ಶಿವಮೊಗ್ಗ, ಫೆ .07 : ಫಸ್ಟ್ ರ್‍ಯಾಂಕ್ ರಾಜು ಖ್ಯಾತಿಯ ಗುರುನಂದನ್ ನಾಯಕರಾಗಿ ನಟಿಸಿರುವ ರಾಜು ಜೇಮ್ಸ್ ಬಾಂಡ್ ಚಿತ್ರ ಇದೇ ತಿಂಗಳ 14 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ, ಈ ಚಿತ್ರಕ್ಕೆ ದೀಪಕ್ ಮಧುವನಹಳ್ಳಿ ಆಕ್ಷನ್ ಕಟ್ ಹೇಳಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿದ ನಾಯಕನಟ ಗುರುನಂದನ್, ಚಿತ್ರದಲ್ಲಿ ನಾಯಕ ಅಣ್ಣಾವ್ರ ಅಭಿಮಾನಿ. ಅವರ ಬಾಂಡ್ ಶೈಲಿಯ ಚಿತ್ರಗಳನ್ನು ನೋಡುತ್ತ ಅದೇ ವ್ಯಕ್ತಿತ್ವವನ್ನು ತನ್ನ ಜೀವನದಲ್ಲಿಯೂ ಸಹ ಮೈಗೂಡಿಸಿಕೊಂಡಿರುತ್ತಾನೆ. ಬ್ಯಾಂಕ್ ಮ್ಯಾನೇಜರ್ ಆಗಬೇಕೆಂದು ಹೊರಟ ಆತನಿಗೆ ಜೀವನದಲ್ಲಿ ಎದುರಾಗುವ ಹಲವಾರು ಸಂದಿಗ್ಧ ಪರಿಸ್ಥಿತಿಗಳು, ಆತ ಅದನ್ನೆಲ್ಲ ಹೇಗೆ ನಿಭಾಯಿಸಿ ಜೇಮ್ಸ್ ಬಾಂಡ್ ಆಗುತ್ತಾನೆ ಎನ್ನುವುದೇ ಈ ಕಥಾಹಂದರ, ನಿರ್ದೇಶಕರು ಇಡೀ ಚಿತ್ರವನ್ನು ಹ್ಯೂಮರಸ್ ಆಗಿ ನಿರೂಪಿಸಿದ್ದಾರೆ ಎಂದರು.
ಚಿತ್ರದ ನಿರ್ದೇಶಕ ದೀಪಕ್ ಮಧುವನಹಳ್ಳಿ ಮಾತನಾಡಿ, ರಾಜು ಜೇಮ್ಸ್ ಬಾಂಡ್ ನನ್ನ ನಿರ್ದೇಶನದ ಮೂರನೇ ಚಿತ್ರ. ವಿಭಿನ್ನವಾದ ಕಥಾಹಂದರವನ್ನು ಈ ಚಿತ್ರದಲ್ಲಿ ಟ್ರೈ ಮಾಡಿದ್ದೇನೆ. ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಅವರು ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ. ಲಂಡನ್‌ನಲ್ಲಿ 21 ದಿನಗಳ ಚಿತ್ರೀಕರಣ ಮಾಡಿದ್ದಾಗಿ ಹೇಳಿದರು.
ಕಾಲ ನಾಯಕ ಗುರುನಂದನ್ ಮಾತನಾಡಿ, ದೀಪಕ್ ಮಧುವನಹಳ್ಳಿ ಅವರು ಒಂದೊಳ್ಳೆ ಕಥೆಯನ್ನು ಮಾಡಿಕೊಂಡಿದ್ದರು. ನಿರ್ಮಾಪಕ ಮಂಜು ವಿಶ್ವಕರ್ಮ ಹಾಗೂ ಕಿರಣ್ ಬರ್ತೂರ್ ಅವರು ಯಾವುದೇ ಕೊರತೆ ಬಾರದಂತೆ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ನಾನು ಈ ಹಿಂದೆ ಮಾಡಿದ ಎಲ್ಲಾ ಚಿತ್ರಗಳಿಗಿಂತ ಈ ಚಿತ್ರದ ಪಾತ್ರ ವಿಭಿನ್ನವಾಗಿರುತ್ತದೆ. ಅನೂಪ್ ಸೀಳಿನ್ ಅವರ ಸಂಗೀತದಲ್ಲಿ ಮೂಡಿಬಂದಿರುವ ಎಲ್ಲಾ ಹಾಡುಗಳು ಚೆನ್ನಾಗಿದೆ ಎಂದು ತಿಳಿಸಿದರು.
ಜೊತೆ ರಾಜು ಜೇಮ್ಸ್ ಬಾಂಡ್ ಒಂದೊಳ್ಳೆ ಚಿತ್ರ ಮುಂದೆಯೂ ಸಹ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರ್ಮಾಣ ಮಾಡುವ ಯೋಜನೆಯಿದೆ ಎಂದು ನಿರ್ಮಾಪಕರಾದ ಮಂಜುನಾಥ್ ವಿಶ್ವಕರ್ಮ ಹಾಗೂ ಕಿರಣ್ ಬರ್ತೂರು ಹೇಳಿಕೊಂಡರು.
ಈ ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿದ್ದು, ಅನೂಪ್ ಸೀಳಿನ್ ಅವರು ಸಂಗೀತ ಸಂಯೋಜಿಸಿದ್ದಾರೆ. ಮನೋಹರ್ ಜೋಶಿ ಅವರು ಛಾಯಾಗ್ರಹಣ ನಿರ್ವಹಿಸಿದ್ದಾರೆ. ಗುರುನಂದನ್ ನಾಯಕಿಯಾಗಿ ಮೃದಲಾ ನಟಿಸಿದ್ದಾರೆ. ರವಿಶಂಕರ್, ಸಾಧು ಕೋಕಿಲ, ಅಚ್ಯುತ್ ಕುಮಾರ್, ಚಿಕ್ಕಣ್ಣ, ಜೈಜಗದೀಶ್, ತಬಲಾನಾಣಿ, ಮಂಜುನಾಥ್ ಹೆಗಡೆ, ವಿಜಯ್ ಚೆಂಡೂರ್ ಮುಂತಾದವರು ಚಿತ್ರದ ಪ್ರಮುಖ ತಾರಾಬಳಗದಲ್ಲಿದ್ದಾರೆ.