ಮತ್ತೆ ಸಣ್ಣಪತ್ರಿಕೆಗಳ ಕಾಲ ಬರಲಿದೆ ಕ್ರಾಂತಿದೀಪ ಮಂಜುನಾಥ ಅಭಿನಂದನೆಯಲ್ಲಿ ರವೀಂದ್ರ ಭಟ್ ಹೇಳಿಕೆ

Kranti Deepa

ಶಿವಮೊಗ್ಗ,ಡಿ. 07 : ಇಂದು ಪತ್ರಿಕೆಗಳೆಲ್ಲ ಓದುವ ಬದಲು ಕೇವಲ ನೋಡುವ ಪತ್ರಿಕೆಗಳಾಗಿವೆ. ಜನರು ಪತ್ರಿಕೆ ಓದುವುದನ್ನು ದೂರ ಮಾಡಿದ್ದಾರೆ ಎಂದು ಪ್ರಜಾವಾಣಿ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ರವೀಂದ್ರ ಭಟ್ ಹೇಳಿದರು.

ಅವರು ಶನಿವಾರ ಪತ್ರಿಕಾ ಭವದಲ್ಲಿ ಕ್ರಾಂತಿದೀಪ ಸಂಪಾದಕ ಎನ್ ಮಂಜುನಾಥ ಅವರಿಗೆ ಮೊಹರೆ ಹಣಮಂತರಾಯ ಪ್ರಶಸ್ತಿ ಬಂದ ಹಿನ್ನೆಲೆಯಲ್ಲಿ ಅಭಿಮಾನಿಗಳು ಏರ್ಪಡಿಸಿದ್ದ ಅಭಿನಂದನಾ ಸಮಾರಂಭದ ಉದ್ಘಾಟಿಸಿ ಮಾತನಾಡಿದರು.

ಪತ್ರಕರ್ತರೆಂದರೆ ಈ ಹಿಂದೆ ಒಂದು ವರ್ಗವಿತ್ತು. ಆದರೆ ಈಗ ಎಲ್ಲರೂ ಪತ್ರಕರ್ತರಾಗಿದ್ದಾರೆ. ತಮ್ಮ ಬರಹ ಪತ್ರಿಕೆಯಲ್ಲಿ ಪ್ರಕಟವಾಗದಿದ್ದರೆ ಜಾಲತಾಣಗಳಲ್ಲಿ ಪ್ರಕಟಿಸುತ್ತಾರೆ ಎಂದ ಅವರು, ದೊಡ್ಡ ಪತ್ರಿಕೆಗಳು ಇನ್ನು ಉಳಿಯುವುದು ಕಷ್ಟವಿದೆ. ಸಣ್ಣಪತ್ರಿಕೆಗಳ ಕಾಲ ಕಾಲ ಬರಲಿದೆ. ದೇಶವಿದೇಶಗಳ ಸುದ್ದಿಯನ್ನು ಸಾಮಾಜಿಕ ಜಾಲತಾಣಗಳು ತಕ್ಷಣ ಪ್ರಕಟಿಸುವುದರಿಂದ ಇದರಿಂದ ಸಣ್ಣ ಪತ್ರಿಕೆಗಳಿಗೆ ಪ್ರಾಮುಖ್ಯತೆ ಹೆಚ್ಚಿದೆ. ಸ್ಥಳೀಯ ಸುದ್ದಿಯನ್ನು ಜನರು ನೋಡುತ್ತಾರೆ. ರಾಜ್ಯಮಟ್ಟದ ಪತ್ರಿಕೆಗಳು ಪ್ರತಿ ಜಿಲ್ಲೆಯಲ್ಲಿ ಪತ್ರಿಕೆಯನ್ನು ಮಾಡಬೇಕಾದ ಸ್ಥಿತಿ ಬಂದಿದೆ ಎಂದರು.

ಇಂದು ಮೊಬೈಲ್ ಯುಗವಾದ್ದರಿಂದ ಪತ್ರಿಕೆ ಓದುವವರು ದೂರವಾಗುತ್ತಿದ್ದಾರೆ. ಹಿಂದೆ ನಮ್ಮ ತಂದೆ ತಾಯಿ ಮತ್ತು ಗುರುಗಳು ಪತ್ರಿಕೆ ಮತ್ತು ಪುಸ್ತಕ ಓದುವುದನ್ನು ಕಲಿಸಿಕೊಟ್ಟಿದ್ದರು. ಆದರೆ ಇಂದು ನಾವು ಪತ್ರಿಕೆ-ಪುಸ್ತಕ ಓದುತ್ತಿದ್ದೇವೆ. ನಮ್ಮ ಮಕ್ಕಳಿಗೆ ಪತ್ರಿಕೆ ಓದುವುದನ್ನು ನಾವು ಕಲಿಸಬೇಕಿದೆ. ಸುಮಾರು 2000 ಇಸವಿಯ ಹೊತ್ತಿಗೆ ಖಾಸಗಿ ಚಾನೆಲ್‌ಗಳು ಆರಂಭವಾದಾಗ ಪತ್ರಿಕೆಗಳು ಇನ್ನು ಬದುಕುವುದು ಕಷ್ಟ ಎಂದು ಜನರು ನಂಬಿದ್ದರು. ಆದರೆ ಅದರ ನಂತರವೇ ಕೆಲವು ರಾಜ್ಯಮಟ್ಟದ ಪತ್ರಿಕೆಗಳು ಹುಟ್ಟಿ ಇಂದು ಅತ್ಯುತ್ತಮ ಪ್ರಸರಣ ಹೊಂದಿವೆ. ಇದರಿಂದ ಪತ್ರಿಕೆಗೆ ಯಾವ ಪರಿಣಾಮವೂ ಆಗಿಲ್ಲ ಎನ್ನುವುದು ಸಾಬೀತಾಗಿದೆ ಎಂದು ಹೇಳಿದರು.

ಹಿಂದೆ ಸೇವಾ ಮನೋಭಾವನೆಯಿಂದ ಪತ್ರಿಕೆಗಳನ್ನು ಆರಂಭಿಸಲಾಗುತ್ತಿತ್ತು. ಯಾವುದೇ ಕೆಡುಕು ಮಾಡದೆ ಸಮಾಜಕ್ಕೆ ಉತ್ತಮ ಸೇವೆ ಸಲ್ಲಿಸಲಾಗುತ್ತಿತ್ತು ಆದರೆ ಈಗ ಅದು ಉಳಿದಿಲ್ಲ ಎಂದು ವಿಷಾದಿಸಿದರು.

ಜಾಹೀರಾತು ಕಡಿಮೆಯಾಗುತ್ತಿದೆ:
ಮುಖ್ಯ ಅತಿಥಿಯಾಗಿದ್ದ ಹೊನಕೆರೆ ನಂಜುಂಡೇಗೌಡ ಮಾತನಾಡಿ, 35 ವರ್ಷಗಳ ಹಿಂದೆ ಕ್ರಾಂತಿದೀಪ ಪತ್ರಿಕೆ ಆರಂಭಿಸಿ ಇನ್ನು ಅದನ್ನು ಉತ್ತಮ ಮಟ್ಟದಲ್ಲಿ ನಡೆಸಿಕೊಂಡು ಹೋಗುತ್ತಿರುವುದು ನಿಜಕ್ಕೂ ಸಾಹಸದ ಕೆಲಸ. ಹಿಂದೆ ಪತ್ರಿಕೆಯನ್ನು ನಡೆಸುವುದೇ ಕಷ್ಟವಾಗಿತ್ತು. ಯಾವುದೇ ಸೌಲಭ್ಯವಿಲ್ಲದೆ ಸಮಯದಲ್ಲೂ ಪತ್ರಿಕೆಗಳು ಬೆಳೆದು ಬಂದಿದೆ. ದೊಡ್ಡಪತ್ರಿಕೆಗಳು ಹೊಡೆತ ಹೆಚ್ಚಿತ್ತು. ಇದರಿಂದ ಸ್ಥಳೀಯ ಪತ್ರಿಕೆಗಳು ಬದುಕುವುದು ಕಷ್ಟವಿತ್ತು. ಆದರೂ ಓದುಗರ ಸಂಖ್ಯೆ ಕಡಿಮೆಯಾಗದೆ ಕ್ರಾಂತಿದೀಪ ಬೆಳೆದಿದೆ ಎಂದರು.

ಕೆಲವು ಪತ್ರಿಕಾ ಕಚೇರಿಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಪತ್ರಕರ್ತರಿಗೆ ಜಾಹೀರಾತು ತರುವಂತೆ ಒತ್ತಡ ಹೇರಲಾಗುತ್ತಿದೆ. ಇದರಿಂದ ಪತ್ರಿಕೆ ನಿಷ್ಠುರವಾಗಿ ನಡೆಸುವುದು ಕಷ್ಟವಾಗಿದೆ. ೧೫ ವರ್ಷದಿಂದ ಈಚೆಗೆ ಜಾಹೀರಾತುಗಳ ಪ್ರಮಾಣ ತೀವ್ರ ಕಡಿಮೆಯಾಗಿದೆ. ಪ್ರತಿಕೂಲ ಪರಿಸ್ಥಿತಿಯನ್ನು ಸಣ್ಣಪತ್ರಿಕೆಗಳು ಎದುರಿಸುವ ಸ್ಥಿತಿಯಲ್ಲಿ ಎಂದು ಹೇಳಿದರು.

ಸಮಾಜ ಸೇವಕ ಎಂ ಶ್ರೀಕಾಂತ ಮಾತನಾಡಿ, ಎನ್. ಮಂಜುನಾಥ್ ಅವರು ಕ್ರಾಂತಿದೀಪ ಪತ್ರಿಕೆಯನ್ನು ಹೋರಾಟದ ಮೂಲಕ ಬೆಳೆಸಿಕೊಂಡು ಬಂದವರು. ಕೆಟ್ಟದ್ದನ್ನು ಬರೆಯುತ್ತಾರೆ ಎಂಬ ದೃಷ್ಟಿಯಲ್ಲಿ ಅವರ ಮೇಲೆ ಯತ್ನ ನಡೆಯಿತು. ಮತ್ತು ಅವರ ಕಚೇರಿ ಮೇಲೆ ದಾಳಿ ನಡೆಸಲಾಯಿತು. ಆದರೂ ಎದೆಗುಂದದೆ ಪತ್ರಿಕೆಯನ್ನು ಇಂದಿಗೂ ಹೊರತರುತ್ತಿದ್ದಾರೆ. ಆದರೆ ಓದುಗರ ಪ್ರಮಾಣ ಎಲ್ಲಾ ಕಡೆ ಕಡಿಮೆಯಾಗುತ್ತಿದೆ. ಕೇರಳ ಮತ್ತು ತಮಿಳುನಾಡುಗಳಲ್ಲಿ ಕ್ಲೀನರ್ ಮತ್ತು ಹಮಾಲಿಗಳು ಸಹ ಪತ್ರಿಕೆಯನ್ನು ಓದುತ್ತಾರೆ. ಆದರೆ ಕರ್ನಾಟಕದಲ್ಲಿ ಪೇಪರ್ ಅನ್ನು ಖರೀದಿಸುವವರು ಇಲ್ಲ ಎಂದು ವಿಷಾದಿಸಿದರು.

ಬೋವಿ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ರವಿಕುಮಾರ್ ಮಾತನಾಡಿ, ಪ್ರಾಮಾಣಿಕ ಪತ್ರಕರ್ತರು ಎಂದು ಕಡಿಮೆಯಾಗುತ್ತಿದ್ದಾರೆ. ಮಂಜುನಾಥ್ ಪ್ರಾಮಾಣಿಕ ಮತ್ತು ನಿಷ್ಠ್ಠುರ ಪತ್ರಕರ್ತರು. ಅವರು ಹಿಡಿದ ಯಾವುದೇ ಕಾರ್ಯವನ್ನು ಮುಗಿಸದೇ ಬಿಡುವವರಲ್ಲ. ಜೊತೆಗೆ ಪ್ರಾಮಾಣಿಕರು. ನನಗೆ ಸಹವರ್ತಿಯಾಗಿದ್ದು ತಮ್ಮ ಓಣಿಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮಗಳ ನಾಯಕತ್ವ ವಹಿಸಿ ಯಶಸ್ವಿಯಾಗಿ ಅದನ್ನು ಮುಗಿಸುತ್ತಿದ್ದರು. ಇಂದಿಗೂ ಸಹ ಅಷ್ಟೇ ಯಶಸ್ವಿಯಾಗಿ ಅವರು ಹಿಡಿದ ಕಾರ್ಯವನ್ನು ಮುಂದುವರೆಸುತ್ತಾರೆ. ಕ್ರಾಂತಿದೀಪ ಹೆಸರನ್ನು ಶಿವಮೊಗ್ಗದಲ್ಲಿ ಅಚ್ಚಳಿಯದೆ ಉಳಿಸಿದ್ದಾರೆ ಎಂದು ವಿವರಿಸಿದರು.

ಮಾನವೀಯ ಗುಣವುಳ್ಳವರು:
ಅಭಿನಂದನಾ ಭಾಷಣ ಮಾಡಿದ ಕನ್ನಡ ಮೀಡಿಯಂ 24 X 7 ಸಂಪಾದಕ ಹೊನ್ನಾಳಿ ಚಂದ್ರಶೇಖರ್, ಮಂಜುನಾಥ್ ಕೇವಲ ಪತ್ರಕರ್ತರು ಮಾತ್ರ ಅಲ, ಸೈಕ್ಲಿಸ್ಟ್, ಈಜುಪಟು ಕೂಡ ಆಗಿದ್ದಾರೆ. ಅವರ ಸಂಘಟನಾತ್ಮಕ ಶಕ್ತಿಯನ್ನು ಎಲ್ಲರೂ ಮೆಚ್ಚಲೇಬೇಕು. ಹಿಡಿದ ಕೆಲಸವನ್ನು ಮಾಡಿ ತೋರಿಸುತ್ತಾರೆ. ಅವರ ಪತ್ರಿಕೆಯಲ್ಲಿ ಕೆಲಸ ಮಾಡಿದ ಶೇ. ೮೦ ರಷ್ಟು ಜನ ಇಂದು ರಾಜ್ಯ ಮತ್ತು ರಾಷ್ಟ್ರಮಟ್ಟದ ಪತ್ರಿಕೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಸ್ವಂತ ಪತ್ರಿಕೆಯನ್ನು ಆರಂಭಿಸಿದ್ದಾರೆ. ಕೆಲಸಗಾರರಿಗೆ ಉತ್ತಮ ಸ್ಪಂದನೆ ನೀಡುತ್ತ, ಅವರ ಕಷ್ಟನಷ್ಟಗಳಲ್ಲಿ ನೆರವಾಗುವ ಮಾನವೀಯತೆಯನ್ನು ಬೆಳೆಸಿಕೊಂಡಿದ್ದಾರೆ ಎಂದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಮಂಜುನಾಥ್, ೧೯೮೯ ರಲ್ಲಿ ರಾಮಪ್ಪ ಮತ್ತು ಮಿಂಚು ಶ್ರೀನಿವಾಸ್ ಅವರ ಮಾರ್ಗದರ್ಶನದಲ್ಲಿ ಪತ್ರಿಕೆ ಆರಂಭಿಸಿ ಹೋರಾಟದ ನಡುವೆ ನಡೆಸಿದ್ದೇನೆ. ಸಂಕಷ್ಟಗಳ ಸರಮಾಲೆಯಲ್ಲಿ ಪತ್ರಿಕೆ ಬೆಳೆದು ಬಂದಿದೆ. ಇದಕ್ಕೆ ಹಲವರು ಕಾರಣ. ಶಿವಮೊಗ್ಗದ ಜನತೆ ಸಹ ಪತ್ರಿಕೆಯನ್ನು ಬೆಳೆಸಿದ್ದಾರೆ. ಪತ್ರಿಕೋದ್ಯಮದಲ್ಲಿ ನಿಲ್ಲಲು ಕಠಿಣ ತಪಸ್ಸನ್ನು ಮಾಡಿದ್ದೇನೆ. “ದೀಪ” ಆರದಂತೆ ಮುನ್ನಡೆಸಿದ್ದೇನೆ ಎಂದು ಭಾವಪೂರ್ಣವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿಯ ಅಧ್ಯಕ್ಷ ಎಂ ಎನ್ ಸುಂದರರಾಜ್ ಮಾತನಾಡಿ, ಮಂಜುನಾಥ್ ಅವರದು ಜನಾಕರ್ಷಣೆಯ ವ್ಯಕ್ತಿತ್ವ. ಎಲ್ಲರಿಗೂ ಸಹಕಾರ ಕೊಡುವ ಮನೋಭಾವ ಮತ್ತು ಸಮಚಿತ್ತದಿಂದ ಎಲ್ಲವನ್ನೂ ಸ್ವೀಕರಿಸುವ ಗುಣವಿದೆ. ಇದರಿಂದಲೇ ಅವರು ಪತ್ರಿಕೆಯನ್ನು ಅತ್ಯುತ್ತಮ ರೀತಿಯಲ್ಲಿ ರೂಪಿಸಿದ್ದಾರೆ ಎಂದು ವಿವರಿಸಿದರು.
ಮಂಜುನಾಥ್ ಅವರನ್ನು ಹಾರ, ಶಾಲು ಹಾಕಿ ಪೇಟ ತೊಡಿಸಿ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.

ಅಭಿನಂದನಾ ಸಮಿತಿಯ ಸದಸ್ಯ ಎಸ್ ಎಸ್ ವಾಗೀಶ್ ಸ್ವಾಗತಿಸಿದರು. ಶಾಂತಾ ಶೆಟ್ಟಿ ನಿರೂಪಣೆ ಮಾಡಿದರು. ದೇವಕುಮಾರ್ ವಂದಿಸಿದರು. ಈ ಸಂದರ್ಭದಲ್ಲಿ ನಗರದ ಹಲವು ಗಣ್ಯರು ಮತ್ತು ಸಂಘಟನೆಗಳು ಮಂಜುನಾಥ್ ಅವರನ್ನು ಗೌರವಿಸಿದರು.

ಕಚ್ಚುವ ಸಮಯ ಬಂದಿದೆ

ಕೊವಿಡ್ ನಂತರ ದೊಡ್ಡಪತ್ರಿಕೆಗೆ ಭಾರಿ ದೊಡ್ಡ ಪೆಟ್ಟು ಬಿದ್ದಿದೆ, ಓದುಗರು ತುಂಬಾ ಸಂಖ್ಯೆಯಲ್ಲಿ ಕಡಿಮೆಯಾಗಿದ್ದಾರೆ. ಜಾಹಿರಾತು ಪ್ರಮಾಣ ಇಳಿ ಮುಖವಾಗಿದೆ. ಇದರಿಂದ ತೀರಾ ಸಂಕಷ್ಟದಲ್ಲಿವೆ. ಡಿಜಿಟಲ್ ಮಾಧ್ಯಮಕ್ಕೆ ಹೆಚ್ಚಿನ ಜಾಹಿರಾತುಗಳು ಹೋಗುತ್ತಿವೆ. ಪತ್ರಕರ್ತರು ಈಗ ಬೊಗಳುವ ಮತ್ತು ಕಚ್ಚುವ ಸಮಯ ಬಂದಿದೆ. ಇದನ್ನು ಉಳಿಸಿಕೊಂಡರೆ ಮಾತ್ರ ಜನರ ವಿಶ್ವಾಸ ಪತ್ರಿಕೋದ್ಯಮದ ಮೇಲೆ ಉಳಿಯುತ್ತದೆ ಯಾವುದೇ ಪತ್ರಿಕೆಗಳಿಗೂ ಈಗ ಸಿದ್ಧಾಂತ ಎನ್ನುವುದಿಲ್ಲ. ಕೇವಲ ಸ್ವಾರ್ಥಕ್ಕಾಗಿ ಅಷ್ಟೇ ನಡೆಯುತ್ತಿದೆ. ಪತ್ರಿಕೆ ಓದಿದರೆ ನನಗೆ ಏನು ಲಾಭ ಎಂದು ಕೇಳುವಂತಹ ಪರಿಸ್ಥಿತಿ ಎದುರಾಗಿದೆ
– ರವೀಂದ್ರ ಭಟ್ಟ

ಮೌಲ್ಯ ಉಳಿಯಲಿ

ಇಂದು ಒಬ್ಬ ವ್ಯಕ್ತಿಗೆ ಪ್ರಶಸ್ತಿ ಬಂತು ಎಂದರೆ ಅವನನ್ನು ಅನುಮಾನ ಮತ್ತು ಅಪನಂಬಿಕೆಯಿಂದಲೇ ಕಾಣುವಂತಾಗಿದೆ. ಏಕೆಂದರೆ ಜಾತಿ, ಲಾಬಿ, ಪ್ರಭಾವ ಮತ್ತು ರಾಜಕಾರಣ ಬಳಸಿ ಪ್ರಶಸ್ತಿ ಗಿಟ್ಟಿಸುವವರು ಜಾಸ್ತಿಯಾಗಿದ್ದಾರೆ. ಆದ್ದರಿಂದ ಪ್ರಶಸ್ತಿಗಳು ಮೌಲ್ಯ ಕಳೆದುಕೊಂಡಿವೆ. ಪ್ರಶಸ್ತಿ ಮೌಲ್ಯ ಜಾಸ್ತಿ ಆಗಬೇಕೆಂದರೆ ಮಂಜುನಾಥ್ ಅವರಿಗೆ ಅಂತವರಿಗೆ ಅದು ದಕ್ಕಬೇಕು. ಇದರಿಂದ ಪ್ರಶಸ್ತಿಗಳ ಮೇಲೆ ಜನರಿಗೆ ನಂಬಿಕೆ ಉಳಿಯುತ್ತದೆ ಎಂದರು.
– ಹೊನಕೆರೆ ನಂಜುಂಡೇಗೌಡ

Share This Article
";