ಶಿವಮೊಗ್ಗ,ಅ.29 : ಶಿವಮೊಗ್ಗ ಪ್ರೆಸ್ ಟ್ರಸ್ಟ್ ನಿರ್ವಹಣೆ ಮತ್ತು ವಿವಾದ ಇತ್ಯರ್ಥಗೊಳಿಸುವುದು ಜಿಲ್ಲಾಧಿಕಾರಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಕರ್ನಾಟಕ ಉಚ್ಚ ನ್ಯಾಯಾಲಯದ ಆದೇಶವಿದೆ.ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಶಿವಮೊಗ್ಗ ಪ್ರೆಸ್ ಟ್ರಸ್ಟ್ ಅಧ್ಯಕ್ಷ ಎನ್. ಮಂಜುನಾಥ್, 2025 ರ ಅ. 8 ರಂದು ಜಿಲ್ಲಾದಿಕಾರಿಯವರು ಈ ಬಗ್ಗೆ ಹೊರಡಿಸಿರುವ ಆದೇಶ ಪ್ರತಿಯನ್ನು ತೋರಿಸಿದರು.
ಕರ್ನಾಟಕ ಉಚ್ಚ ನ್ಯಾಯಾಲಯದ ರಿಟ್ ಪಿಟಿಶನ್ ಸಂಖ್ಯೆ 25535/2018 ರಲ್ಲಿ ದಿನಾಂಕ : 28.09.2018 ರಂದು ನ್ಯಾಯಾಧೀಶರು ಸದರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಧ್ಯಾಂತರ ಆದೇಶ ಹೊರಡಿಸಿದ್ದು, ಇದರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಘಟಕವು ಈ ಹಿಂದೆ ಸಲ್ಲಿಸಿದ ಮನವಿ ಪ್ರಕಾರ ಟ್ರ್ರಸ್ಟ್ ಒಡೆತನಕ್ಕೆ ಸಂಬಂಧಿಸಿದಂತೆ ಅಂದಿನ ಜಿಲ್ಲಾಧಿಕಾರಿ ನೀಡಿದ ತೀರ್ಪಿನ ವಿರುದ್ಧ ಆದೇಶ ಹೊರಡಿಸಿದೆ. ಉಚ್ಚ ನ್ಯಾಯಾಲಯದಲ್ಲಿ ಜಿಲ್ಲಾಧಿಕಾರಿಯ ತೀರ್ಪನ್ನು ಪ್ರಶ್ನಿಸಿದ್ದು ಅದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು ಇದು ಜಿಲ್ಲಾಧಿಕಾರಿ ವ್ಯಾಪ್ತಿಗೆ ಒಳಪಡುವುದಿಲ್ಲ ಎಂದು ಆದೇಶಿಸಿದ್ದನ್ನು ವಿವರಿಸಿದರು.
ಪತ್ರಿಕಾ ಭವನ ಸಂಪೂರ್ಣವಾಗಿ ಸರ್ಕಾರದ ಮತ್ತು ಜನಪ್ರತಿನಿಧಿಗಳ ಅನುದಾನದ ಹಣದಿಂದ ಕಟ್ಟಲ್ಪಟ್ಟಿದೆ. ಇದರ ಮಾಲೀಕತ್ವ ಸರ್ಕಾರದ್ದಾಗಿದೆ. ಆದರೆ ಈ ಕಟ್ಟಡದ ನಿರ್ವಹಣೆ ಕೂಡ ಜಿಲ್ಲಾಧಿಕಾರಿ ನೇತೃತ್ವದ ಜಿಲ್ಲಾಮಟ್ಟದ ಸಮಿತಿಯದ್ದಾಗಿದೆ. ಆದರೆ ಈ ಕಟ್ಟಡವು ಶಿವಮೊಗ್ಗ ಟ್ರಸ್ಟಿಗೆ ಕೆಲವು ಶರತ್ತುಗಳ ಮೂಲಕ ಗುತ್ತಿಗೆ ಆಧಾರದ ಮೇಲೆ ನೀಡಲಾಗಿದೆ. ಜಿಪಂಗೆ ಸೇರಿದ ನಿವೇಶನದಲ್ಲಿ ಇದನ್ನು ನಿರ್ಮಿಸಲಾಗಿದ್ದರೂ ಆಡಳಿತಾತ್ಮಕ ಕಚೇರಿ ಹೊಂದಿ ಟ್ರಸ್ಟ್ ನಿಯಮಕ್ಕೆ ಅನುಸಾರವಾಗಿ ಪತ್ರಿಕಾಗೋಷ್ಠಿ, ಸುದ್ದಿಗೋಷ್ಠಿ ಮೊದಲಾದ ಚಟುವಟಿಕೆ ಮತ್ತು ಕಾರ್ಯಕ್ರಮಗಳನ್ನು ನಡೆಸುತ್ತಾ ಬಂದಿದೆ ಎಂದು ವಿವರಿಸಿದರು.
ಈ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ನಿಗದಿತ ಶುಲ್ಕವನ್ನು ಪಡೆದು ಬ್ಯಾಂಕಿನಲ್ಲಿರುವ ಟ್ರಸ್ಟಿನ ಖಾತೆಗೆ ಜಮಾ ಮಾಡಲಾಗುತ್ತಿದೆ. ಇದನ್ನು ವಿವಿಧ ಚಟುವಟಿಕೆಗಳಿಗೆ ವಿನಿಯೋಗಿಸಲಾಗುತ್ತಿದೆ. ಈ ಚಟುವಟಿಕೆಗಳಲ್ಲಿ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸುವ ಅಥವಾ ನಿಯಂತ್ರಿಸುವ ಅಧಿಕಾರ ಹೊಂದಿಲ್ಲ. ಅರ್ಜಿದಾರರು ಹೇಳಿದಂತೆ ಪತ್ರಿಕಾ ಭವನದಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರೆಸ್ ಟ್ರಸ್ಟ್ ವ್ಯವಹಾರಗಳಲ್ಲಿ ಮಧ್ಯಪ್ರವೇಶಿಸಲು ಯಾವುದೇ ಕಾನೂನಿನ ಪುರಸ್ಕಾರ ಇರುವುದಿಲ್ಲ. ಟ್ರಸ್ಟ್ ಸಂಗ್ರಹಿಸಿದ ಹಣವನ್ನು ವಸೂಲಿ ಮಾಡಲು ಜಿಲ್ಲಾಧಿಕಾರಿಗಳಿಗೆ ಅಧಿಕಾರ ಇಲ್ಲ. ಹೆಚ್ಚೆಂದರೆ ದೂರುದಾರರ ಅರ್ಜಿಯನ್ನು ಸೂಕ್ತ ನಿರ್ದೇಶನ ಮತ್ತು ಕ್ರಮಕ್ಕಾಗಿ ಸರ್ಕಾರಕ್ಕೆ ಜಿಲ್ಲಾಧಿಕಾರಿ ಕಳುಹಿಸಬಹುದು ಎಂದು ವಿವರಿಸಿದರು.
ಆದ್ದರಿಂದ ಪ್ರೆಸ್ ಟ್ರಸ್ಟ್‌ಗೆ ಸಂಬಂಧಿಸಿದಂತೆ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷ ಎಂದುಕೊಳ್ಳುತ್ತಿರುವ ಡಿ ಜಿ ನಾಗರಾಜ್ ನೀಡಿರುವ ದೂರಿನಲ್ಲಿ ಹುರುಳಿಲ್ಲ. ಕಟ್ಟಡದ ಉಸ್ತುವಾರಿ ಮತ್ತು ನಿರ್ವಹಣೆ ಬಗ್ಗೆ ವಿಸ್ತೃತ ವಿಚಾರಣೆ ನಡೆಸಿ ಜಿಲ್ಲಾಧಿಕಾರಿ ಈ ಆದೇಶ ಹೊರಡಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕಾರ್ಯದರ್ಶಿ ನಾಗರಾಜ ನೇರಿಗ ಸೇರಿದಂತೆ ಎಲ್ಲ ಪದಾಧಿಕಾರಿಗಳು, ಟ್ರಸ್ಟಿಗಳು ಹಾಜರಿದ್ದರು.
