೊಂಡ ದೂರುದಾರರು, ತಾವು ವಂಚನೆಗೊಳಗಾಗಿರುವುದನ್ನು ಅರಿತು, ಹಣವನ್ನು ವರ್ಗಾವಣೆ ಮಾಡಿಸಿಕೊಂಡು ಮೋಸ ಮಾಡಿದ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ಪೊಲೀಸರಿಗೆ ದೂರು ನೀಡಿದ್ದಾರೆ.

Share This Article
";