ಅರಣ್ಯ ಇಲಾಖೆಯ ಬಂಧಿಯಾಗುವ ಮುನ್ನವೇ ಇಹಲೋಕ ತ್ಯಜಿಸಿದ ಪುಂಡಾನೆ

Kranti Deepa
ಚನ್ನಪಟ್ಟಣ, ಅ.04  : ಕಳೆದ ಹತ್ತಾರು ವರ್ಷಗಳಿಂದ ನಿರಂತರವಾಗಿ ಕಾಡಾನೆ ಹಾವಳಿಗೆ ಬೇಸತ್ತ ರೈತರು ಸರ್ಕಾರ ಹಾಗೂ ಅರಣ್ಯ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತವಾದ ಹಿನ್ನಲೆಯಲ್ಲಿ ಅರಣ್ಯ ಇಲಾಖೆ ಪುಂಡಾನೆ ಸೆರೆಗೆ ಸರ್ಕಾರದ ಅನುಮತಿ ಪಡೆದು ಕಾರ್ಯಚರಣೆಗೆ ಸಿದ್ದವಾಗುತ್ತಿದ್ದ ಬೆನ್ನಲ್ಲೇ ಕಳೆದ ರಾತ್ರಿ ಪುಂಡಾನೆ ವಿದ್ಯುತ್ ತಂತಿ ತಗುಲಿ ಇಹಲೋಕ ತ್ಯಜಿಸಿದೆ.
ತಾಲ್ಲೂಕಿನ ಗೊಲ್ಲರದೊಡ್ಡಿ ಗ್ರಾಮದ ಬಳಿ ಬ್ರಹ್ಮಣಿಪುರ ಗ್ರಾಮದ ಈರಯ್ಯ ಎಂಬುವರ  ತೆಂಗಿನ ತೋಟಕ್ಕೆ ಬೆಳಗಿನ ಜಾವ ನುಗ್ಗಿದ ಕಾಡಾನೆ ತೆಂಗಿನ ಮರದ ಸುಳಿ ತಿನ್ನಲು ಮರವನ್ನ ಬಾಗಿಸಿದೆ, ಈ ವೇಳೆ ಮರದ ಮೇಲೆ ಹಾದು ಹೋಗಿದ್ದ 11 ಕೆವಿ ಸಾಮರ್ಥ್ಯದ ವಿದ್ಯುತ್ ತಂತಿಗೆ ಮರ ತಗುಲಿದ ಪರಿಣಾಮ ವಿದ್ಯುತ್ ಪ್ರವಹಿಸಿ ಕಾಡಾನೆ ಸ್ಥಳದಲ್ಲೇ ಮೃತಪಟ್ಟಿದೆ.
 ಇ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಗ್ರಾಮಸ್ಥರು ಕೆಲ ಕಾಲ ಮಾತಿಗೆ ಮಾತು ಬೆಳೆಸಿ ವಾಗ್ವಾದ ನಡೆಸಿದರು. ಇನ್ನೂ ವಿದ್ಯುತ್ ತಂತಿಗೆ ಬಲಿಯಾದ ಕಾಡಾನೆ ಸುಮಾರು 35 -40 ವರ್ಷದ ಗಂಡಾನೆಯಾಗಿದ್ದು, ಪಶುವೈದ್ಯ ರಿಂದ ಮರಣೋತ್ತರ ಪರೀಕ್ಷೆ ನಡೆಸಿ ಕಾಡಾನೆ ಮೃತಪಟ್ಟ ಸ್ಥಳದಲ್ಲೇ ಮಣ್ಣು ಮಾಡಲಾಯಿತು. ಸ್ಥಳದಲ್ಲಿ ಡಿಎಪ್ಓ ರಾಮಕೃಷ್ಣಪ್ಪ.ಎಂ, RFO ಮಲ್ಲೇಶ್, ರಾಮನಗರ RFO ಮಹಮದ್ ಮನ್ಸೂರ್ ಸೇರಿದಂತೆ ಹಲವು ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಚನ್ನಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ಪೋಲಿಸರು ಸ್ಥಳದಲ್ಲಿ ಬೀಡುಬಿಟ್ಟು ಭದ್ರತೆ ಒದಗಿಸಿದರು.

Share This Article
";