ಸಾಗರ, ಆ.06 :ರೈತರು ಹೊಲದಲ್ಲಿ ಭತ್ತದ ನಾಟಿ ಮಾಡಿ ಬೆಳೆ ತೆಗೆಯುವುದು ಎಲ್ಲರಿಗೂ ಗೊತ್ತು. ಆದರೆ ಇಲ್ಲಿ ಶಾಲಾ ಮಕ್ಕಳು, ಶಿಕ್ಷಕರು ಗದ್ದೆಗಿಳಿದು ರೈತರೊಂದಿಗೆ ಭತ್ತದ ನಾಟಿ ಮಾಡಿದರು.
ನಿಜ, ತಾಲ್ಲೂಕಿನ ಮಾಲ್ವೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ಮಾಲ ತೇಶಪ್ಪ ಮತ್ತು ಶಿಕ್ಷಕರು ಶಾಲಾ ಮಕ್ಕಳನ್ನು ಶಾಲೆ ಸಮೀಪದ ಕೃಷಿಕ ನಾರಾಯಣಪ್ಪ ಅವರ ಗದ್ದೆಗೆ ಕರೆದುಕೊಂಡು ಹೋಗಿ ಅಲ್ಲಿನ ರೈತರಾದ ಹರೀಶ್, ಗಂಗಾಧರ, ರೇಣುಕಾ, ಸರಸ್ವತಿ, ರೇಣುಕಾ, ನೇತ್ರಾವತಿ, ರತ್ನಾ ಅವರೆಲ್ಲ ನಾಟಿ ಮಾಡುವುದನ್ನು ನೋಡಿದರಲ್ಲದೇ ಮಕ್ಕಳೂ ಕೆಸರು ಗದ್ದೆಯಲ್ಲಿ ನಾಟಿ ಮಾಡಿ ಹೊಸ ಅನುಭವಕ್ಕೆ ಸಾಕ್ಷಿಯಾದರು.
ಗದ್ದೆಯಲ್ಲಿ ಭತ್ತವನ್ನು ಹೇಗೆ ಬೆಳೆಯುತ್ತಾರೆ. ಎಷ್ಟು ಅವಧಿಯಲ್ಲಿ ಇದು ಬೆಳೆಯಾಗುತ್ತದೆ. ಮುಂದೆ ಅದು ಆಹಾರವಾಗಿ ಅಕ್ಕಿಯಾಗಿ ಹೇಗೆ ಪರಿವರ್ತನೆಯಾಗುತ್ತದೆ. ದೇಶದಲ್ಲಿ ರೈತನ ಮಹತ್ವ ಎಂಥದಿದೆ ಇತ್ಯಾದಿ ಮಾಹಿತಿಯನ್ನು ಮಕ್ಕಳಿಗೆ ತಿಳಿಸಲಾಯಿತು.
ನಾಲ್ಕು ಗೋಡೆಯ ನಡುವಿನ ಪಾಠ ಕೇಳಿದು ದಕ್ಕಿಂತ ಇದು ಹೊಸ ಅನುಭವ ನೀಡಿತು. ಕೇಳಿದ ಪಾಠವನ್ನು ಸ್ವತ: ಪ್ರಯೋಗದ ಮೂಲಕ ಪರಿಚಯ ಮಾಡಿಕೊಟ್ಟಿರುವುದು ಶಿಕ್ಷಕರ ಸೃಜನಶೀಲತೆಗೆ ಸಾಕ್ಷಿಯಾಗಿತ್ತು. ಶಾಲೆಯ 1 ರಿಂದ 5 ನೇ ತರಗತಿಯವರೆಗಿನ ಮಕ್ಕಳಿಗೆ ‘ಪರಿಸರ ಅಧ್ಯಯನ’ ಎಂಬ ಒಂದು ವಿಷಯ ಇದೆ. 6 ನೇ ತರಗತಿ ಮಕ್ಕಳಿಗೆ ‘ನಾಟಿ ಮಾಡುವ’ ಕುರಿತು ಒಂದು ಪಾಠ ಇದೆ. ಹಾಗಾಗಿ 7 ನೇ ತರಗತಿಯವರೆಗಿನ ಮಕ್ಕಳನ್ನು ನಾಟಿ ಮಾಡುವ ಗದ್ದೆಗೆ ಅತ್ಯಂತ ಮುತುವರ್ಜಿ ಯಿಂದ ಕರೆದುಕೊಂಡು ಹೋಗಲಾಗಿತ್ತು.
ಶಿಕ್ಷಕಿಯರಾದ ಸುಮಾ, ಅಮೃತಾ, ಚೇತನಾ, ಅನ್ನಪೂರ್ಣ ಹಾಜರಿದ್ದರು. ಮಕ್ಕಳು ತುಂಬ ಸಂತಸ, ಸಂಭ್ರಮಪಟ್ಟರು. ಈ ಸಂದರ್ಭದಲ್ಲಿ ಮಳೆ ಬಿಡುವು ಕೊಟ್ಟಿದ್ದರಿಂದ ಮಕ್ಕಳು ಗದ್ದೆಯಲ್ಲಿ ನಾಟಿ ಮಾಡುವ ಸಂಪೂರ್ಣ ಕಾರ್ಯವನ್ನು ವೀಕ್ಷಿಸಲು ಹಾಗೂ ತಾವೇ ತೊಡಗಿಕೊಳ್ಳಲು ಸಾಧ್ಯವಾಯಿತು.