ಉಗ್ರರ ಗುರಿಯಾಗಿಸಿಕೊಂಡು ಆಪರೇಶನ್ ಸಿಂಧೂರ : ಸಂಸದ ರಾಘವೇಂದ್ರ

Kranti Deepa

ಶಿವಮೊಗ್ಗ, ಮೇ.07 : ಆಪರೇಷನ್ ಸಿಂಧೂರ ಹೆಸರಿನಲ್ಲಿ ಕಳೆದ ರಾತ್ರಿ ಭಾರತೀಯ ಸೇನೆ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿದೆ. ಕಾರ್ಯಾಚರಣೆ ಕುರಿತು ಸಂಸದ ಬಿ.ವೈ.ರಾಘವೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಪಹೆಲ್ಗಾಮ್‌ನಲ್ಲಿ ಉಗ್ರರು ದಾಳಿಗೆ 26 ಪ್ರವಾಸಿಗರು ಮೃತರಾಗಿದ್ದರು. ಈ ಕಾರಣಕ್ಕೆ ಭಾರತ ಸರ್ಕಾರ ಪಾಕಿಸ್ತಾನದ ವಿರುದ್ಧ ರಾಜತಾಂತ್ರಿಕವಾಗಿ ನಿರ್ಬಂಧ ವಿಧಿಸಿತ್ತು. ಪಾಕಿಸ್ತಾನಕ್ಕೆ ತಕ್ಕ ಪ್ರತ್ಯುತ್ತರ ನೀಡಲಾಗುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಮಧ್ಯರಾತ್ರಿ ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಪಾಕಿಸ್ತಾನದಲ್ಲಿರುವ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಲಾಗಿದೆ.

ಭಯೋತ್ಪಾದನೆ ವಿರುದ್ಧ ಶೂನ್ಯ ಸಹಿಷ್ಣುತೆ ಇದೆ. ನಿನ್ನೆಯ ದಾಳಿಯಲ್ಲಿ ಸುಮಾರು 100 ರಷ್ಟು ಉಗ್ರರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ವರದಿಯಾಗುತ್ತಿದೆ. ಪಾಕಿಸ್ತಾನದ ಸೈನಿಕರ ಮೇಲೆ ದಾಳಿಯಾಗಿಲ್ಲ. ಗುಪ್ತಚರ ಮಾಹಿತಿ ಆಧರಿಸಿ ಉಗ್ರರ ನೆಲೆಗಳನ್ನು ಮಾತ್ರ ಗುರಿಯಾಗಿಸಿಕೊಂಡು 9 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಯಾವುದೇ ಮಸೀದಿ, ನಾಗರಿಕರ ಮೇಲೆ ದಾಳಿಯಾಗಿಲ್ಲ ಎಂದರು.

ಭಾರತದ ಸಂಸತ್ತಿನ ಮೇಲೆ ದಾಳಿ, ಏರ್ ಬೇಸ್ ಮೇಲೆ ದಾಳಿ ಸೇರಿದಂತೆ ಪದೇ ಪದೆ ದಾಳಿಗಳಾಗುತ್ತಿದೆ. ಶಾಂತಿ ಮಂತ್ರಿ ಪಠಿಸುತ್ತ ಕೂರುವ ಕಾಲ ಇದಲ್ಲ. ಹಾಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಸರಿಯಾದ ನಿರ್ಧಾರ ಕೈಗೊಳ್ಳಲಾಗಿದೆ. ಭಾರತದ ಸಿಂಧೂರ ಕಾಶ್ಮೀರ ಎಂದು ಹೇಳುತ್ತಲೆ ಬಂದಿದ್ದೇವೆ. ತಾಯಂದಿರು, ಸಹೋದರಿಯರ ಸಿಂಧೂರ ಉಳಿವಿಗಾಗಿ ಆಪರೇಷನ್ ಸಿಂಧೂರ ಆರಂಭಿಸಲಾಗಿದೆ ಎಂದರು.

 

Share This Article
";