ಹೊಳೆಹೊನ್ನೂರು, ಮೇ.08 : ಅಡಕೆ ವ್ಯವಹಾರ ನಡೆಸುತ್ತಿದ್ದ ವ್ಯಕ್ತಿ ವಾಕಿಂಗ್ ತೆರಳಿದ್ದ ವೇಳೆ ಇರಿದು ಕೊಲೆ ಮಾಡಿರುವ ಘಟನೆ ಹೊಳೆಹೊನ್ನೂರು ಸಮೀಪದ ಹೊಸಕೊಪ್ಪ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜ್ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ. ಹೊಸಕೊಪ್ಪದ ನಿವಾಸಿ ಹೇಮಣ್ಣ (70) ಕೊಲೆಗೀಡಾದ ವ್ಯಕ್ತಿ. ಇವರು ಅಡಕೆ ಖೇಣಿ ವ್ಯವಹಾರ ನಡೆಸುತ್ತಿದ್ದರು.
ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಾಕಷ್ಟು ಚಿರಪರಿಚಿತ ವ್ಯಕ್ತಿಯಾಗಿದ್ದರು ಎಂದು ತಿಳಿದುಬಂದಿದೆ. ಎರಡು ವರ್ಷಗಳ ಹಿಂದೆ ಹೇಮಣ್ಣ ಅವರ ಮೇಲೆ ದಾಳಿಯಾಗಿತ್ತು. ಈ ವೇಳೆ ಅವರು ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದರು ಎಂದು ಹೇಳಲಾಗಿದೆ. ಎಂದಿನಂತೆ ಅವರು ಮನೆಯಿಂದ ಮುಂಜಾನೆ ವಾಕಿಂಗ್ ತೆರಳಿದ್ದರು.
ಈ ವೇಳೆ ದುಷ್ಕರ್ಮಿಗಳು ನಡು ರಸ್ತೆಯಲ್ಲಿಯೇ ಹೇಮಣ್ಣ ಅವರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಹೊಳೆಹೊನ್ನೂರು ಠಾಣೆ ಪೊಲೀಸರು ಭೇಟಿಯಿತ್ತು ಪರಿಶೀಲನೆ ನಡೆಸಿದ್ದಾರೆ.