ಶಿವಮೊಗ್ಗ,ನ.25 :ಶಿವಮೊಗ್ಗ ನಗರದ ಅಮೀರ್ ಅಹ್ಮದ್ ವೃತ್ತದಲ್ಲಿ ಕಾಂಕ್ರೀಟ್ ರಸ್ತೆಯಲ್ಲಿ ಕಲುಷಿತ ನೀರು ಉದ್ಭವಿಸಿ ಸುತ್ತಮುತ್ತಲಿನ ಪ್ರದೇಶವನ್ನೆಲ್ಲಾ ಗಲೀಜುಗೊಂಡಿದೆ.
ಇದರಿಂದ ಓಡಾಡಲು ಸಹ ಅಸಹ್ಯ ಎನಿಸುವ ಪರಿಸ್ಥಿತಿ ಎದುರಾಗಿದೆ. ಸುಮಾರು 15 ದಿನಕ್ಕಿಂತಲೂ ಹಿಂದೆಯೇ ಇದು ಕಂಡುಬಂದಿದ್ದರೂ ಸಂಬಂಧಪಟ್ಟ ಇಲಾಖೆಯವರು ಇದರ ಬಗ್ಗೆ ಗಮನ ಹರಿಸದೆ ಇರುವುದರಿಂದ ಪಾದಚಾರಿಗಳು ಸಂಕಷ್ಟ ಪಡುವಂತಾಗಿದೆ.
ಓ ಟಿ ರಸ್ತೆ, ಕೆ ಆರ್ ಪುರಂ ರಸ್ತೆ ಮತ್ತು ಎಂಕೆಕೆ ರಸ್ತೆಗೆ ಹೋಗುವಲ್ಲೆಲ್ಲಾ ಈ ಗಲೀಜು ನೀರು ಹರಿಯುತ್ತಿದ್ದು, ದುರ್ವಾಸನೆ ಹಬ್ಬಿದೆ. ಅಮೀರ್ ಅಹ್ಮದ್ ವೃತ್ತದಿಂದ ಓ ಟಿ ರಸ್ತೆಗೆ ತಿರುಗುವಲ್ಲಿ ರಸ್ತೆಯು ಕಾಲುವೆಯಾಕಾರದಲ್ಲಿ ಕೊರೆದಿದೆ.
ಈ ಕಾಲುವೆಯಲ್ಲಿ ಗಲೀಜು ನೀರು ತುಂಬಿಕೊಂಡಿದ್ದು, ಓಡಾಡಲು ಸಹ ಆಗದ ಸ್ಥಿತಿ ನಿರ್ಮಾಣವಾಗಿದೆ. ವಾಹನ ತೆರಳುವಾಗ ಹಾರಿ ಬರುವ ನೀರು ಪಾದಚಾರಿಗಳಿಗೆ ಎರಚುತ್ತಿದೆ. ಇದರಿಂದ ಅನೇಕರು ಸಮಸ್ಯೆ ಎದುರಿಸಿದ್ದಾರೆ.
ಸುತ್ತಮುತ್ತಲಿನ ಅಂಗಡಿಯವರು ಸಹ ದುರ್ವಾಸನೆ ಮತ್ತು ಸತತವಾಗಿ ಹರಿಯುವ ಚರಂಡಿ ನೀರಿನ ಎದುರೇ ವ್ಯವಹಾರ ನಡೆಸಬೇಕಾದ ಪರಿಸ್ಥಿತಿ ಇದೆ.
ಕಾಂಕ್ರೀಟ್ ರಸ್ತೆಯ ಮಧ್ಯದಲ್ಲಿ ಚರಂಡಿ ನೀರು ಉದ್ಭವಿಸಿರುವುದನ್ನು ಕೂಡಲೇ ಪಾಲಿಕೆಯವರು ಅಥವಾ ಒಳಚರಂಡಿ ಇಲಾಖೆಯವರು ದುರಸ್ತಿಗೊಳಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಸಂಬಂಧಿತರು ಕೂಡಲೇ ಇದರ ಬಗ್ಗೆ ಗಮನ ಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.