ಬೆಳಗಾವಿ,ಜ.09 : ಕಳೆದ ಕೆಲವು ದಿನಗಳಿಂದ ರೈತರ ಹೊಲಗಳಿಗೆ ನುಗ್ಗಿ ದಾಂದಲೆ ಮಾಡಿ ಭಯ ಹುಟ್ಟಿಸಿದ್ದ ಒಂಟಿ ಸಲಗವನ್ನ ಸೆರೆಹಿಡಿಯುವಲ್ಲಿ ಸಕ್ಕರೆಬೈಲು ಗಜಪಡೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಯಶಸ್ವಿಯಾಗಿದ್ದಾರೆ.
ಬೆಳಗಾವಿ ಸಮೀಪದ ಖಾನಾಪುರ ಬಳಿ ಬಿಡಿ ಗ್ರಾಮದಲ್ಲಿ ಈ ಆನೆ ಕಾಣಿಸಿಕೊಂಡಿತ್ತು. ಈ ಬಗ್ಗೆ ಗ್ರಾಮಸ್ಥರು ಅರಣ್ಯ ಇಲಾಖೆಗೆ ಹಲವು ಬಾರಿ ಮನವಿ ಮಾಡಿದ್ದರು.
ಇದರಿಂದ ಎಚ್ಚೆತ್ತುಕೊಂಡ ಇಲಾಖೆ ಅಧಿಕಾರಿಗಳು ಶಿವಮೊಗ್ಗ ಸಮೀಪ ಸಕ್ಕರೆಬೈಲು ಆನೆ ಬಿಡಾರದಿಂದ 4 ಆನೆಗಳನ್ನ ಕರೆಸಿಕೊಂಡು ಅರವಳಿಕೆ ತಜ್ಞರೊಂದಿಗೆ ಕಾಡನೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ.
ಇದೀಗ ಕಾಡಾನೆ ಸಕ್ಕರೆಬೈಲಿ ನತ್ತ ಪ್ರಯಾಣ ಬೆಳೆಸಿದ್ದು ಅದನ್ನು ಸಕ್ಕರೆಬೈಲಿನ ಕ್ರೋಲ್ ನಲ್ಲಿ ಕೆಲವು ದಿನಗಳ ಕಾಲ ಇಡಲಾಗುತ್ತದೆ.12 ವರ್ಷದ ಈ ಒಂಟಿ ಸಲಗ ಗ್ರಾಮಸ್ಥರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿತ್ತು ಆನೆಯನ್ನು ಸೆರೆ ಹಿಡಿದಿದ್ದರಿಂದ ಗ್ರಾಮಸ್ಥರು ನಿಟ್ಟಿಸಿರುಬಿಟ್ಟಿದ್ದಾರೆ.
ಬಾಲಣ್ಣ,ಸೋಮಣ್ಣ,ಬಹದ್ದೂರ್ ,ಸಾಗರ ಎಂಬ ಹೆಸರಿನ ನಾಲ್ಕು ಆನೆಗಳು ಬೆಳಗಾವಿಗೆ ತೆರಳಿದ್ದವು,ಪಶುವೈದ್ಯ ಡಾ|| ರಮೇಶ್ ನೇತೃತ್ವದಲ್ಲಿ ಈ ಆನೆಗಳ ಮಾವುತರು ಕಾವಾಡಿಗಳು ಸಹ ಬೆಳಗಾವಿಗೆ ತೆರಳಿದ್ದರು.