ಸೊರಬ , ಅ. 06: ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ, ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಕೋಟೆಕೊಪ್ಪ ಗ್ರಾಮದಲ್ಲಿ ಶನಿವಾರ ನಡೆದಿದೆ.
ಕೋಟೆಕೊಪ್ಪ ಗ್ರಾಮದ ನಿವಾಸಿ ಸಂತೋಷ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಯುವಕ ತೆರಳಿದ್ದು, ಈ ವೇಳೆ ಎತ್ತು ಗಾಬರಿಗೊಂಡು ಓಡಿ ಹೋಗಿದೆ.
ಎತ್ತಿನ ಹಗ್ಗವು ಸಂತೋಷ್ ಕಾಲಿಗೆ ಸುತ್ತಿಕೊಂಡು, ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಭೇಟಿಯಿತ್ತು, ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.