ಬೆಂಗಳೂರು, ಆ. 18 : ಪ್ರತಿಯೊಬ್ಬರೂ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ಮುಂದಾಗಬೇಕು. ಸರಿಯಾದ ಜೀವನಶೈಲಿ ಉತ್ತಮ ಆರೋಗ್ಯ ಸಹಕಾರಿ ಎಂದು ವಿಧಾನ ಪರಿಷತ್ ಸದಸ್ಯ ಡಾ||ಧನಂಜಯ ಸರ್ಜಿ ಹೇಳಿದರು.ನಗರದ ಆಲ್ಕೋಳ ವೃತ್ತ ಸಮೀಪದಲ್ಲಿ ಗೋಪಾಲಗೌಡ ಬಡಾವಣೆಯ ವಿಶಾಲ್ ಮಾರ್ಟ್ ಎದುರಿನಲ್ಲಿ ಫ್ರೆಂಡ್ಸ್ ಸೆಂಟರ್ ನೇತ್ರ ಮತ್ತು ರಕ್ತ ಭಂಡಾರದಲ್ಲಿ ಸುಧೇನು ಆಯುರ್ವೇದ ಪಂಚಕರ್ಮ ಕ್ಲಿನಿಕ್ ಉದ್ಘಾಟನೆ ನೆರವೇರಿಸಿ ಮಾತನಾಡಿದರು.ಆರೋಗ್ಯ ಕಾಪಾಡಿಕೊಳ್ಳುವಲ್ಲಿ ನಿದ್ರೆಯು ಮುಖ್ಯ. ಸರಿಯಾದ ನಿದ್ರೆಯು ಔಷಧಿ. ಬೆಳಗ್ಗೆ ಬೇಗ ಏಳುವುದು ಸಹ ಔಷಧಿ. ನಗುವುದು, ಕುಟುಂಬದವರೊಂದಿಗೆ ಕುಳಿತು ಊಟ ಮಾಡುವುದು ಕೂಡ ಸಹ ಒಂದು ಔಷಧಿ. ಜೀವನಕ್ರಮದಲ್ಲಿ ಧನಾತ್ಮಕ ಬದಲಾವಣೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಫ್ರೆಂಡ್ಸ್ ಸೆಂಟರ್ ೫೮ ವರ್ಷಗಳಿಂದ ಸೇವಾ ಮನೋಭಾವನೆಯಿಂದ ಕೆಲಸ ಮಾಡುತ್ತಿರುವುದು ಶ್ಲಾಘನೀಯ. ರಕ್ತದಾನ ಮತ್ತು ನೇತ್ರದಾನಗಳ ಮಹತ್ವದ ಅರಿವು ಮೂಡಿಸುವ ಕೆಲಸ ಒಳ್ಳೆಯದು. ಒಮ್ಮೆ ರಕ್ತದಾನ ಮಾಡುವುದರಿಂದ ನಾಲ್ಕು ಜನರ ಜೀವ ಉಳಿಸಬಹುದು ಎಂದು ಹೇಳಿದರು.ವರ್ಷದಲ್ಲಿ ಸಾವಿರಾರು ಜನರು ವಿವಿಧ ಅಂಗಾಂಗಳ ವೈಫಲ್ಯದಿಂದ ಸಾಯುತ್ತಿದ್ದಾರೆ. ಅವರಿಗೆ ಅಂಗಾಂಗ ದಾನ ಸಿಗುವುದರಿಂದ ಎಷ್ಟೋ ಜನರ ಜೀವ ಉಳಿಸಬಹುದು. ಅಂಗಾಂಗ ದಾನ ಮಾಡುವುದರಿಂದ 7 ಜನರ ಜೀವ ಉಳಿಸಬಹುದು ಎಂದು ಹೇಳಿದರು.
ಆಯುರ್ವೇದವು ಭಾರತ ದೇಶ ಪ್ರಪಂಚಕ್ಕೆ ನೀಡಿದ ವಿಶೇಷವಾದ ಜ್ಞಾನ ಆಗಿದ್ದು, ಆಯುರ್ವೇದ ಮತ್ತು ಆಲೋಪತಿ ಸೇರಿ ಎಲ್ಲ ಪದ್ಧತಿಯ ಉದ್ದೇಶವು ರೋಗಿಗಳ ಆರೋಗ್ಯ ಕಾಪಾಡುವುದೇ ಆಗಿದೆ ಎಂದು ತಿಳಿಸಿದರು.ಫ್ರೆಂಡ್ಸ್ ಸೆಂಟರ್ ಅಧ್ಯಕ್ಷ ಬಿ.ಜಿ.ಧನರಾಜ್ ಅಧ್ಯಕ್ಷತೆ ವಹಿಸಿದ್ದರು. ಫ್ರೆಂಡ್ ಸೆಂಟರ್ ನೇತ್ರ ಮತ್ತು ಭಂಡಾರ ಅಧ್ಯಕ್ಷ ವಿ.ನಾಗರಾಜ್, ವೈದ್ಯರಾದ ಡಾ|| ಗಿರೀಶ್‌ಬಾಬು, ಡಾ|| ಅಶೋಕ್‌ಕುಮಾರ್, ಡಾ|| ಪಲ್ಲವಿ ಕೆ.ಜಿ., ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಎಸ್.ದತ್ತಾತ್ರಿ, ಸ್ವಪ್ನಾ ಬದ್ರಿನಾಥ್, ಎಂ.ಎನ್.ವೆಂಕಟೇಶ್, ಯು.ರವೀಂದ್ರನಾಥ್.ಐತಾಳ್, ಎಲ್.ಎಂ.ಮೋಹನ್, ರಾಜೇಶ್ ಉಪಸ್ಥಿತರಿದ್ದರು.