ಯುವಕರು ಜನಪರ ಧ್ವನಿಯಾಗಿ: ಸಚಿವ ಮಧು

Kranti Deepa

ಶಿವಮೊಗ್ಗ, ಮೇ.06 : ಕಾಂಗ್ರೆಸ್ ಅನೇಕ ಕೊಡುಗೆಗಳನ್ನು ರಾಜ್ಯಕ್ಕೆ ನೀಡಿದೆ. ಗುಣಮಟ್ಟದ ಶಿಕ್ಷಣ ಸರ್ಕಾರಿ ಶಾಲೆಯ ಗಂಟೆ ಬಾರಿಸುತ್ತಿದೆ. ಉಚಿತ ಮೊಟ್ಟೆ, ಹಾಲು, ಬೂಟು, ಶಿಕ್ಷಣ ಎಲ್ಲವನ್ನೂ ನೀಡಿ ಸರ್ಕಾರ ಶಿಕ್ಷಣಕ್ಕೆ ಆದ್ಯತೆ ನೀಡಿದೆ. ಇದನ್ನು ಪಕ್ಷದ ಯುವಕರು ಬೂತ್ ಮಟ್ಟದಲ್ಲಿ ಮನೆ ಮನೆಗೆ ತಲುಪಿಸಿ ಜನಪರ ಧ್ವನಿಯಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.

ಅವರು ಮಂಗಳವಾರ  ನಗರದ ಬಂಜಾರ ಕನ್ವೆನ್ಷನ್ ಸಭಾಭವನದಲ್ಲಿ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಘಟಕ ಹಮ್ಮಿಕೊಂಡಿದ್ದ ಯುವ ನಾಯಕತ್ವ ಸಮಾವೇಶ, ಜಿಲ್ಲಾ ಯುವ ಕಾಂಗ್ರೆಸ್ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬರಲು ಯುವ ಶಕ್ತಿಯೇ ಕಾರಣ.  ತಾನೂ ಸಹ ಯುವ ಜೆಡಿಎಸ್ ಅಧ್ಯಕ್ಷನಾಗಿ ಕಾರ್ಯ ನಿರ್ವಹಿಸಿದ್ದೇನೆ. ಆ ಕಾರ್ಯಭಾರ ನನಗೂ ಗೊತ್ತಿದೆ ಎಂದರು.

ವಿಧಾನ ಪರಿಷತ್ ಸದಸ್ಯರೂ, ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಈ ಕಾರ್ಯಕ್ರಮ  ಯುವಕರಿಗೆ ದಾರಿದೀಪವಾಗಬೇಕು. ಹಿಂದೆ ಕಾಂಗ್ರೆಸ್‌ನಲ್ಲಿ ಪಕ್ಷದ ನಾಯಕರೇ ಪದಾಧಿಕಾರಿಗಳನ್ನು ಆಯ್ಕೆ ಮಾಡುತ್ತಿದ್ದರು. ಆದರೆ ಈಗ ಚುನಾವಣೆಗಳ ಮೂಲಕ  ಗೆದ್ದು ಯುವ ನಾಯಕರಾಗಿದ್ದೀರಿ. ಈಗ ನಿಮ್ಮ ಸಾಮಥ್ರ್ಯವನ್ನು ತೋರಿಸಿ ಪಕ್ಷ ಬಲಪಡಿಸಿ. ಕೇವಲ ಲೆಟರ್‍ಹೆಡ್ ಮತ್ತು ವಿಸಿಟಿಂಗ್ ಕಾರ್ಡ್‌ಗೆ ಅಧಿಕಾರವನ್ನು ಸೀಮಿತಗೊಳಿಸಬೇಡಿ ಎಂದರು.

ಮೊದಲು ವಿದ್ಯಾರ್ಥಿ ಕಾಂಗ್ರೆಸ್ ಮೂಲಕ ಪಕ್ಷಕ್ಕೆ ಸೇವೆ ಸಲ್ಲಿಸಿ ಹಂತ ಹಂತವಾಗಿ ಸ್ಥಾನ ಮಾನ ತಲುಪಿದವರು ಇದ್ದಾರೆ. ಪಕ್ಷವನ್ನು ಕಟ್ಟಬೇಕಾದರೆ ಮೊದಲು ಯುವಕರ ತಂಡ ಕಟ್ಟಬೇಕು. ಯುವಕರನ್ನು ಗುರುತಿಸಬೇಕು. ನಿಮ್ಮ ಜೊತೆಗೆ 4 ಜನ ಹಿಂದೆ ಬರುತ್ತಾರೆ ಎಂದರೆ ಮಾತ್ರ ಮತ್ತು ನೀವು ಯಾವುದಾದರೂ ಚುನಾವಣೆಯಲ್ಲಿ ಗೆದ್ದಿದ್ದೀರಿ ಎಂದಾಗ ಮಾತ್ರ ನಾಯಕರಾಗಲು ಸಾಧ್ಯ. ಬೂತ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಅನ್ನು ಕಟ್ಟಬೇಕು. ರಾಷ್ಟ್ರೀಯ ಮಾಜಿ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ನಿಮಗೆಲ್ಲ ಮಾದರಿಯಾಗಲಿ ಎಂದರು.

ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಮಾತನಾಡಿ, ರಾಜ್ಯ ಕಾಂಗ್ರೆಸ್‌ನಲ್ಲಿ ಗೆದ್ದ 136  ಶಾಸಕರಲ್ಲಿ ಶೇ.70 ರಷ್ಟು ಅಧಿಕ ನಾಯಕರು ಯುವ ಕಾಂಗ್ರೆಸ್‌ನಿಂದಲೇ ಬಂದವರಾಗಿದ್ದಾರೆ. ಪ್ರತಿ ಬೂತ್‌ನಿಂದ ಓರ್ವ ಮೇಧಾವಿ ಡಿಜಿಟಲ್ ಯುವಕನನ್ನು ಗುರುತಿಸಿ ಆತನ ಮೂಲಕ ಪಕ್ಷದ ಎಲ್ಲಾ ಜನಪರ ಸಾಧನೆಗಳನ್ನು ತಿಳಿಸುವ ಕಾರ್ಯ ಮಾಡಬೇಕು. ಬಿಜೆಪಿಯವರು ಸುಳ್ಳು ಹೇಳಲೆಂದೇ ಯುವಕರ ವಾಟ್ಸಾಪ್ ಯುನಿವರ್ಸಿಟಿಯನ್ನೇ ತೆರೆದಿದ್ದಾರೆ. ನಾವು ನಮ್ಮ ಕೆಲಸವನ್ನು ಹೇಳಿ ಸತ್ಯವನ್ನೇ ಜನರಿಗೆ ತಲುಪಿಸುವ ಕಾರ್ಯ ಮಾಡೋಣ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲಿಸುವ ಜವಾಬ್ದಾರಿ ನಿಮ್ಮ ಮೇಲಿದೆ ಎಂದರು.

ಶಾಸಕಿ ಬಲ್ಕೀಶ್ ಬಾನು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್, ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಗೌಡ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಹರ್ಷಿತ್ ಗೌಡ, ಧುರೀಣರಾದ  ಹೆಚ್.ಎಸ್. ಸುಂದರೇಶ್, ರವಿಕುಮಾರ್, ಪಲ್ಲವಿ, ಆಯನೂರು ಮಂಜುನಾಥ್, ಶ್ರೀನಿವಾಸ ಕರಿಯಣ್ಣ, ಹೆಚ್.ಸಿ. ಯೋಗೀಶ್, ಎನ್. ರಮೇಶ್, ಎಂ. ಶ್ರೀಕಾಂತ್, ಗೋಣಿ ಮಾಲತೇಶ್, ಮಧುಸೂದನ್, ವಿಜಯಕುಮಾರ್(ದನಿ), ಜಿ ಡಿ ಮಂಜುನಾಥ, ವೇದಾ ವಿಜಯಕುಮಾರ್, ಚೇತನ್, ಯಮುನಾ ರಂಗೇಗೌಡ ಮೊದಲಾದವರಿದ್ದರು.

Share This Article
";