ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನದ ಸಮ ಕಾರ್ಯದರ್ಶಿ ರಾಜಿನಾಮೆ

Kranti Deepa

 ತೀರ್ಥಹಳ್ಳಿ,ಫೆ. 15 : ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಸಮಕಾರ್ಯದರ್ಶಿ ಕಡಿದಾಳ್ ಪ್ರಕಾಶ್ ತಮ್ಮ ಸ್ಥಾನಕ್ಕೆ ಫೆ. 14 ರ ಶುಕ್ರವಾರ ರಾಜೀನಾಮೆ ಸಲ್ಲಿಸಿದ್ದಾರೆ. ಪ್ರತಿಷ್ಠಾನದ ಅಧ್ಯಕ್ಷ ಬಿ.ಎಲ್.ಶಂಕರ್ ಅವರಿಗೆ ತಾವು ರಾಜೀನಾಮೆ ಸಲ್ಲಿಸಿರುವುದನ್ನು ಕಡಿದಾಳ್ ಪ್ರಕಾಶ್ ಖಚಿತಪಡಿಸಿದ್ದು ಆದರೆ, ರಾಜೀನಾಮೆ ನೀಡಲು ಕಾರಣ ಏನು ಎಂಬ ಬಗ್ಗೆ ಸ್ಪಷ್ಟವಾಗಿ ತಿಳಿಸಿಲ್ಲ.

ಜನವರಿ ೨೪ರಂದು ಕುಪ್ಪಳಿಯ ಹೇಮಾಂಗಣದಲ್ಲಿ ಕಡಿದಾಳ್ ಪ್ರಕಾಶ್ ಅವರ ಸಂಬಂಧಿಕರ ಕುಟುಂಬದ ಮಂತ್ರ ಮಾಂಗಲ್ಯವನ್ನು ಅದ್ಧೂರಿಯಾಗಿ ನಡೆಸಿದ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕುಟುಂಬದವರೇ ಅದ್ದೂರಿಯಾಗಿ ಮಂತ್ರ ಮಾಂಗಲ್ಯ ಆಚರಿಸುವ ಮೂಲಕ ಕುವೆಂಪು ಆಶಯಕ್ಕೆ ಧಕ್ಕೆ ತಂದಿರುವ ಬಗ್ಗೆ ವಿರೋಧ ವ್ಯಕ್ತವಾಗಿತ್ತು.

ಮದುವೆ ತಮ್ಮ ಸಂಬಂಧಿಕರ ಕುಟುಂಬದ್ದೇ ಎಂಬುದನ್ನು ಒಪ್ಪಿಕೊಂಡಿದ್ದ ಕಡಿದಾಳ್ ಪ್ರಕಾಶ್ ಮಂತ್ರ ಮಾಂಗಲ್ಯವನ್ನು ಸ್ವಲ್ಪ ಮಟ್ಟಿಗೆ ಅದ್ದೂರಿಯಾಗಿ ನಡೆಸಲಾಗಿದೆ. ಮುಂದೆ ಇಂತಹ ಮದುವೆಗಳಿಗೆ ಅವಕಾಶ ನೀಡುವುದಿಲ್ಲ ಎಂದು ಸಮಜಾಯಿಷಿ ನೀಡಿದ್ದರು.

ಜತೆಗೆ ಪ್ರತಿಷ್ಠಾನದ ಅಧ್ಯಕ್ಷ ಡಾ.ಬಿ.ಎಲ್.ಶಂಕರ್ ಕೂಡ ಅದ್ದೂರಿ ಮಂತ್ರ ಮಾಂಗಲ್ಯದ ಬಗ್ಗೆ ಸ್ಪಷ್ಟನೆ ನೀಡಿದ್ದರು. ಶಿಸ್ತು, ಅಚ್ಚುಕಟ್ಟುತನದ ಕಾರಣಕ್ಕೆ ಕುಪ್ಪಳಿಯ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನದ ಕಾರ್ಯ ವೈಖರಿ ರಾಜ್ಯ ಮಾತ್ರವಲ್ಲದೆ ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿತ್ತು. ಕವಿಮನೆ, ಕವಿಶೈಲಕ್ಕೆ ಭೇಟಿ ನೀಡುವ ಕುವೆಂಪು ಅಭಿಮಾನಿಗಳು ಇಡೀ ಪರಿಸರದ ಅಚ್ಚುಕಟ್ಟಾದ ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದರು.

ಆದರೆ, ಅವರದ್ದೇ ಸಂಬಂಧಿಕರ ಅದ್ದೂರಿ ಮಂತ್ರ ಮಾಂಗಲ್ಯದಿಂದಾಗಿ ಕಡಿದಾಳ್ ಪ್ರಕಾಶ್ ಬಗ್ಗೆ ಟೀಕೆಗಳು ವ್ಯಕ್ತವಾಗಿದ್ದವು. ಇದರಿಂದ ಮನನೊಂದು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Share This Article
";