ಮಾಧ್ಯಮ ಕ್ಷೇತ್ರದಲ್ಲೂ ಕೆಡುಕುಗಳಿವೆ : ಹಿರಿಯ ಪತ್ರಕರ್ತ ಪಿ.ತ್ಯಾಗರಾಜ್ ವಿಷಾದ

Kranti Deepa

ಶಿವಮೊಗ್ಗ, ಜು. 31 : ಉದ್ಯಮವಾಗಿರುವ ಪತ್ರಿಕಾರಂಗದಲ್ಲಿ ಮಾಲೀಕರ ಮರ್ಜಿಯಲ್ಲಿ ಸಂಪಾದಕರು ಕೆಲಸ ಮಾಡುವ ಅನಿವಾರ್ಯತೆ ಇಂದು ಎದುರಾಗಿದೆ. ಈ ಸವಾಲಿನ ನಡುವೆಯೂ ಪತ್ರಕರ್ತ ವೃತ್ತಿ ಪಾವಿತ್ರ್ಯಕ್ಕೆ ಅಪಚಾರವಾಗದಂತೆ ಕೆಲಸ ಮಾಡಬೇಕು ಎಂದು ಹಿರಿಯ ಪತ್ರಕರ್ತ ಹಾಗೂ ಉಪಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಪಿ.ತ್ಯಾಗರಾಜ್ ಹೇಳಿದರು.ಶಿವಮೊಗ್ಗ ಪ್ರೆಸ್ ಟ್ರಸ್ಟ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ,ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಸಂಪಾದಕರು ವರದಿಗಾರರಿಗೆ ಸಂಸ್ಥೆಗೆ ಆದಾಯ ತಂದುಕೊಡುವ ಒತ್ತಡ ಇರುತ್ತದೆ. ಎಲ್ಲ ಸಂಸ್ಥೆಗಳ  ಧೋರಣೆಯೂ ಇದೇ ಆಗಿದೆ ಎಂದರು.

ಪತ್ರಿಕಾ ದಿನಾಚರಣೆ ನಮ್ಮನ್ನು ನಾವು ವಿಮರ್ಶೆ ಮಾಡಿಕೊಳ್ಳುವ ಸಮಯ. ನಮ್ಮ ದಾರಿಯಲ್ಲಿ ನಾವು ನಡೆಯುತ್ತಿದ್ದೇವಾ ಎಂಬ ಅವಲೋಕನ ಮಾಡಿಕೊಳ್ಳಬೇಕಿದೆ. ಸ್ಪರ್ಧಾತ್ಮಕ ಜಗತ್ತಿನಲ್ಲಿ ಸೋಷಿಯಲ್ ಮೀಡಿಯಾಗಳು ಸಾಂಪ್ರದಾಯಿಕ ಮಾಧ್ಯಮಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿವೆ. ಈ ಸವಾಲಿನ ನಡುವೆ ಪತ್ರಕರ್ತರು ಮುನ್ನಡೆಯಬೇಕಿದೆ ಎಂದು ತ್ಯಾಗರಾಜ್ ಹೇಳಿದರು.

ಸತ್ಯ ಹೇಳುವ ಯೋಧರು
ಶಿವಮೊಗ್ಗ ನಂದನ್ ಸ್ಮರಣಾರ್ಥ ಛಾಯಾ ಚಿತ್ರ ಪ್ರದರ್ಶನ ಉದ್ಘಾಟಿಸಿದ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ಶಿವಮೊಗ್ಗ ಪ್ರೆಸ್ ಟ್ರಸ್ಟ್ ಪತ್ರಿಕಾ ಕ್ಷೇತ್ರದಲ್ಲಿ ಕೆಲಸ ಮಾಡುವ ವಿವಿಧ ವಿಭಾಗದವರನ್ನು ಸನ್ಮಾನ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ. ಪತ್ರಿಕಾ ರಂಗ ಸಂವಿಧಾನದ ನಾಲ್ಕನೇ ಅಂಗ ಎಂಬ ಬಿರುದನ್ನು ಸಮಾಜವೇ ನೀಡಿದೆ. ಮಾಧ್ಯಮ ಕ್ಷೇತ್ರದಲ್ಲಿ ಕೆಲಸ ಮಾಡುವರು ಒಂದು ರೀತಿಯಲ್ಲಿ ಸುದ್ದಿ ನೀಡುವ ಮತ್ತು ಸತ್ಯ ಹೇಳುವ ಯೋಧರಿದ್ದಂತೆ ಎಂದರು.ಪತ್ರಕರ್ತರು ಸಮಾಜ ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಈ ಕಾರಣದಿಂದ ಜನ ಪತ್ರಕರ್ತರಿಗೆ ಗೌರವ ನೀಡುತ್ತಾರೆ. ಪತ್ರಿಕಾ ಕ್ಷೇತ್ರದಲ್ಲಿನ ಕೆಲವು ವ್ಯಕ್ತಿಗಳು ಸುಳ್ಳು ಸುದ್ದಿ ಹರಡುವ ಕಾರಣ ಇಡೀ ಕ್ಷೇತ್ರದ ಮೇಲೆ ತಪ್ಪು ಭಾವನೆ ಬರುವಂತೆ ಮಾಡುತ್ತಾರೆ. ಈ ರೀತಿಯ ಚಟುವಟಿಕೆಗಳ ಬಗ್ಗೆ ಸಂಘಟನೆಗಳು ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.

ವಾರ್ತಾಧಿಕಾರಿ ಆರ್.ಮಾರುತಿ ಮಾತನಾಡಿ ಪತ್ರಿಕೋದ್ಯಮವನ್ನು ಖಾಸಗಿ ವ್ಯವಹಾರಗಳ ರಕ್ಷಣೆ ಮಾಡಲು ಬಳಸಿಕೊಳ್ಳಬಾರದು. ಸರಕಾರದಿಂದ ಸಿಗುವ ಸೌಲಭ್ಯಗಳನ್ನು ಸದುಪಯೋಗ ಮಾಡಿಕೊಳ್ಳಬೇಕು. ಆರೋಗ್ಯ ಸಂಜೀವಿನಿ, ಕ್ಷೇಮನಿಧಿ ಅರ್ಹರಿಗೆ ದೊರಕುವ ನಿಟ್ಟಿನಲ್ಲಿ ಪತ್ರಿಕಾ ಸಂಘಟನೆಗಳು ಸರ್ಕಾರದೊಂದಿಗೆ ಸಮನ್ವಯ ಸಾಧಿಸಬೇಕು ಎಂದು ಹೇಳಿದರು.

ಊರಿನ ಸನ್ಮಾನಕ್ಕೆ ಹೃದಯ ತುಂಬಿದೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಝೇಂಕಾರ್ ಅಡ್ವಟೈರ್ಸ್ ವ್ಯವಸ್ಥಾಪಕ ನಿರ್ದೇಶಕ ನರೇಶ್ ಕುಮಾರ್ ಟಿ.ಎ ಮಾತನಾಡಿ, ಪೇಪರ್ ಹಾಕುವ ಕೆಲಸ ಆರಂಭಿಸಿದ ನಾನು ಈ ಕ್ಷೇತ್ರದಲ್ಲಿ ದೊಡ್ಡ ಸಾಧನೆ ಮಾಡಲು ಶಿವಮೊಗ್ಗದ ನೆಲ ಪ್ರೇರಣೆ ನೀಡಿದೆ. 150 ರೂಪಾಯಿ ಗೌರವ ಧನಕ್ಕೆ ಸೇರಿದ್ದ ನಾನು ಇಂದು  300 ಕೋಟಿ ವಹಿವಾಟಿನ ಜಾಹಿರಾತು ಸಂಸ್ಥೆ ನಡೆಸುತ್ತಿದ್ದೇನೆ. ದೇಶದ 10 ರಾಜ್ಯಗಳಲ್ಲಿ ವಹಿವಾಟು ಇದೆ. ದೆಹಲಿಯಲ್ಲಿ ಕಚೇರಿ ಹೊಂದಿರುವ ನಮ್ಮ ಸಂಸ್ಥೆಯಲ್ಲಿ ನೂರಾರು ಮಂದಿ ನೌಕರರಿದ್ದಾರೆ. ಪತ್ರಿಕಾ ರಂಗದಲ್ಲಿ ಜಾಹಿರಾತು ಕ್ಷೇತ್ರ ಪ್ರಮುಖವಾದುದು. ಶಿವಮೊಗ್ಗ ಪ್ರೆಸ್ ಟ್ರಸ್ಟ್ ನನ್ನನ್ನು ಗುರುತಿಸಿ ಗೌರವಿಸಿರುವುದು ನನಗೆ ಅತ್ಯಂತ ಹೆಮ್ಮೆಯಾಗಿದೆ. ನನ್ನೂರಿನಲ್ಲಿ ಸಿಕ್ಕ ಈ ಸನ್ಮಾನ ಯಾವತ್ತೂ ನೆನಪಿನಲ್ಲಿ ಉಳಿಯುತ್ತದೆ ಎಂದರು.

ಜಾಹಿರಾತು ಕ್ಷೇತ್ರದಲ್ಲಿ ಅನೇಕ ಸಂಕಷ್ಟಗಳನ್ನು ಎದುರಿಸಿ ಸಂಸ್ಥೆ ಕಟ್ಟಿದ್ದೇನೆ. ಆರಂಭದಲ್ಲಿ ಶಿವಮೊಗ್ಗದ ಪತ್ರಕರ್ತರು ಮತ್ತು ಸಂಪಾದಕರು ನನಗೆ ನೀಡಿದ್ದ ಸಹಕಾರವನ್ನು ಎಂದೂ ಮರೆಯಲಾರೆ. ಈ ಕ್ಷೇತ್ರದಲ್ಲಿ ಒಂದಷ್ಟು ಸಮಾಜಮುಖಿ ಕೆಲಸ ಮಾಡಬೇಕೆಂಬ ಬಯಕೆ ಇದೆ. ಪ್ರೆಸ್‌ಟ್ರಸ್ಟ್ ಮಾಡುವ ಸಮಾಜಮುಖಿ ಕೆಲಸಗಳಿಗೆ ನನ್ನ ಬೆಂಬಲ ಎಂದಿಗೂ ಇರುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಪತ್ರಿಕಾ ವೃತ್ತಿಬಂಧುಗಳಾದ ಸರ್ವಜ್ಞ ಪತ್ರಿಕೆ ಸಂಪಾದಕರಾದ ಎಸ್ ಬಿ ಮಠದ್, ಝೇಂಕಾರ್ ಅಡ್ವಟೈಸರ್ಸ್ ನಿರ್ದೇಶಕ ನರೇಶ್ ಕುಮಾರ್ ಟಿ.ಎ,. ವಿಜಯ ಕರ್ನಾಟಕ ಪತ್ರಿಕೆ ಮುದ್ರಣ ವ್ಯವಸ್ಥಾಪಕರಾದ ನಾರಪ್ಪ ಗೌಡ್ರು, ವಿಜಯ ಕರ್ನಾಟಕ ಪತ್ರಿಕೆಯ ಹಿರಿಯ ಗ್ರಾಫಿಕ್ಸ್ ಡಿಸೈನರ್ ಎಂ.ಸಿ.ರಾಜು, ಕನ್ನಡಪ್ರಭ ಪತ್ರಿಕೆಯ ಜಾಹಿರಾತು ವಿಭಾಗದ ಮ್ಯಾನೇಜರ್ ಕಾರ್ತಿಕ್ ಚಂದ್ರಮೌಳಿ. ವಿಜಯವಾಣಿ ಪತ್ರಿಕೆಯ ಛಾಯಾಗ್ರಾಹಕ ಶಿವಮೊಗ್ಗ ಯೋಗರಾಜ್, ರಿಪಬ್ಲಿಕ್ ಕನ್ನಡದ ವಿಡಿಯೊ ಜರ್ನಲಿಸ್ಟ್ ಚಿರಾಗ್, ಹಿರಿಯ ಪತ್ರಿಕಾ ವಿತರಕರಾದ ಮಂಜುನಾಥ್, ಬಿ ಸನ್ಮಾನಿಸಲಾಯಿತು.  ಎಸ್ ಎಲ್ ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನಗೈದ  ಪತ್ರಕರ್ತರ  ಮಕ್ಕಳಿಗೆ  ಪ್ರತಿಭಾ ಪುರಸ್ಕಾರ ನೀಡಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್.ಮಂಜುನಾಥ್ ಪ್ರಾಸ್ತಾವಿಕ ಮಾತನಾಡಿದರು.ಕಾರ್ಯದರ್ಶಿ ನಾಗರಾಜ್ ನೇರಿಗೆ ಸ್ವಾಗತಿಸಿದರು. ಗೋವಮೋಹನಕೃಷ್ಣ ವಂದಿಸಿದರು.ನಂದಿನಿ, ಅಶ್ವಿನಿ ಕಾರ್ಯಕ್ರಮ ನಿರೂಪಿಸಿದರು. ಸಂತೋಷ್ ಕಾಚಿನಕಟ್ಟೆ ಹೊನ್ನಾಳಿ ಚಂದ್ರಶೇಖರ್ ಬಹುಮಾನ ವಿತರಣಾ ಕಾರ್ಯಕ್ರಮ ನೆರವೇರಿಸಿದರು.
ಹಿರಿಯ ಪತ್ರಕರ್ತರಾದ ಗೋಪಾಲ್ ಯಡಗೆರೆ, ಜೇಸುದಾಸ್ ಪಿ, ಕೆ.ತಿಮ್ಮಪ್ಪ, ಗಜೇಂದ್ರ ಸ್ವಾಮಿ, ಚಂದ್ರಶೇಖರ್ ಶೃಂಗೇರಿ, ರಾಮಚಂದ್ರ ಗುಣಾರಿ, ಸೂರ್ಯನಾರಾಯಣ್ ವೈ.ಕೆ, ಗಿರೀಶ್ ಉಮ್ರಾಯ್ ಸೇರಿದಂತೆ ಅನೇಕ ಪತ್ರಕರ್ತರು, ಟ್ರಸ್ಟಿಗಳು ಹಾಜರಿದ್ದರು. ನಗರದ ಪ್ರಮುಖ ಸಂಘಟನೆಗಳು ಮುಖ್ಯಸ್ತರು, ರಾಜಕಾರಣಿಗಳು, ಜನಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This Article
";