ಬೆಂಗಳೂರು,ಆ.11 :ಸೆಪ್ಟೆಂಬರ್‌ನಲ್ಲಿ ಕ್ರಾಂತಿಯಾಗುತ್ತೆ ನೋಡ್ತಾ ಇರಿ ಅಂತ ಕ್ರಾಂತಿ ಕಿಡಿ ಹಚ್ಚಿದ್ದ ಹಿರಿಯ ಕೈ ನಾಯಕ ಮತ್ತು ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರನ್ನು ಹೈಕಮಾಂಡ್ ಕಟ್ಟಪ್ಪಣೆ ಮೇರೆಗೆ ಸಿಎಂ ಸಿದ್ದರಾಮಯ್ಯ ಸಚಿವ ಸಂಪುಟದಿಂದ ವಜಾಗೊಳಿಸಿದ್ದಾರೆ.ಮಳೆಗಾಲದ ಅಧಿವೇಶನ ಆರಂಭವಾದ ಮೊದಲ ದಿನವೇ ರಾಜಣ್ಣ ರಾಜೀನಾಮೆ ಕೊಟ್ಟಿದ್ದಾರೆ. ಇದೀಗ ಆಪ್ತನ ತಲೆದಂಡವಾಗಿದ್ದಕ್ಕೆ ಸಿಎಂ ಮೌನಕ್ಕೆ ಶರಣಾಗಿದ್ದಾರೆ.
ವಿಧಾನಸಭೆ ಕಲಾಪದ ವೇಳೆಯೂ ಯಾವುದೇ ಪ್ರತಿಕ್ರಿಯೆ ನೀಡದ ಸಿಎಂ, ವಿಧಾನಸೌಧದಿಂದ ಹೊರಡುವಾಗಲೂ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡದೇ ತೆರಳಿದ್ದಾರೆ. ಸದನದಲ್ಲೂ ರಾಜಣ್ಣ ವಜಾ ಬಗ್ಗೆ ಘೋಷಣೆ ಮಾಡದ ಸಿಎಂ, ಹೈಕಮಾಂಡ್ ಜೊತೆಗಿನ ಚರ್ಚೆ ಬಳಿಕ ನಾಳೆ ಸ್ಪಷ್ಟನೆ ನೀಡುವ ಸಾಧ್ಯತೆಗಳಿವೆ ಎಂದು ತಿಳಿದುಬಂದಿದೆ. ಇತ್ತ ರಾಜಣ್ಣ ಕೂಡ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ಸಿಎಂ ನಿವಾಸಕ್ಕೆ ತೆರಳಿದ್ದಾರೆ.
ಕೈಮುಗಿದು ಹೊರಟ ಡಿಕೆಶಿ:
ಇನ್ನೂ ರಾಜಣ್ಣ ಬಗ್ಗೆ ಪ್ರತಿಕ್ರಿಯೆಗೆ ನಿರಾಕರಿಸಿದ ಡಿಕೆಶಿ ಕೈಮುಗಿದು ಒಳ ಹೋದರು. ಗಂಭೀರ ಚರ್ಚೆ ಬಳಿಕ ಸಂಪುಟದಿಂದ ರಾಜಣ್ಣರನ್ನು ವಜಾ ಮಾಡಲು ರಾಜಭವನಕ್ಕೆ ಸಿಎಂ ಶಿಫಾರಸು ಪತ್ರ ರವಾನಿಸಿದರು. ರಾಜಣ್ಣ ವಜಾ ಶಿಫಾರಸ್ಸಿನ ಸಂಬಂಧ ಸಿಎಂಗೆ ಕರೆ ಮಾಡಿ ರಾಜ್ಯಪಾಲ ಗೆಹ್ಲೋಟ್ ಮಾತುಕತೆ ನಡೆಸಿದರು. ಇವತ್ತೇ ಗೆಜೆಟ್ ಆಗಬೇಕಿದೆ ಅಂಗೀಕರಿಸಿ ಅಂತ ಸಿಎಂ ಮನವಿ ಮಾಡಿದರು. ರಾಜ್ಯಪಾಲರ ಸೂಚನೆ ಮೇರೆಗೆ ಅವರ ವಿಶೇಷ ಕಾರ್ಯದರ್ಶಿಗಳು ಆದೇಶ ಪ್ರಕಟಿಸಿದರು. ಸಿಎಂ ಕಚೇರಿಯಲ್ಲಿ ಸಿಎಂ ಪುತ್ರ ರಾಜಣ್ಣ ಭಾವುಕರಾದಾಗ ಪೊನ್ನಣ್ಣ ಸಮಾಧಾನ ಮಾಡಿದ್ದಾರೆ. ಬಳಿಕ ಆಡಳಿತ ಮೊಗಸಾಲೆಯಲ್ಲಿ ಸಪ್ಪಗೆ ಅಪ್ಪ-ಮಗ ಕೂತಿದ್ದರು.ರಾಜಣ್ಣ ಅವರ ಇತ್ತೀಚಿನ ಹೇಳಿಕೆ ಗಳಿಂದಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಿಎಂ ಕಚೇರಿಯ ಮೂಲಗಳು ತಿಳಿಸಿವೆ.
2024 ರ ಲೋಕಸಭಾ ಚುನಾ ವಣೆಯ ಸಂದರ್ಭದಲ್ಲಿ ಮಹದೇವಪುರ ವಿಧಾನ ಸಭಾ ಕ್ಷೇತ್ರದಲ್ಲಿ ನಡೆದ ಮತ ಕಳ್ಳತನ”ಕ್ಕೆ ಸಿದ್ದರಾಮಯ್ಯ ಅವರ ನಿಷ್ಠಾವಂತ ರಾಜಣ್ಣ, ಕರ್ನಾಟಕದಲ್ಲಿ ತಮ್ಮ ಪಕ್ಷದ ನೇತೃತ್ವದ ಸರ್ಕಾರವನ್ನು ದೂಷಿಸಿದಾಗ ಕಾಂಗ್ರೆಸ್ ಹೈಕಮಾಂಡ್‌ನ ಕೋಪಕ್ಕೆ ಗುರಿಯಾಯಿತು.ರಾಹುಲ್ ಗಾಂಧಿ ಇತ್ತೀಚೆಗೆ ನವ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು ಮತ್ತು ನಂತರ ಬೆಂಗಳೂರಿನಲ್ಲಿ ನಡೆದ ಸಾರ್ವಜನಿಕ ಸಭೆಯಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಅಕಾರಕ್ಕೆ ಬಂದದ್ದು ‘ಮತ ಕಳ್ಳತನ’ದಿಂದ ಎಂದು ಹೇಳಿದ್ದರು.
ಬೆಂಗಳೂರು ಕೇಂದ್ರ ಸಂಸ ದೀಯ ಕ್ಷೇತ್ರದ ವ್ಯಾಪ್ತಿಯ ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ನಕಲಿ ಮತದಾರರು ಇದ್ದಾರೆ ಎಂದು ಅವರು ಉಲ್ಲೇಖಿಸಿದರು.
ಆದರೆ ರಾಹುಲ್ ಗಾಂಧಿ ಆರೋಪದ ಬೆನ್ನಲ್ಲೆ ಕೆಎನ್ ರಾಜಣ್ಣ ಮತ ಕಳ್ಳತನಕ್ಕೆ ಕಾಂಗ್ರೆಸ್ ಸರ್ಕಾರವನ್ನೇ ದೂಷಿಸಿದ್ದರು.ಕರ್ನಾಟಕದಲ್ಲಿ ಕಾಂಗ್ರೆಸ್ ಅಕಾರದಲ್ಲಿದ್ದಾಗ ಅಕ್ರಮಗಳು ನಡೆದಿವೆ ಎಂದು ಸಚಿವರು ಹೇಳಿದರು ಮತ್ತು ಅದು ನಮ್ಮ ಕಣ್ಣ ಮುಂದೆಯೇ ಸಂಭವಿಸಿದೆ ಎಂದು ಆರೋಪಿಸಿದರು.ರಾಜಣ್ಣ ಕಳೆದ ಎರಡು ತಿಂಗಳಿನಿಂದ ಸೆಪ್ಟೆಂಬರ್ ಕ್ರಾಂತಿಯ ಬಗ್ಗೆ ಸುಳಿವು ನೀಡಿ ಸುದ್ದಿಗಳಲ್ಲಿದ್ದಾರೆ, ಇದು ಸರ್ಕಾರದಲ್ಲಿ ದೊಡ್ಡ ಕ್ರಾಂತಿಯ ಊಹಾಪೋಹಗಳಿಗೆ ಕಾರಣವಾಯಿತು.
ದೆಹಲಿಗೆ ಹೋಗಿ ವರಿಷ್ಠರನ್ನ ಭೇಟಿ ಮಾಡುತ್ತೇನೆ. ನನ್ನ ಬಗ್ಗೆ ಅವರಿಗಿರುವ ತಪ್ಪು ತಿಳುವಳಿಕೆಯನ್ನ ಸರಿ ಪಡಿಸುತ್ತೇನೆ. ಏಕಾಗಿ ಸಚಿವ ಸ್ಥಾನದಿಂದ ತೆಗೆದರು ಎಂಬುದನ್ನು ಕೇಳುತ್ತೇನೆ ನಮ್ಮ ನಾಯಕ ರಾಹುಲ್ ಗಾಂಧಿಯವರ ಬಗ್ಗೆ ನನಗೆ ಅಪಾರ ಗೌರವವಿದೆ. ಇದನ್ನು ಕೂಡ ವರಿಷ್ಠರಿಗೆ ತಿಳಿಸುತ್ತೇನೆ. ಮಾಜಿ ಸಚಿವ ಎಂದು ಕರೆಸಿಕೊಳ್ಳುವುದಕ್ಕೆ ನನಗೆ ಖುಷಿ ಇದೆ.
-ಕೆ.ಎನ್. ರಾಜಣ್ಣ