ಶಿವಮೊಗ್ಗ, ಏ.09 : ನಕಲಿ ಚಿನ್ನಾಭರಣವನ್ನು ಅಡವಿಟ್ಟು 64 ಕೋಟಿ ರೂ ಸಾಲ ಪಡೆದ ಪ್ರಕರಣದಲ್ಲಿ ಶಿವಮೊಗ್ಗ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್. ಎಂ ಮಂಜುನಾಥ ಗೌಡರನ್ನು ಇಡಿ ಬಂಧಿಸಿ 1 ನೇ ಸಿಸಿಹೆಚ್ ನ್ಯಾಯಾಲಯದ ಮುಂದೆ ಹಾಜರುಪಡಿಸಿದೆ.
ಅದರ ಬೆನ್ನಲ್ಲೇ ನಕಲಿ ಬಂಗಾರ ಅಡಮಾನ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯದ (ಇ.ಡಿ) ಅಧಿಕಾರಿಗಳು ಎರಡನೇ ದಿನವೂ ಜಿಲ್ಲೆಯ ವಿವಿಧೆಡೆ ದಾಳಿ ಮುಂದುವರೆಸಿದ್ದಾರೆ. ಶಿವಮೊಗ್ಗ, ತೀರ್ಥಹಳ್ಳಿ ಕೆಲವೆಡೆ ದಾಳಿಯಾಗಿದೆ ಎಂದು ತಿಳಿದು ಬಂದಿದೆ.
ಶಿವಮೊಗ್ಗದ ಅಚ್ಚುತರಾವ್ ಬಡಾವಣೆಯಲ್ಲಿರುವ ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಸುಧೀರ್ ಅವರ ಮನೆ ಮೇಲೆ ಇ.ಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಮನೆಯಲ್ಲಿ ಪರಿಶೀಲನೆ ಮಾಡುತ್ತಿದ್ದಾರೆ. ಇನ್ನೊಂದೆಡೆ ತೀರ್ಥಹಳ್ಳಿ ಬೆಟ್ಟಮಕ್ಕಿಯಲ್ಲಿರುವ ಕೃಷ್ಣಮೂರ್ತಿ ಭಟ್ ಮನೆಗೂ ಇ.ಡಿ. ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕೃಷ್ಣಮೂರ್ತಿ ಭಟ್ ಅವರು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ ಆಪ್ತರಾಗಿದ್ದಾರೆ.
ಇನ್ನೊಂದೆಡೆ, ಬೆಂಗಳೂರಿನ ಇ.ಡಿ. ಕಚೇರಿಯಲ್ಲಿ ಆರ್.ಎಂ.ಮಂಜುನಾಥ ಗೌಡ ಅವರ ವಿಚಾರಣೆ ಮುಂದುವರೆದಿದೆ. ಇಡಿ ಬಂಧಿಸಿರುವುದಾಗಿ ಮಾಧ್ಯಮಗಳು ಪ್ರಚಾರ ಮಾಡಿವೆ. ಮಂಜುನಾಥ್ ಗೌಡರಿಗೆ ನ್ಯಾಯಾಂಗ ಬಂಧನವಾಗುವ ಸಾಧ್ಯತೆಯಿದೆ.