ಶಿವಮೊಗ್ಗ, ಜ.10 : ಮೊಬೈಲ್ ಬಳಕೆಯನ್ನು ತಗ್ಗಿಸಿ, ಪುಸ್ತಕ ಬಳಕೆಯನ್ನು ಹೆಚ್ಚು ಮಾಡಿಕೊಳ್ಳಿ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.ನಗರದ ಜೈನ್ ಪಬ್ಲಿಕ್ ಶಾಲೆಯಲ್ಲಿ ನಡೆದ ಸಾಂಸ್ಕೃತಿಕ ಹಾಗೂ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮೊಬೈಲ್‌ನ್ನು ನಮ್ಮ ಜ್ಞಾನದ ಸಂಪಾದನೆಗೆ ಎಷ್ಟು ಬಳಸಿಕೊಳ್ಳಬೇಕೋ ಅಷ್ಟನ್ನ ಮಾತ್ರ ಬಳಸಿಕೊಂಡು ಪುಸ್ತಕವನ್ನು ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸಿದರೆ ನಿಮ್ಮ ಜ್ಞಾನದ ಮಟ್ಟ ಹೆಚ್ಚಾಗುತ್ತದೆ ಎಂದರು.
ಪೋಷಕರು ಹೆಚ್ಚು ಮೊಬೈಲ್‌ನ್ನು ಬಳಸಿದರೆ ನಿಮ್ಮ ಮಕ್ಕಳೂ ಕೂಡ ಅಷ್ಟೇ ಪ್ರಮಾಣದಲ್ಲಿ ಮೊಬೈಲ್ ಬಳಸುತ್ತಾರೆ. ಆದ್ದರಿಂದ ನಿಮ್ಮ ಮಕ್ಕಳ ಎದುರು ಮೊಬೈಲ್ ಬಳಕೆಯನ್ನು ಕಡಿಮೆ ಮಾಡಿ ಓದಿನ ಕಡೆ ಗಮನ ಹರಿಸಲು ಅವರನ್ನು ಪ್ರೇರೇಪಿಸಿ ಎಂದು ನೆರೆದಿದ್ದ ಪೋಷಕರಿಗೂ ಕಿವಿಮಾತು ಹೇಳಿದರು.
ಜೈನ್ ಪಬ್ಲಿಕ್ ಶಾಲೆ ಕೇವಲ ಪಠ್ಯ ವಿಷಯಕ್ಕೆ ಮಹತ್ವ ಕೊಡದೇ ನಮ್ಮ ಸಂಸ್ಕೃತಿ, ಆಚಾರ, ವಿಚಾರಗಳಿಗೂ ಆದ್ಯತೆ ನೀಡುತ್ತಿದೆ. ಇದನ್ನು ನನ್ನನ್ನು ಬರಮಾಡಿಕೊಂಡ ರೀತಿಯಲ್ಲೇ ಕಂಡುಕೊಂಡೆ ಎಂದ ಅವರು, ಪಠ್ಯೇತರ ಚಟುವಟಿಕೆಗಳಿಗೂ ಆದ್ಯತೆ ನೀಡುತ್ತಿರುವುದರಿಂದ ಇಲ್ಲಿನ ವಿದ್ಯಾರ್ಥಿಗಳು ಹೆಚ್ಚಿನ ಪ್ರಮಾಣದಲ್ಲಿ ಸಾಧನೆಯನ್ನು ಮಾಡಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಯೂರಿ ನಾಟ್ಯಕೇಂದ್ರದ ನೃತ್ಯಪಟು ಶ್ವೇತಾ, ಶಾಲೆಯ ಪ್ರಾಂಶುಪಾಲೆ ಪ್ರಿಯದರ್ಶಿನಿ, ಸಿಇಓ ಸಂತೋಷ್, ಶರತ್‌ಕುಮಾರ್, ವ್ಯವಸ್ಥಾಪಕ ವಿಜಯಕುಮಾರ್ ಉಪಸ್ಥಿತರಿದ್ದರು.
