ಶಿವಮೊಗ್ಗ,ಆ.28 : ಕೇಂದ್ರ ಸರ್ಕಾರವು ಯುವಕರಲ್ಲಿ ಕ್ರೀಡೆ, ಸಾಂಸ್ಕೃತಿಕ ಮತ್ತು ನಾಯಕತ್ವವನ್ನು ಉತ್ತೇಜಿಸುವ ಸಲುವಾಗಿ ಹಾಗೂ ದೇಶದಾದ್ಯಂತ ಜನ ಸಾಮಾನ್ಯರಲ್ಲಿನ ಪ್ರತಿಭೆಗಳನ್ನು ಗುರುತಿಸುವ ಸಲುವಾಗಿ ದೇಶದ ಪ್ರತಿಯೊಂದು ಲೋಕಸಭಾ ಕ್ಷೇತ್ರಗಳಲ್ಲಿ ‘ಸಂಸದ್ ಖೇಲ್ ಮಹೋತ್ಸವ-2025’ ನ್ನು ಆಚರಿಸಲಾಗುತ್ತಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ರೀಡೆ ಮತ್ತು ಫಿಟ್ ನೆಸ್ ಮೂಲಕ ಸಮುದಾಯವನ್ನು ಒಟ್ಟುಗೂಡಿಸುವ, ಫಿಟ್ ಇಂಡಿಯಾದ ಸಂದೇಶವನ್ನು ಪ್ರತಿ ಮನೆಗೂ ಹರಡುವ ನಿಟ್ಟಿನಲ್ಲಿ ಈ ಆಚರಣೆಯನ್ನು ಮೂರು ಹಂತಗಳಲ್ಲಿ ಮಾಡಲಾಗುತ್ತಿದೆ. ಆಗಸ್ಟ್ 29 ರಂದು ನೆಹರೂ ಕ್ರೀಡಾಂಗಣದಲ್ಲಿ ಪೋರ್ಟಲ್ ಅಧಿಕೃತವಾಗಿ ಲಾಂಚ್ ಮಾಡಲಾಗುವುದು. ಪಿಯುಸಿ ನಂತರದವರು ಈ ಕ್ರೀಡೆಯಲ್ಲಿ ಭಾಗವಹಿಸಬಹುದಾಗಿದೆ ಎಂದರು.
ಕ್ರೀಡಾಸಕ್ತರು ಆನ್ ಲೈನ್ ಪೋರ್ಟಲ್ ನಲ್ಲಿ ಆಗಸ್ಟ್ 29 ರಿಂದ ಸೆಪ್ಟೆಂಬರ್ 20 ರೊಳಗೆ ಕಡ್ಡಾಯವಾಗಿ ನೊಂದಣಿ ಮಾಡಿಕೊಳ್ಳತಕ್ಕದ್ದು. ಕ್ರೀಡಾ ಕೂಟ ನಡೆಯುವ ನಿರ್ದಿಷ್ಟ ದಿನಾಂಕಗಳನ್ನು ಮುಂದಿನ ದಿನಗಳಲ್ಲಿ ತಿಳಿಸಲಾಗುವುದು. ಗ್ರಾಮೀಣ ಮಟ್ಟ, ಬ್ಲಾಕ್, ವಾರ್ಡ್ ಮಟ್ಟ ಸಂಸದೀಯ ಕ್ಷೇತ್ರ ಮಟ್ಟದ ಎಲ್ಲಾ 3 ಹಂತದ ಆಟಗಳನ್ನು ಹಂತ ಹಂತವಾಗಿ ದಿನಾಂಕ: 21.09.2025 ರಿಂದ 25.12.2025 ರೊಳಗೆ ನಡೆಸಲಾಗುವುದು. ಶಿವಮೊಗ್ಗ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಕ್ರೀಡಾಸಕ್ತರು ಆನ್ ಲೈನ್ ಪೋರ್ಟಲ್ ಮೂಲಕ ಅಥವಾ ಸಂಸದರ ಕಚೇರಿಯಲ್ಲಿ ಆಫ್ ಲೈನ್ ಮೂಲಕ ಆಗಸ್ಟ್ ೨೯ ರಿಂದ ಸೆಪ್ಟೆಂಬರ್ ೨೦ ರೊಳಗೆ ನೋಂದಣಿಯನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಹೆಚ್ಚಿನ ಮಾಹಿತಿಗಾಗಿ ಶಿವಮೊಗ್ಗ ಲೋಕಸಭಾ ಸಂಸದರ ಕಚೇರಿಯ ಮುಖ್ಯಸ್ಥ ಶ್ರೀಧರ್.ಎಂ.ಬಿ ದೂರವಾಣಿ ಸಂಖ್ಯೆ :9606025869 ನ್ನು ಸಂಪರ್ಕಿಸಿ ಅಗತ್ಯ ಮಾಹಿತಿಯನ್ನು ಪಡೆಯಬಹುದಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಅಧ್ಯಕ್ಷ ಎನ್.ಕೆ.ಜಗದೀಶ್, ವಿಧಾನ ಪರಿಷತ್ ಸದಸ್ಯರಾದ ಡಾ|| ಧನಂಜಯ ಸರ್ಜಿ, ಡಿ.ಎಸ್.ಅರುಣ್, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಹರಿಕೃಷ್ಣ, ಮಾಲತೇಶ್, ಪ್ರಮುಖರಾದ ಪ್ರಶಾಂತ್, ಸುದರ್ಶನ್, ಚಂದ್ರಶೇಖರ್, ಅಣ್ಣಪ್ಪ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.