ಶಿವಮೊಗ್ಗವನ್ನು ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಘೋಷಿಸಲು ಮನವಿ

Kranti Deepa

ಶಿವಮೊಗ್ಗ: ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ ಅಡಿಯಲ್ಲಿ ಕೈಗಾರಿಕಾ ಸ್ಮಾರ್ಟ್ ಸಿಟಿಯಾಗಿ ಶಿವಮೊಗ್ಗ ಮಹಾನಗರವನ್ನು ಆಯ್ಕೆ ಮಾಡುವ ಬಗ್ಗೆ ಪ್ರಸ್ತಾವನೆಯನ್ನು ಶಾಸಕ ಎಸ್‌ಎನ್ ಚನ್ನಬಸಪ್ಪ ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರಿಗೆ ಸಲ್ಲಿಸಿದ್ದಾರೆ.

ಗುರುವಾರ ನಗರಕ್ಕಾಗಮಿಸಿದ ಎಚ್ ಡಿಕೆ ಅವರನ್ನು ಭೇಟಿಯಾದ ಶಾಸಕರು, ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿಯು ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ 28,602  ಕೋಟಿ ರೂ.ಗಳ ಅಂದಾಜು ಹೂಡಿಕೆಯೊಂದಿಗೆ ದೇಶದ 12 ಕೈಗಾರಿಕಾ ಸ್ಮಾರ್ಟ್ ಸಿಟಿಗಳನ್ನು ಸ್ಥಾಪಿಸಲು ಅನುಮೋದನೆಯನ್ನು ನೀಡಿದೆ. ಈ ಯೋಜನೆಯ 10 ರಾಜ್ಯಗಳಲ್ಲಿ ವ್ಯಾಪಿಸಿದ್ದು, 1 ಮಿಲಿಯನ್ ಪ್ರತ್ಯಕ್ಷ ಉದ್ಯೋಗಗಳನ್ನು ಮತ್ತು 3 ಮಿಲಿಯನ್ ಪರೋಕ್ಷವಾಗಿ ಉದ್ಯೋಗಗಳನ್ನು ಸೃಷ್ಟಿಸುವ ಉದ್ದೇಶವನ್ನು ಹೊಂದಿದೆ ಎಂದಿದ್ದಾರೆ.

ಕರ್ನಾಟಕ ರಾಜ್ಯವು ಸಹ ಕೈಗಾರಿಕೆ ಕ್ಷೇತ್ರಕ್ಕೆ ಸಾಕಷ್ಟು ರೀತಿಯ ಕೊಡುಗೆಯನ್ನು ನೀಡಿದೆ. ಹೊಸ ಹೊಸ ಕೈಗಾರಿಕೆಗಳನ್ನು ಸ್ಪಾಪಿಸಲು ಪೂರಕವಾದ ಸಂಪತ್ತು ನಮ್ಮ ರಾಜ್ಯದಲ್ಲಿದೆ. ಶಿವಮೊಗ್ಗ ನಗರವು ಶಿಕ್ಷಣ ಸಾಹಿತ್ಯ, ಕೃಷಿ ಮತ್ತು ಕೃಷಿ ಉತ್ಪನ್ನ ಮಾರುಕಟ್ಟೆ, ವಾಣಿಜ್ಯ ವ್ಯವಹಾರ, ಪ್ರವಾಸೋದ್ಯಮ, ಸಣ್ಣ ಮತ್ತು ಬೃಹತ್ ಕೈಗಾರಿಗೆಗಳಲ್ಲಿ ಛಾಪನ್ನು ಮೂಡಿಸಿದ ಭೂಮಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಆರ್ಥಿಕತೆಯು ಪ್ರಾಥಮಿಕವಾಗಿ ಕೃಷಿಯಿಂದ ನಡೆಸಲ್ಪಡುತ್ತದೆ.

ಅಡಿಕೆ, ಭತ್ತ ಮತ್ತು ಮಸಾಲೆ ಪದಾರ್ಥಗಳ ಕೃಷಿಗೆ ಹೆಸರುವಾಸಿಯಾಗಿದೆ. ಕಬ್ಬಿಣದ ಅದಿರು ಗಣಿಗಾರಿಕೆ, ಉತ್ಪಾದನೆಯಂತಹ ಕೈಗಾರಿಕೆಗಳನ್ನು ಹೊಂದಿದೆ, ಹಲವಾರು ಶಿಕ್ಷಣ ಸಂಸ್ಥೆಗಳು ಮತ್ತು ಸಂಶೋಧನಾ ಕೇಂದ್ರಗಳು ಈ ಪ್ರದೇಶದಲ್ಲಿ ನೆಲೆಗೊಂಡಿವೆ. ವಾರ್ಷಿಕವಾಗಿ ಸಾವಿರಾರು ಜನ ವಿದ್ಯಾರ್ಥಿಗಳನ್ನು ಶೈಕ್ಷಣಿಕವಾಗಿ ಮತ್ತು ತಾಂತ್ರಿಕವಾಗಿ ಹೊರಹೊಮ್ಮಿಸುತ್ತಿದೆ ಎಂದರು.
ರಾಷ್ಟ್ರೀಯ ಕೈಗಾರಿಕಾ ಕಾರಿಡಾರ್ ಅಭಿವೃದ್ದಿ ಕಾರ್ಯಕ್ರಮಗಳ ಅಡಿಯಲ್ಲಿ ಮೊದಲನೇ ಹಂತದಲ್ಲಿ ಈಗಾಗಲೇ 12 ನಗರಗಳ ಪೈಕಿ 10 ನಗರಗಳನ್ನು ಘೋಷಿಸಿದ್ದು, ಶಿವಮೊಗ್ಗ ನಗರವನ್ನು ಈ ಯೋಜನೆಯಡಿ ಸೇರಿಸಿ ಕರ್ನಾಟಕ ರಾಜ್ಯದಲ್ಲಿ ಕೈಗಾರಿಕಾ ಕಾರಿಡಾರ್ ಸ್ಮಾರ್ಟ್ ಸಿಟಿಯನ್ನು ಸ್ಥಾಪಿಸುವುದು ಅತ್ಯವಶ್ಯಕವಾಗಿದೆ ಎಂದಿದ್ದಾರೆ.

ಶಿವಮೊಗ್ಗ ಮಹಾನಗರಕ್ಕೆ ಹೊಂದಿಕೊಂಡಂತೆ ದೇವಕಾತಿಕೊಪ್ಪ ಪ್ರದೇಶಲ್ಲಿ 280 ಎಕ್ರೆ, ಸೋಗಾನೆ ಪ್ರದೇಶದಲ್ಲಿ 580 ಎಕ್ರೆ, ಹಾಗೂ ವಿವಿಧ ಭಾಗಗಳಲ್ಲಿ 380 ಎಕ್ರೆ ಕೈಗಾರಿಕೆಗಳ ಸ್ಥಾಪನೆ ಮತ್ತು ಅಭಿವೃದ್ದಿಗಾಗಿ ಜಮೀನು ಲಭ್ಯವಿರುತ್ತದೆ. ಕೈಗಾರಿಕೆಗಳಿಗೆ ವಿದ್ಯುತ್ ಸಂಪರ್ಕ ಹಾಗೂ ಪೂರೈಕೆಗಾಗಿ ಶರಾವತಿ ವಿದ್ಯುತ್ ತಯಾರಿಕಾ ಘಟಕವೂ ಸಹ ನಮ್ಮ ಜಿಲ್ಲೆಯಲ್ಲಿಯೇ ಇದೆ. ಸರಕು ಸಾಗಾಣಿಕೆ, ಸಾರಿಗೆ ಸಂಪರ್ಕ ವ್ಯವಸ್ಥೆಗಾಗಿ ಜಿಲ್ಲೆಯಲ್ಲಿ ವಾಯು ಸಾರಿಗೆ, ರೈಲ್ವೆ ಸಾರಿಗೆ, ರಸ್ತೆ ಸಾರಿಗೆ ವ್ಯವಸ್ಥೆಯು ಸಮರ್ಪಕವಾಗಿದೆ. ಅಕ್ಕಪಕ್ಕದ ಜಿಲ್ಲೆಗಳಾದ ದಾವಣಗೆರೆ, ಚಿಕ್ಕಮಗಳೂರು, ಹಾವೇರಿ, ಚಿತ್ರದುರ್ಗ, ಉತ್ತರ ಕನ್ನಡ, ಉಡುಪಿ- ದಕ್ಷಿಣ ಕನ್ನಡ ಜಿಲ್ಲೆಗಳಿಗೆ ಕೇಂದ್ರ ಸ್ಥಾನದಲ್ಲಿದ್ದು ಕೈಗಾರಿಕೆಗಳಿಗೆ ಸೂಕ್ತ ಪ್ರದೇಶವಾಗಿದೆ.
– ಚನ್ನಬಸಪ್ಪ, ಶಾಸಕ

Share This Article
";