ಶಿವಮೊಗ್ಗ: ಮೈಸೂರಿನ ಖ್ಯಾತ ಸಿಹಿತಿಂಡಿ ಸಂಸ್ಥೆ ಮಹಾಲಕ್ಷ್ಮೀ ಸ್ವೀಟ್ಸ್ ತನ್ನ 48 ನೆಯ ಮಳಿಗೆಯನ್ನು ಶಿವಮೊಗ್ಗದಲ್ಲಿ ಡಿ. 22 ರಂದು ಆರಂಭಿಸಲಿದೆ ಎಂದು ಸಂಸ್ಥೆಯ ಉಪಾಧ್ಯಕ್ಷ ಜಯಕುಮಾರ್ ಹೇಳಿದರು.ಸುದಿಗೋಷ್ಟಿಯಲ್ಲಿ ಶನಿವಾರ ಮಾತನಾಡಿದ ಅವರು, ಸಂಸ್ಥೆಯು 1991 ರಲ್ಲಿ ಆರಂಭವಾದಂದಿನಿಂದ ಇಲ್ಲಿಯವರೆಗೆ ಅತ್ಯುತ್ತಮ ಗುಣಮಟ್ಟದಿಂದಾಗಿ ಗ್ರಾಹಕರ ವಿಶ್ವಾಸವನ್ನು ಉಳಿಸಿಕೊಂಡು ಬಂದಿದೆ. ಕೇಂದ್ರೀಕೃತ ಪಾಕಶಾಲೆಯನ್ನು ಮೈಸೂರಿನಲ್ಲಿ ಹೊಂದಿದ್ದು, ಅಲ್ಲಿಂದಲೇ ಎಲ್ಲ ಶಾಖೆಗಳಿಗೂ ಪ್ರತಿನಿತ್ಯ ಪೂರೈಸುತ್ತಿರುವುದು ವಿಶೇಷ ಎಂದರು.
ಶುಚಿ-ರುಚಿಯಾದ ಸಿಹಿತಿನಿಸಿಗೆ ಸಂಸ್ಥೆ ಹೆಸರಾಗಿದ್ದು, ಸಾವಿರಾರು ನೌಕರರು ಇದರಲ್ಲಿ ಕೆಲಸ ಮಾಡುತ್ತಿದ್ದಾರೆ. ಕೇವಲ ಸಿಹಿತಿಂಡಿಯಷ್ಟೇ ಅಲ್ಲದೆ, ಶುಗರ್‌ಲೆಸ್ ತಿಂಡಿಗಳನ್ನೂ ಸಹ ಮಾಡಲಾಗುತ್ತಿದೆ. ಮೈಸೂರು ಪಾಕ್‌ನ ಮೂಲಸಿಹಿ ಮತ್ತು ಗುಣವನ್ನು ತಮ್ಮಲ್ಲಿನ ಮೈಸೂರು ಪಾಕ್ ಉಳಿಸಿಕೊಂಡಿದೆ. ಮೈಸೂರಿನಲ್ಲಿ 12, ಬೆಂಗಳೂರಿನಲ್ಲಿ 11 ಮಳಿಗೆಗಳಿವೆ. ಇದರೊಟ್ಟಿಗೆ ಕೊಡಗಿನಲ್ಲಿ 4, ಹಾಸನದಲ್ಲಿ ಎರಡು, ತುಮಕೂರಿನಲ್ಲಿ ಎರಡು, ಚಿಕ್ಕಮಗಳೂರು, ಹುಣಸೂರು, ಕೊಳ್ಳೆಗಾಲ, ಮಂಡ್ಯ, ರಾಮನಗರ ಮತ್ತು ಪಿರಿಯಾಪಟ್ಟಣದಲ್ಲಿ ಮಳಿಗೆಗಳಿವೆ ಎಂದರು.
ಬಹು ಹಿಂದೆಯೇ ಶಿವಮೊಗ್ಗದಲ್ಲಿ ಮಳಿಗೆ ಆರಂಭಿಸಬೇಕೆಂದು ಸಂಸ್ಥೆ ನಿಧರಿಸಿತ್ತಾದರೂ ಸೂಕ್ತ ಜಾಗ ಲಭ್ಯವಿರಲಿಲ್ಲ. ಈಗ ಅದು ಸಿಕ್ಕಿದೆ. ಮಳಿಗೆ ನೆಹರೂ ರಸ್ತೆಯ ಗೋರೂರು ಎಲೆಕ್ಟ್ರಾನಿಕ್ಸ್ಸ್ ಪಕ್ಕ ಡಿ. 22 ರಂದು ಸಂಸದ ಬಿ ವೈ ರಾಘವೇಂದ್ರ ಅವರಿಂದ ಬೆಳಗ್ಗೆ 10:30 ಕ್ಕೆ ಉದ್ಘಾಟನೆಯಾಗಲಿದೆ ಎಂದರು.
ಸಂಸ್ಥೆಯು ಸಿಹಿತಿಂಡಿಗೆ ಬೇಕಾದ ಎಲ್ಲಾ ವಸ್ತುಗಳನ್ನು ಮೂಲ ಉತ್ಪ್ಪಾದಕರಿಂದಲೇ ಖರೀದಿಸಲಾಗುತ್ತಿದೆ. ಇದರಿಂದ ಉತ್ತಮ ಗುಣಮಟ್ಟದ ವಸ್ತುಗಳನ್ನೇ ಬಳಸಲಾಗುತ್ತಿದೆ. ಗ್ರಾಹಕರ ಬೇಡಿಕೆಗೆ ತಕ್ಕಂತೆ ಸಿಹಿತಿಂಡಿಯನ್ನು ಸಕಾಲದಲ್ಲಿ ಒದಗಿಸಲಾಗುತ್ತಿದೆ ಎಂದ ಅವರು, ಯಾವುದೇ ನಗರ, ಪಟ್ಟಣದಲ್ಲ್ಲೂ ತಮ್ಮ ತಿಂಡಿಯನ್ನು ಇತರರು ಮಾರುತ್ತಿಲ್ಲ. ಫ್ರಾಚೈಸಿ ಕೂಡ ಇಲ್ಲ. ನೇರವಾಗಿ ಸಂಸ್ಥೆಯೇ ಶಾಖೆ ತೆರೆದು ಪೂರೈಸುತ್ತಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಸಂಸ್ಥೆಯ ಅಧ್ಯಕ್ಷ ಶಿವಕುಮಾರ್, ಮಾರ್ಕೆಟಿಂಗ್ ಮ್ಯಾನೇಜರ್ ಗೋಪಾಲರಾಜ್ ಅರಸ್, ವಿಜಯಕುಮಾರ್, ನವೀನ್ ಹಾಜರಿದ್ದರು.
