ಸೊರಬ, ಡಿ.03 :ಮಿಂಚಿನ ಓಟ ಓಡುತ್ತಿದ್ದ ಹೋರಿಗಳು, ಬಲ ಪ್ರದರ್ಶನ ತೋರಲು ಮುಂದಾಗಿದ್ದ ಪೈಲ್ವಾನರು. ಹೋರಿಪ್ರಿಯರ ಹರ್ಷೋ ದ್ಗಾರದ ನಡುವೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಜನಪದ ಕ್ರೀಡೆ ರಾಜ್ಯ ಮಟ್ಟದ ಹೋರಿ ಬೆದರಿಸುವ ಹಬ್ಬ ವಿಜೃಂಭಣೆಯಿಂದ ಜರುಗಿತು.
ಮಲೆನಾಡು ಹಾಗೂ ಬಯಲುಸೀಮೆ ಭಾಗದ ಹಬ್ಬವಾಗಿರುವ ಜನಪದ ಕ್ರೀಡೆ ಸಾಂಪ್ರದಾಯಿಕ ಹೋರಿ ಬೆದರಿಸುವ ಹಬ್ಬದ ಅಖಾಡದಲ್ಲಿ ಯಾರ ಕೈಗೂ ಸಿಗದಂತೆ ಓಡುತ್ತಿರುವ ಹೋರಿಗಳನ್ನು ಕಣ್ತುಂಬಿಕೊಳ್ಳಲು ತಾಲೂಕು ಸೇರಿದಂತೆ ನೆರೆಯ ಜಿಲ್ಲೆಗಳಿಂದ ಸಾವಿರಾರು ಹೋರಿ ಹಬ್ಬದ ಅಭಿಮಾನಿಗಳು ಆಗಮಿಸಿದ್ದರು. ಅಖಾಡದಲ್ಲಿ ಪೈಲ್ವಾನರ ಕೈಗೆ ಸಿಗದಂತೆ ಶರವೇಗದಲ್ಲಿ ಹೋರಿಗಳು ಓಡಿ ಹೋಗುವ ದೃಶ್ಯ ನೋಡುಗರಲ್ಲಿ ಮೈನವಿರೇಳಿಸಿತು.
ಹೋರಿಗಳ ಮಾಲೀಕರು ಹೋರಿಗಳಿಗೆ ವಿವಿಧ ಬಗೆಯ ಜೂಲಗಳನ್ನು ಹೊದಿಸಿ, ಬಣ್ಣ ಬಣ್ಣದ ಟೇಪು, ಬಲೂನುಗಳು ಮತ್ತು ಒಣ ಕೊಬ್ಬರಿ ಕಟ್ಟಿ ಶೃಂಗರಿಸಿದ್ದರು. ಕೊಬ್ಬರಿ ಹೋರಿ, ಆಕ್ಷನ್ ಹೋರಿ, ಪೀಪಿ ಹೋರಿ ಹೀಗೆ ವಿವಿಧ ರೀತಿಯಲ್ಲಿ ಹೋರಿಗಳನ್ನು ವಿಂಗಡಿಸಿ ಓಡಿಸಲಾಯಿತು.
ಅಖಾಡದಲ್ಲಿ ಹಂಸಭಾವಿಯ ಕರ್ನಾ ಟಕ ನಂದಿ, ಹರಗಿ ವಾರಸ್ದಾರ ಅಕ್ಕಿ ಆಲೂರಿನ ಹೈಸ್ಪೀಡ್ ಪೈಲ್ವಾನ್, ಸಮನ ವಳ್ಳಿ ಹಠವಾದಿ, ಕುಬಟೂರು ರಾಜಹಂಸ, ಮಲ್ಲಿಗೇನಳ್ಳಿ ಶ್ರೀನಂದಿ, ಬಾಚಿಯ ಹಿಂದೂ ಸಾಮ್ರಾಟ, ಇಜಾರಿಲಕ ಮಾಪುರದ ಕೋಟಿಗೊಬ್ಬ, ನರಸಾಪುರ ಕಿಂಗ್, ಹಿಮ್ಮಡಿ ಪುಲಕೇಶಿ, ಆನವಟ್ಟಿ ಮಲೆ ನಾಡ ದಂಗೆ, ಹಿರೇಮಾಗಡಿ ಮಾಣಿಕ್ಯ, ಇಜಾರಿಲಕಮಾಪುರದ ಭರ್ಜರಿ, ಚಿಕ್ಕಮಾಕೊಪ್ಪದ ದೊಡ್ಮನೆ ಚಿನ್ನ, ಕೆಡಿಎಂ ಕಿಂಗ್, ಗೆಜ್ಜೆಹಳ್ಳಿ ಎನ್‌ಕೌಂಟರ್, ಆನವಟ್ಟಿ ಯುವರತ್ನ, ಮರೂರು ತಾರಕಾಸುರ, ಹಾವೇರಿಯ ನಾಯಕನ ಅಕಾರ, ಸೊರಬದ ರಾವಣ, ಚಿಕ್ಕಾವಲಿ ನಾಗ, ಸಾರೆಕೊಪ್ಪದ ಸುನಾಮಿ, ಕುಪ್ಪಗಡ್ಡೆ ಗ್ರಾಮದ ಹೋರಿಗಳಾದ ಪವರ್‍ಸ್ಟಾರ್, ಯಜಮಾನ, ಸೂಪರ್‍ಸ್ಟಾರ್, ಕಾಲಭೈರವ, ಸೇರಿದಂತೆ ವಿವಿಧ ಹೆಸರಿನ ಹೋರಿಗಳು ಓಡಿದವು. ಯುವಕರು ಹೋರಿಗಳನ್ನು ಹಿಡಿದು ಬಲ ಪ್ರದರ್ಶಿಸಿದರೆ, ಜನತೆ ಅದನ್ನು ನೋಡಿ ರೋಮಾಂಚನಗೊಂಡರು. ಹೋರಿಗಳು ಓಡಿ ಬರುತ್ತಿದ್ದಂತೆ ನೆರೆದವರಿಂದ ಕೇಕೆ, ಶಿಳ್ಳೆ, ಚಪ್ಪಾಳೆಗಳು ಜೋರಾಗಿಯೇ ಕೇಳಿಬಂದವು.
ವಿಶೇಷವಾಗಿ ಹಂಸಭಾವಿಯ ಕರ್ನಾಟಕ ನಂದಿ ಹೆಸರಿನ ಹೋರಿಯು 140 ಬಾರಿ ಅಖಾಡದಲ್ಲಿ ಓಟ ನಡೆಸಿದ್ದು, ಹೋರಿ ಆಗಮಿಸುತ್ತಿದ್ದಂತೆ ಹೋರಿ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು. ಅಖಾಡದಲ್ಲಿ ಉತ್ತಮವಾಗಿ ಓಡಿದ ಹೋರಿಗಳು ಹಾಗೂ ಬಲಪ್ರದರ್ಶನ ತೋರಿದ ಪೈಲ್ವಾನರನ್ನು ಸಮಿತಿ ವತಿಯಿಂದ ಗುರುತಿಸಲಾಯಿತು. ಅಖಾಡದ ಎರಡು ಬದಿಯಲ್ಲಿ ಬೇಲಿ ನಿರ್ಮಿಸಿ, ಒಂದೊಂದೆ ಹೋರಿಗಳನ್ನು ಓಡಿಸುವ ಮೂಲಕ ಸಮಿತಿಯವರು ಸುರಕ್ಷತೆಗೆ ಹೆಚ್ಚಿನ ಗಮನ ನೀಡಿದ್ದರು.