ಜಾತಿಗಣತಿ ವರದಿ ಕೂಡಲೇ ಬಿಡುಗಡೆ ಮಾಡಿ

Kranti Deepa

ಶಿವಮೊಗ್ಗ,ಅ.16 : ಸುಪ್ರೀಂ ಕೋರ್ಟ್‌ನ ಆದೇಶದಂತೆ ಕರ್ನಾಟಕ ಸರ್ಕಾರ ತಕ್ಷಣವೇ ಒಳಮೀಸಲಾತಿ ಜಾರಿಗೊಳಿಸಬೇಕೆಂದು ಆಗ್ರಹಿಸಿ ಇಂದು ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಹೋರಾಟ ಸಮಿತಿ ನಗರದ ಸೈನ್ಸ್ ಮೈದಾನದಿಂದ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಬೃಹತ್ ಪ್ರತಿಭಟನೆ ನಡೆಸಿ ಮುಖ್ಯಮಂತ್ರಿಗಳಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿತು.

ಕಳೆದ 3 ದಶಕಗಳಿಂದ ನಡೆಸಿದ ಒಳಮೀಸಲಾತಿ ಹೋರಾಟದ ಫಲವಾಗಿ ಸುಪ್ರೀಂ ಕೋರ್ಟ್ ನಮ್ಮ ಪರ ತೀರ್ಪುನೀಡಿದ್ದು ರಾಜ್ಯ ಸರ್ಕಾರ ಒಳಮೀಸಲಾತಿ ಜಾರಿಯನ್ನು ಯಥಾವತ್ತಾಗಿ ಜಾರಿಗೊಳಿಸಲು ಮೀನಾಮೇಷ ನಡೆಸುತ್ತಿದ್ದು, ಕೂಡಲೇ ಜಾರಿಗೊಳಿಸಬೇಕೆಂದು ಆಗ್ರಹಿಸಲಾಯಿತು.

ಸುಪ್ರೀಂ ಕೋರ್ಟ್ ತೀರ್ಪಿನಂತೆ ರಾಜ್ಯ ಸರ್ಕಾರ ತಕ್ಷಣವೇ ಒಳ ಮೀಸಲಾತಿ ಜಾರಿಗೊಳಿಸಬೇಕು. ಒಂದು ವೇಳೆ ಜಾರಿಗೊಳಿಸದಿದ್ದಲ್ಲಿ ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿರುವುದಕ್ಕೆ ಕಾನೂನು ಹೋರಾಟದ ಮೂಲಕ ಉಗ್ರ ಹೋರಾಟ ಹಮ್ಮಿಕೊಳ್ಳುಲಾಗುವುದು ಎಂದು ಎಚ್ಚರಿಸಿದರು.

ಸಂವಿಧಾನದ ಪರಿಚ್ಛೇದಗಳಾದ 15(4)ನೇ 16 (4)ನೇ ವಿಧಿಗಳ ಅಡಿಯಲ್ಲಿ ಸುಗ್ರೀವಾಜ್ಞೆ ಹೊರಡಿಸಿ ಒಳಮೀಸಲಾತಿ ಜಾರಿ ಮಾಡಬೇಕು. ಬ್ಯಾಕ್‌ಲಾಗ್ ಸೇರಿದಂತೆ ಇತರ ಯಾವುದೇ ಹುದ್ದೆ ನೇಮಕಾತಿ ಆದೇಶವನ್ನು ಒಳಮೀಸಲಾತಿ ಜಾರಿ ಆದೇಶ ಆಗುವವರೆಗೆ ನೀಡಬಾರದು. ಜಾತಿಗಣತಿ ವರದಿ ಕೂಡಲೇ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ದಲಿತ ಸಂಘಟನೆಗಳ ಪ್ರಮುಖರಾದ ತಿಮ್ಲಾಪುರ ಲೋಕೇಶ್, ಶಿವಣ್ಣ ಹೆಚ್. ಭಾನುಪ್ರಸಾಧ್, ಎಸ್. ನಾಗರಾಜ್, ರಾಜಕುಮಾರ್ ಚಿನ್ನಯ್ಯ, ಇ.ರಮೇಶ್, ಹಾಲೇಶಪ್ಪ, ಮಹಾದೇವಪ್ಪ ಯಡೆಹಳ್ಳಿ, ಸಿ.ಮೂರ್ತಿ, ರಂಗಪ್ಪ, ಸಿದ್ದಪ್ಪ, ಶಿವಾಜಿ, ಎಸ್.ಶಿವಲಿಂಗಪ್ಪ, ಅಣ್ಣಪ್ಪ ಇನ್ನಿತರರು ಉಪಸ್ಥಿತರಿದ್ದರು.

Share This Article
";