ಶಿವಮೊಗ್ಗ, ಮೇ.10 : ಜಾತಿ ಗಣತಿ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಿ ಎಂದು ಭೋವಿ ಸಮಾಜದ ಜನರಿಗೆ ರಾಜ್ಯ ಭೋವಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್. ರವಿಕುಮಾರ್ ಮನವಿ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆದೇಶ ಮತ್ತು ನ್ಯಾಯಮೂರ್ತಿ ಹೆಚ್ .ಎನ್, ನಾಗಮೋಹನ್ ದಾಸ್ ಅವರ ನೇತೃತ್ವದ ಏಕ ಸದಸ್ಯ ಆಯೋಗದ ಮೂಲಕ ರಾಜ್ಯ ಸರ್ಕಾರ ನಡೆಸುತ್ತಿರುವ ಜಾತಿ ಗಣತಿ ಸಮೀಕ್ಷೆಯಲ್ಲಿ ಭೋವಿ ಸಮಾಜದ ಜನರು, ಕಡ್ಡಾಯವಾಗಿ ಪಾಲ್ಗೊಳ್ಳುವುದರ ಜತೆಗೆ ಯಾವುದೇ ಗೊಂದಲಕ್ಕೆ ಸಿಲುಕದ ಜಾತಿ ಕಾಲಂ ನಲ್ಲಿ ಭೋವಿ ಅಥವಾ ವಡ್ಡರ ಎಂದೇ ನಮೂದಿಸಬೇಕೆಂದು ಮನವಿ ಮಾಡಿದರು. ರಾಜ್ಯಾದ್ಯಂತ ಸಮೀಕ್ಷೆ ಕಾರ್ಯವು ಮೇ. ೫ ರಿಂದಲೇ ಆರಂಭಗೊಂಡಿದೆ.
ಜಿಲ್ಲೆಯಲ್ಲೂ ಸಮೀಕ್ಷೆಗೆ ನಿಯೋಜಿತಗೊಂಡ ಸಿಬ್ಬಂದಿ ಮನೆ ಮನೆಗೆ ಬರುತ್ತಿದ್ದಾರೆ. ಈ ಸಂದರ್ಭದಲ್ಲಿ ಸಮಾಜದ ಜನರು ಯಾವುದೇ ನೆಪ ಹೇಳಿ ತಪ್ಪಿಸಿಕೊಳ್ಳದೆ ಅಥವಾ ತಾತ್ಸಾರ ಮಾಡದೆ ಸಮೀಕ್ಷೆಯಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳಬೇಕಿದೆ. ಯಾಕೆಂದರೆ ಈ ಸಮೀಕ್ಷೆಯಲ್ಲಿನ ಜಾತಿವಾರು ಅಂಕಿಅಂಶಗಳು ನಮ್ಮ ಸಮಾಜದ ಮುಂದಿನ ಭವಿಷ್ಯವನ್ನು ನಿರ್ಧಾರ ಮಾಡಲಿದೆ.
ಜಾತಿವಾರು ಜನಸಂಖ್ಯೆಯ ಆಧಾರದ ಮೇಲೆಯೇ ಒಳ ಮೀಸಲು ಹಂಚಿಕೆಯಾಗುವ ಸಾಧ್ಯತೆಗಳಿವೆ. ಹಾಗಾಗಿ ಸಮಾಜದ ಜನರು ಯಾವುದೇ ಕಾರಣಕ್ಕೂ ಸಮೀಕ್ಷೆ ಕಾರ್ಯದಿಂದ ಮಾಡಿದ್ದಾರೆ ಎಂದಿದ್ದಾರೆ. ಸಮೀಕ್ಷೆಯ ಸಂದರ್ಭದಲ್ಲಿ ಸಮೀಕ್ಷೆಗೆ ನಿಯೋಜಿತವಾದ ಸಿಬ್ಬಂದಿ ಆದಾರ್ ಕಾರ್ಡ್, ರೇಷನ್ ಕಾರ್ಡ್ ಹಾಗೂ ಜಾತಿ ಪ್ರಮಾಣ ಪತ್ರ ಕೇಳುತ್ತಿದ್ದಾರೆನ್ನುವ ಬಗ್ಗೆ ಜನರು ದೂರಿದ್ದಾರೆ.
ಇದು ಎಷ್ಟು ವಾಸ್ತವವೋ ಗೊತ್ತಿಲ್ಲ, ಆದರೆ ಪರಿಶಿಷ್ಟ ಜಾತಿಗಳ ಒಳ ಮೀಸಲು ಹಂಚಿಕೆಗೆ ಸಂಬಂಧಿಸಿದ ಸಮೀಕ್ಷೆ ಮಾತ್ರ ಇದಾಗಿರುವುದರಿಂದ ಸರ್ಕಾರದ ನಿರ್ಧಿಷ್ಟ ಸೂಚನೆಗಳ ಮೇಲೆಯೇ ಸಮೀಕ್ಷದಾರರು ಜಾತಿವಾರು ದತ್ತಾಂಶಗಳನ್ನು ದಾಖಲು ಮಾಡಿಕೊಳ್ಳಬೇಕೆ ಹೊರತು, ಅವರ ಇಚ್ಚೆಗೆ ಅನುಸಾರ ಮಾಹಿತಿ ಸಂಗ್ರಹಿಸುವಂತಿಲ್ಲ. ಅಂತಹ ಯಾವುದೇ ಘಟನೆಗಳು ಕಂಡು ಬಂದಲ್ಲಿ ಅಥವಾ ಅಧಿಕಾರಿಗಳು ಜಾತಿ ಹೆಸರನ್ನು ಉದ್ದೇಶ ಪೂರ್ವಕವಾಗಿ ತಪ್ಪಾಗಿ ನಮೂದಿಸಿಕೊಂಡಲ್ಲಿ ಸಮಾಜದ ಮುಖಂಡರ ಗಮನಕ್ಕೆ ತರಬಹುದು ಎಂದಿದ್ದಾರೆ.