ಶಿವಮೊಗ್ಗ, ಸೆ. 03 : ಬೋವಿ ನಿಗಮದ ಸೌಲಭ್ಯ ನೀಡಲು ಫಲಾನುಭವಿಗಳಿಂದ ಕಮೀಷನ್ ಕೇಳಿದ್ದೇನೆನ್ನುವ ಆ ವಿಡಿಯೋದಲ್ಲಿ ಇರುವುದು ನಾನು ನಿಜ, ಆದರೆ ಅಲ್ಲಿ ಮಾತನಾಡಿದ್ದು ನಾನಲ್ಲ. ಆ ಧ್ವನಿ ನನ್ನದಲ್ಲ, ಆ ವಿಡಿಯೋದಲ್ಲಿನ ಇಡೀ ಸಂಭಾಷಣೆಯನ್ನು ಎಐ (ಕೃತಕ ಬುದ್ಧಿಮತ್ತೆ) ಮೂಲಕ ಅದನ್ನು ತಿರುಚಲಾಗಿದೆ . ವಿಡಿಯೋದಲ್ಲಿನ ಧ್ವನಿಗೂ ನನ್ನ ಧ್ವನಿಗೂ ಸಂಬಂಧವೇ ಇಲ್ಲ. ಬೇಕಾದರೆ ಇದನ್ನು ಯಾವುದೇ ತನಿಖೆಗೆ ಒಳಪಡಿಸಬಹುದು ಎಂದು ಬೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಲ್ಲಿ ಸಂಭಾಷಣೆ ನಡೆದಂತೆ ನಾನು ಆ ವಿಡಿಯೋ ಮಾಡಿದವರೊಂದಿಗೆ ಯಾವುದೇ ಹಣಕಾಸಿನ ಕೊಡುಕೊಳ್ಳುವಿಕೆಯ ಸಂಭಾಷಣೆ ಮಾಡಿಲ್ಲ. ನಾನುಕೂಡ ಸಾರ್ವಜನಿಕ ಜೀವನದಲ್ಲಿ ಹಲವಾರು ವರ್ಷಗಳಿಂದ ಇದ್ದವನು, ತುಂಬಾ ಎಚ್ಚರಿಕೆದಿಂದಲೇ ಕೆಲಸ ನಿರ್ವಹಿಸುತ್ತ ಬಂದಿದ್ದೇನೆ.ಆಫೀಸ್ ನಲ್ಲಿ ಕುಳಿತುಕೊಂಡು ವ್ಯವಹಾರ ಮಾಡುವಷ್ಟು ದಡ್ಡನಲ್ಲ. ಹಾಗೆ ಕಮಿಷನ್ ಪಡೆದು ನಮ್ಮದೇ ಸಮಾಜಕ್ಕೆ ಅನ್ಯಾಯ ಮಾಡುವಷ್ಟು ಕ್ರೂರಿ ನಾನಲ್ಲ ಎಂದು ಹೇಳಿದರು.
ವಿಡಿಯೋ ದಲ್ಲಿ ಪರ್ಸೆಂಟೇಜ್ ವ್ಯವಹಾರ ಮಾತನಾಡಲಾಗಿದೆ. 5 ಪರ್ಸೆಂಟ್ ಕಮೀಷನ್ ಕೇಳಿದ ಅಂತ ಹೇಳಲಾಗಿದೆ. ಆದರೆ ಅಲ್ಲಿ ನಾವು ಮಾತನಾಡಿದ್ದು ಫಲಾನುಭವಿಗಳ ಕೋಟಾ ಪರ್ಸೆಂಟೇಜ್ ಕುರಿತು. ಅಂದರೆ ನಿಗಮದ ಸೌಲಭ್ಯಗಳನ್ನು ಹಂಚಿಕೆ ಮಾಡುವಾಗ ಸಚಿವರಿಗೆ ಇಷ್ಟು , ಅಧ್ಯಕ್ಷರಿಗಿಷ್ಟು ಅಂತ ಕೋಟಾ ಇರುತ್ತದೆ. ನನಗೆ ಇದ್ದಿದ್ದು 5 ಪರ್ಸೆಂಟ್ ಕೋಟಾ,ಆ ಪುಕಾರ ನಾನು ಹಂಚಿಕೆ ಮಾಡುತ್ತೇನೆ. ಅದನ್ನು ಕೊಡಿ ಎಂದು ನಾನು ಅಧಿಕಾರಿಗಳಿಗೆ ಹೇಳುತ್ತೇನೆ. ಅದನ್ನೇ ರೆಕಾರ್ಡ್ ಮಾಡಿ, ತಿರುಚುವ ಮೂಲಕ ಪರ್ಸೆಂಟೇಜ್ ಹಣ ಕೊಡಿ ಎಂದು ಕೇಳಿದರೂ ಎನ್ನಲಾಗಿದೆ. ಇದನ್ನು ಎಫ್ ಎಸ್ ಎಲ್ ಗೆ ವಹಿಸಬೇಕೆಂದು ಆಗ್ರಹಿಸಿದರು.
ಇದರ ವಿರುದ್ಧ ದೂರು ಕೊಡಲು ನಿರ್ಧರಿಸಿದ್ದೇನೆ. ಇದೊಂದು ವ್ಯವಸ್ಥಿತ ಷಡ್ಯಂತ್ರ. ಇದರ ಹಿಂದೆ ಕೆಲವು ಕಾಣದ ಕೈವಾಡಗಳಿವೆ. ದಲಿತ ವಿರೋಧಿಗಳು, ಶೋಷಿತ ಸಮುದಾಯದ ವಿರೋಧಿಗಳು ಕೆಲಸ ಮಾಡಿವೆ. ಆ ಕಾರಣದಿಂದಲೇ ನಾನು ಈ ಪ್ರಕರಣದ ಸಂಪೂರ್ಣ ತನಿಖೆ ಆಗಬೇಕೆಂದು ಒತ್ತಾಯಿಸುತ್ತಿದ್ದೇನೆ ಎಂದರು.
ರಾಜೀನಾಮೆ ಸರ್ಕಾರದ ನಿರ್ಧಾರ. ನಾನು ಮುಖ್ಯ ಮಂತ್ರಿಗಳನ್ನು, ಉಪ ಮುಖ್ಯಮಂತ್ರಿಗಳನ್ನು, ಸಂಬಂಧಪಟ್ಟ ಇಲಾಖೆ ಸಚಿವರನ್ನು ಭೇಟಿ ಮಾಡಿ ಇಲ್ಲಿ ಆಗಿದ್ದೇನು ಎನ್ನುವುದನ್ನು ತಿಳಿಸಬೇಕಿದೆ. ಮುಂದೆ ಅವರೇನು ನಿರ್ಧಾರ, ಸೂಚನೆ ನೀಡುತ್ತಾರೋ ಆ ಪ್ರಕಾರ ಮುಂದುವರೆಯುತ್ತೇನೆ ಎಂದರು. ನನಗೆ ಅಧಿಕಾರ ಮುಖ್ಯವಲ್ಲ, ಸಮಾಜ ಮತ್ತು ಪಕ್ಷಕ್ಕೆ ಮುಜುಗರ ಆಗಬಾರದು. ನಾಯಕರು ಏನೇ ಹೇಳಿದರೂ ಅವರ ತೀರ್ಮಾನಕ್ಕೆ ಬದ್ಧನಾಗಿರುತ್ತೇನೆ. ನನ್ನ ವಿರುದ್ಧದ ಷಡ್ಯಂತ ವಿಡಿಯೋ ಬಿತ್ತರಿಸುವ ಎಲ್ಲಾ ಮಾಧ್ಯಮಗಳ ವಿರುದ್ಧ ಕೋರ್ಟ್ ಗೆ ಹೋಗುವೆ. ವಿಡಿಯೋ ತಿರುಚಿದವರ ವಿರುದ್ಧವೂ ದೂರು ದಾಖಲಿಸಿ, ಸೂಕ್ತ ತನಿಖೆಗೂ ಒತ್ತಾಯಿಸುವೆ ಎಂದರು.