ಥಿಯೇಟರ್‌ನಿಂದ ಹಣ ಮಾಡಲು ಸಾಧ್ಯವಿಲ್ಲ : ರಂಗನಟ ಪ್ರಕಾಶ್ ಬೆಳವಾಡಿ ಅಭಿಮತ

Kranti Deepa

ಶಿವಮೊಗ್ಗ ಏ .09 : ಥಿಯೇಟರ್‌ನಿಂದ ಹಣ ಮಾಡಲು ಸಾಧ್ಯವಿಲ್ಲ. ನಾಟಕ ಮಾಡುವುದಕ್ಕೆ ರಂಗಮಂದಿರ ಸಿಗುವುದಿಲ್ಲ ಎಂದು ಹಿರಿಯ ರಂಗ ಹಾಗೂ ಚಿತ್ರ ನಟ ಪ್ರಕಾಶ್ ಬೆಳವಾಡಿ ಹೇಳಿದರು ಅವರು ಬುಧವಾರ ಸಂಜೆ ಬಹುಮುಖಿ ಶಿವಮೊಗ್ಗದ 50 ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.

. ಇಂದು ಅನೇಕ ಪತ್ರಕರ್ತರು ನಾಟಕ ಕಲೆಯನ್ನು ಹಾಳು ಮಾಡಲೆಂದು ವಿಮರ್ಶೆ ಬರೆಯುತ್ತಾರೆ. ಯಾವುದೇ ನಾಟಕ ಎಂಟು ಪ್ರದರ್ಶನ ಮಾಡಬೇಕೆಂದು ಯೋಚನೆ ಮಾಡಿದರೆ ಒಂದೇ ಪ್ರದರ್ಶನಕ್ಕೆ ಕಂಬಿ ಕೀಳುವಂತೆ ಮಾಡುತ್ತಾರೆ. ಚಲನ ಚಿತ್ರಕ್ಕೆ ಈ ಸಮಸ್ಯೆ ಇಲ್ಲ. ಅದ್ಭುತ ಪ್ರಚಾರ ಮಾಡಿ ಮೂರೇ ದಿನಕ್ಕೆ ಕೋಟಿ ರೂಪಾಯಿ ಮಾಡುತ್ತಾರೆ ಎಂದರು.

ಕರ್ನಾಟಕದಲ್ಲಿ ಚಿತ್ರ ನಿರ್ಮಿಸುವುದಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತದೆ. ಆದರೆ ನಾಟಕ ಕಲೆ ಪ್ರದರ್ಶಿಸುವುದಕ್ಕೆ ಯಾವುದೇ ಪ್ರೋತ್ಸಾಹ ಇಲ್ಲ. ಟಿವಿ ಮನುಷ್ಯರನ್ನು ಚಿಕ್ಕದಾಗಿ, ಸಿನಿಮಾ ದೊಡ್ಡದಾಗಿ ತೋರಿಸಿದರೆ  ನಾಟಕ ಮನುಷ್ಯರನ್ನು ಆತ ಇರುವಂತೆ ನೈಜವಾಗಿ ತೋರಿಸುತ್ತದೆ. ಮುಂಬೈಯಲ್ಲಿ  ನಾಟಕ ಕಲಾವಿದರು ಪ್ರೇಕ್ಷಕರು ಗಲಾಟೆ ಮಾಡಿದರೆ ನಾಟಕವನ್ನು ನಿಲ್ಲಿಸುತ್ತಾರೆ. ಆದರೆ ಕರ್ನಾಟಕದ ನಾಟಕ ಟೀಂನವರು ಅಷ್ಟು ಪ್ರಬಲರಾಗಿಲ್ಲ. ಸಿನಿಮಾ ಸುಳ್ಳನ್ನು ಸತ್ಯವೆಂದು ಹೇಳುತ್ತಾ ನಮ್ಮನ್ನು ಭ್ರಮಾಧೀನರನ್ನಾಗಿ ಮಾಡುತ್ತದೆ. ಆದರೆ ನಾಟಕ ಸತ್ಯ ಮಾತ್ರ ಹೇಳಬೇಕಾಗುತ್ತದೆ. ಹೆಚ್ಚೆಂದರೆ ಪಾತ್ರಧಾರಿ ನಾನು ಕೃಷ್ಣ ನಾನು ರಾಮ ಎಂದು ಹೇಳಬಹುದು ಅದು ತೆರೆದಿಟ್ಟ ರಹಸ್ಯ ಎಂದರು.

ಸಿನಿಮಾ ಕೇವಲ ಕ್ಯಾಮೆರಾ ಮತ್ತು ಫ್ರೇಮ್‌ಗಳ ಮೇಲೆ ನಿಂತಿದೆ. ಆದರೆ ನಾಟಕ ಪೂರ್ಣ ನೈಜ. ನಾಟಕಕ್ಕೆ ನಿರ್ದಿಷ್ಟವಾದ ವೇದಿಕೆ ಬೇಕಾಗಿಲ್ಲ. ರಸ್ತೆಯಿಂದ ಹಿಡಿದು ಅರಮನೆಯ ವೇದಿಕೆಯಲ್ಲೂ ಮಾಡಬಹುದು. ನಾಟಕಕ್ಕೆ ತಂತ್ರಜ್ಞಾನ ಹೆಚ್ಚು ಉಪಯೋಗಿಸಿದರೆ ಖರ್ಚು ಹೆಚ್ಚಾಗುತ್ತದೆ. ನಾಟಕ ರಚನೆ ಮಾಡಿದವರು ಮುಖ್ಯವಾಗುತ್ತಾರೆ ಹೊರತು ನಾಟಕ ಮಾಡಿದವರು ಅಲ್ಲ. ನಾಟಕದಲ್ಲಿ ಬರುವ ಎಲ್ಲಾ ರಸಗಳು ಆನಂದ ಭಾವ ಉಂಟು ಮಾಡುತ್ತವೆ ಎಂದರು.

ನಾಟಕ ಪ್ರೇಕ್ಷಕರ ನಾಡಿಮಿಡಿತ ಅನುಸರಿಸಿ ಪ್ರತಿ ಪ್ರದರ್ಶನದಲ್ಲೂ ಬದಲಾವಣೆ ಮಾಡುತ್ತದೆ. ಎಲ್ಲಿಯವರೆಗೆ ನಾಟಕ ನೋಡುವವರು  ಇರುತ್ತಾರೆಯೋ ಅಲ್ಲಿಯವರೆಗೆ ನಾಟಕ ಇರುತ್ತದೆ ಎಂದರು.
ಭಾಷಣದ ನಂತರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಕೇಳುಗರ ಪ್ರಶ್ನೆಗಳಿಗೆ ಉತ್ತರಿಸಿದರು.
ಬಹುಮುಖಿ ಸಂಚಾಲಕ ಪ್ರೊ. ನಾಗಭೂಷಣ್ ಸ್ವಾಗತಿಸಿ, ವಂದಿಸಿ  ನಿರ್ವಹಣೆ ಮಾಡಿದರು.

Share This Article
";