ದರೋಡೆ ಆರೋಪಿ ಕಾಲಿಗೆ ಗುಂಡು

Kranti Deepa

ಶಿವಮೊಗ್ಗ, ಏ.10 : ಮಾಳೂರು ಪೊಲೀಸ್ ಠಾಣೆ ವ್ಯಾಪ್ತಿಯ ಮಹಿಷಿ ಗ್ರಾಮದಲ್ಲಿರುವ ಉತ್ತರಾದಿ ಮಠದಲ್ಲಿ ಇತ್ತೀಚೆಗೆ ಸಂಭವಿಸಿದ ದರೋಡೆಗೆ ಸಂಬಂಧಿಸಿದಂತೆ ಆರೋಪಿ ಮತ್ತು ಹಲವು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿರುವ ಶ್ರೀನಿವಾಸ್ ಮತ್ತು ಅವರ ತಂಡವನ್ನು ಪೊಲೀಸರು ಬಂಧಿಸಲು ತೆರಳಿದ ವೇಳೆ ಆತ ಪೊಲೀಸರ ಮೇಲೆ ದಾಳಿ ನಡೆಸಲೆತ್ನಿಸಿದ್ದರಿಂದ ಆತನ ಕಾಲಿಗೆ ಗುಂಡು ಹಾರಿಸಿ ಬಂಧಿಸಲಾಗಿದೆ.

ಇದು ಶಿಕಾರಿಪುರದ ಕೆಂಗುಡ್ಡೆ ರಸ್ತೆಯ ಕೆರೆ ಏರಿ ಮೇಲೆ ಸಂಭವಿಸಿದೆ. ಆರೋಪಿ ಶ್ರೀನಿವಾಸ ಅಲಿಯಸ್ ಸೀನಾ (25) ಶಿಕಾರಿಪುರದ ಪ್ರಗತಿನಗರದ ವಾಸಿಯಾಗಿದ್ದಾನೆ. ಆತ ಮನೆಯಲ್ಲಿರುವುದನ್ನು ಅರಿತ ಮಾಳೂರು ಪಿಎಸ್‌ಐ ಕುಮಾರ್ ಮತ್ತು ಅವರ ತಂಡ ಗುರುವಾರ ಮಧ್ಯಾಹ್ನ ಸೆರೆಹಿಡಿಯಲು ಧಾವಿಸಿದಾಗ ಆರೋಪಿ ಪ್ರತಿ ದಾಳಿ ನಡೆಸಿದನು.

ಇದರಿಂದ ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗಲು ಸೂಚಿಸಲಾಯಿತಾದರೂ ಅದಕ್ಕೂ ಬಗ್ಗದೆ ಪೊಲೀಸ್ ಕಾನ್ಸ್‌ಟೆಬಲ್ ಸಂತೋಷ್ ಎನ್ನುವವನ ಮೇಲೆ ಮತ್ತೆ ದಾಳಿ ನಡೆಸಲೆತ್ನಿಸಿದನು. ಆಗ ಆತನ ಕಾಲಿಗೆ ಎಸ್ ಐ ಗುಂಡು ಹಾರಿಸಿ ಬಂಧಿಸಿದರು.ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.

Share This Article
";