ಮಹಾಭಾರತ ಯುದ್ಧ ವಿರೋಧಿ ಕಾವ್ಯವಾಗಿದೆ: ಪ್ರೊ.ರಾಜೇಂದ್ರ ಚೆನ್ನಿ

Kranti Deepa

ಶಿವಮೊಗ್ಗ: ಮಹಾಭಾರತ ಯುದ್ಧ ವಿರೋಧಿ ಕಾವ್ಯವಾಗಿದೆ ಎಂದು ಕುವೆಂಪು ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ  ರಾಜೇಂದ್ರ ಚೆನ್ನಿ ಹೇಳಿದರು.ಅವರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ರಿ. ಬೆಂಗಳೂರು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗ ಇವರ ಆಶ್ರಯದಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ಬಸವ ಸದನದಲ್ಲಿ ನಡೆದ ಅಖಿಲ ಕರ್ನಾಟಕ ಐದನೆಯ ಕವಿ ಕಾವ್ಯ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿ ಮಾತನಾಡಿದರು.

ಮಹಾಭಾರತ ಯುದ್ಧವು ಸೋದರರ ನಡುವಿನ ಯುದ್ಧವಾಗಿದ್ದು ಯುದ್ಧ ತಡೆಯಲು ಶ್ರೀಕೃಷ್ಣ ಎಷ್ಟೇ ಪ್ರಯತ್ನ ಪಟ್ಟರು ಕೂಡ ಯುದ್ಧ ನಡೆಯಿತು ಅದರ ಪರಿಣಾಮವಾಗಿ ಭಾರತದ ಅನೇಕ ರಾಜವಂಶಗಳು ಅಳಿದು ಹೋದವು ಮತ್ತು ಯುದ್ಧವಾದ ಮೇಲೆ ಮಹಾಭಾರತದಲ್ಲಿ ವರ್ಣಿಸಿದ ಭಾರತದ ಸ್ಥಿತಿಗತಿಯನ್ನು ನೋಡಿದ ಮೇಲೆ ಯುದ್ಧ ಎಂದಿಗೂ ಕೂಡ ಬೇಡ ಎನ್ನುವ ಅಭಿಪ್ರಾಯ ಬರುತ್ತದೆ ಎಂದರು.

ಮನುಷ್ಯ ಮೂಲತ: ಶಾಂತಿ ಪ್ರಿಯ. ತನ್ನ ಬಾಳಿನ ಶಾಂತಿಗಾಗಿ ಆತ ಕಲೆ ಸಾಹಿತ್ಯ ಸಂಗೀತದಂತಹ ಅನೇಕ ವಿದ್ಯೆಗಳನ್ನು ಕಲಿಯುತ್ತಾನೆ. ಧಾರವಾಡದಲ್ಲಿ ಸಂಗೀತಕ್ಕೆ ಎಷ್ಟೊಂದು ಮಹತ್ವವನ್ನು ಕೊಡುತ್ತಾರೆ ಎಂದರೆ ಅಲ್ಲಿನ ಪ್ರತಿ ಒಂದು ವಿದ್ಯುತ್ ಕಂಬವು ಸುಮ್ಮನೆ ತಟ್ಟಿದರೆ ಹಿಂದೂಸ್ತಾನಿ ರಾಗ ಹೇಳುತ್ತದೆ. ಅದೇ ರೀತಿ ಶಿವಮೊಗ್ಗ ದಲ್ಲಿ ಒಂದು ಮರಕ್ಕೆ ಒರಗಿದರೆ ಆ ಮರ ಒಂದು ಕವನವನ್ನು ಹೇಳುತ್ತದೆ ಎಂಬ ಮಾತಿದೆ ಎಂದರು.ಮನುಷ್ಯ ಕಾವ್ಯವನ್ನು ಮೊದಲು ಬರೆದ ಗದ್ಯಕ್ಕಿಂತ ಮೊದಲು ಪದ್ಯ ಉದಯಿಸಿತು.ಈ ದೇಶದ ಭಾಷೆ ಗಳಲ್ಲೀ ಕನ್ನಡ ಕೂಡ ಒಂದು ಅದು ಹಲವು ಸಂಸ್ಕೃತಿ ಉಳಿಸಿಕೊಂಡು ಬಂದಿದೆ. ಬಹು ಭಾಷೆಗಳ ನಾಡು ಭಾರತ ಕನ್ನಡ ಕೂಡ ಹಲವು ಭಾಷೆ ಹೊಂದಿದೆ. ಹಾಗಾಗಿ ಹಲವು ಕನ್ನಡ ಎನ್ನುವುದು ಸರಿಯಾದ ಮಾತು ಆಗಿದೆ. ಕರ್ನಾಟಕದಲ್ಲಿ ಜನಿಸಿದ ಪಂಪ ರಾಜಸತ್ತೆಯನ್ನು ಪ್ರಶ್ನೆ ಮಾಡಿದನು, ಬಸವಣ್ಣನವರು 12ನೇ ಶತಮಾನದಲ್ಲಿ ವಚನ ಸಾಹಿತ್ಯ ನಿರ್ಮಾಣ ಮಾಡಿ ಶ್ರಮ ಜೀವಿಗಳ ಕಾಯಕವೇ ಪವಿತ್ರ ಎಂದು ತೋರಿಸಿದರು,ಎನ್ನ ಕಾಲೇ ಕಂಬ, ದೇಹವೇ ದೇಗುಲ ಶಿರವಿದು ಹೊನ್ನ ಕಳಸ ಎಂದು ತೋರಿಸಿ ಕೊಟ್ಟವರು. ಏಕ ಸಂಸ್ಕೃತಿ ಗಿಂತ ಬಹು ಸಂಸ್ಕೃತಿ ಶ್ರೇಷ್ಠ ಎಂದರು.

ನಮ್ಮ ಸಂಸ್ಕೃತಿ ಎಂದರೆ ಯಾವುದೇ ಕಟ್ಟಡ ದೇವಸ್ಥಾನ ಅಗೆಯುವುದಲ್ಲ. ಅನೇಕ ಉಳಿ ಪೆಟ್ಟು ಬಿದ್ದು ಈ ದೇವಸ್ಥಾನ ಆಗಿದೆ ಎಂದು ಒಪ್ಪಬೇಕು. ಹಲವು ಧರ್ಮಗಳ ಸಾರ ದೇವಸ್ಥಾನವಾಗಿದೆ. ಕವಿಗಳಿಗೆ ಯಾರನ್ನು ದ್ವೇಷಿಸುವ ಮನಸ್ಸು ಇಲ್ಲ ಕೇವಲ ಪ್ರೀತಿಸುವ ಮನಸ್ಸು ಇದೆ,ನಮಗೆ ಇಂಗ್ಲಿಷ್ ರ ಬಗ್ಗೆ ದ್ವೇಷ ಮಾಡಬೇಕೆಂದರೆ ಶೇಕ್ಸ್ಪಿಯರ್, ಮುಸ್ಲಿಂ ರನ್ನು ದ್ವೇಷ ಮಾಡಬೇಕೆಂದರೆ ಗಾಲಿಬ್ ಅಡ್ಡ ಬರುತ್ತಾನೆ . ಯಾವ ಧರ್ಮವನ್ನೇ ದ್ವೇಷಿಸಲು ಹೊರಟಾಗ ಆ ಧರ್ಮದಲ್ಲಿರುವ ಕವಿಯ ಪ್ರೀತಿ ನಮಗೆ ಅಡ್ಡ ಬರುತ್ತದೆ ಕವಿಯೇ ಹೇಳುವಂತೆ ಈ ಪ್ರೀತಿ ಎಂಬ ರೋಗಕ್ಕೆ ಮದ್ದು ಸಿಗದಿರಲಿ. ಈ ರೋಗ ಒಂದಲ್ಲಾ ಒಂದು ದಿನ ನಮ್ಮನ್ನು ಸ್ವರ್ಗಕ್ಕೆ ಒಯ್ಯುತ್ತದೆ ಎಂದರು.

ಅತ್ಯಂತ ಕಷ್ಟದ ಕಾಲದಲ್ಲಿ ಉತ್ತಮ ಪ್ರೀತಿಯ ಕಾವ್ಯ ಹುಟ್ಟುತ್ತದೆ. ಕಾವ್ಯ ಯಾವಾಗಲೂ ನಮಗೆ ಹೊಸದನ್ನು ಹೇಳಲೇಬೇಕು ಒಬ್ಬ ಆದಿವಾಸಿ ಕವಿ ಹೇಳುವಂತೆ ನಮ್ಮ ರೈತ ಹಸಿವಿನಿಂದ ಸಾಯುವ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಏಕೆಂದರೆ ಆದಿವಾಸಿಗಳಿಗೆ ಸರ್ಕಾರದ ಯಾವುದೇ ವಸ್ತು ಸಿಗುವುದಿಲ್ಲ ಸರ್ಕಾರಕ್ಕೆ ನಾವು ಇರುವುದೇ ಗೊತ್ತಿಲ್ಲ ಆಳುವ ವರ್ಗದ ದ್ವೇಷ ಬಿಟ್ಟು ಯಾವುದು ನಮಗೆ ತಲುಪುವುದಿಲ್ಲ, ಹಾಗಾಗಿ ನಾವು ಹಾಗೆ ಸಾಯುವುದರ ಬದಲು ಆತ್ಮಹತ್ಯೆ ಮಾಡಿಕೊಳ್ಳಬೇಕು. ಆಗ ಮಾತ್ರ ಸರ್ಕಾರಕ್ಕೆ ನಾವಿರುವುದು ಗೊತ್ತಾಗುತ್ತದೆ ಮತ್ತು ಸುದ್ದಿ ಮಾಧ್ಯಮಗಳು ನಮ್ಮ ಸುದ್ದಿಯನ್ನು ಹಾಕುತ್ತವೆ, ಇಷ್ಟಕ್ಕೂ ನಾವು ನೆಮ್ಮದಿಯಿಂದ ಇರುವುದು ಏಕೆಂದರೆ ನಮ್ಮ ಏಕಮಾತ್ರ ಧರ್ಮ.ಅದುವೇ ಕಾವ್ಯ ಧರ್ಮ ಅದು ಎಂದಿಗೂ ಬರಿದಾಗುವುದಿಲ್ಲ ಎಂದರು. ಸಮ್ಮೇಳನದ ಅಧ್ಯಕ್ಷರ ಕುರಿತು ಕುವೆಂಪು ವಿ.ವಿ ಕನ್ನಡ ಭಾರತಿ ನಿರ್ದೇಶಕರಾದ ಪ್ರೊ. ನೆಲ್ಲಿಕಟ್ಟೆ ಎಸ್. ಸಿದ್ದೇಶ್ ರವರು ಮಾತನಾಡಿದರು. ತುಮಕೂರಿನ ಡಾ.ಶೈಲ ನಾಗರಾಜ್ ರವರು ಸಮ್ಮೇಳನದ ಅಧ್ಯಕ್ಷರಿಗೆ ಗೌರವ ಪ್ರಧಾನ ಮಾಡಿದರು.

ಲೇಖಕಿ ಸಬಿತಾ ಬನ್ನಾಡಿ ಮಾತನಾಡಿ ಕಥೆ ಕವನಗಳನ್ನು ಬರೆದ ಕವಯತ್ರಿಗೆ ಬೂಕರ್ ಪ್ರಶಸ್ತಿ ಬಂದಿದೆ. ಆದರೆ ನಮಗೆ ಅವರು ಮುಖ್ಯವಾಗುವುದು,ಅವರ ಮಾನಸಿಕ ಸ್ಥೈರ್ಯದ ಬಗ್ಗೆ ಅವರು  ಬರೆದ ಕಥೆ ಒಂದರಲ್ಲಿ ಮಸೀದಿಯ ಗುರು ಒಬ್ಬನು ಹೆಣವನ್ನು ಇಟ್ಟುಕೊಂಡು ಅದರ ಮೇಲೆ ರಾಜಕೀಯವನ್ನು ಮಾಡುತ್ತಾನೆ. ಈ ಕಥೆ ಓದಿದ ಕೆಲವರು ಲೇಖಕಿಯ ಮೇಲೆ ಪತ್ವಾ ಹಾಕಿ ಇನ್ನು ಮುಂದೆ ಯಾವ ಕಾವ್ಯವನ್ನು ಕಥೆಯನ್ನು ಬರೆಯಬಾರದು ಎಂದು ಪತ್ವದ ನೋಟಿಸ್ ಅನ್ನು ಅವರ ಕೈಗೆ ನೀಡಿದರು. ಆದರೆ ಅವರ ಎದುರಿಗೆ ಆ ನೋಟಿಸ್ ಅನ್ನು ಲೇಖಕಿ ಹರಿದು ಹಾಕಿದಳು. ಹಾಗಾಗಿ ಕಥೆ ಕವನ ತನ್ನಷ್ಟಕ್ಕೆ ಹೊರಹೊಮ್ಮುವ ರೀತಿ ಮುಖ್ಯವಾದದ್ದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಜಾನ್ ದರ್ಗಾ ರವರು ಮಾತನಾಡಿ ಬಡವರಿಗೆಆದಿವಾಸಿ ಜನರಿಗೆ ಏನು ಸಿಗುವುದಿಲ್ಲ ಕೇವಲ ದ್ವೇಷ ಸಿಗುತ್ತದೆ ಮಹಾಭಾರತದಲ್ಲಿ ತಮ್ಮಷ್ಟಕ್ಕೆ ತಾವೇ ಇದ್ದ ಮೂಲ ನಿವಾಸಿಗಳ  ನಾಗರುಗಳ ಪ್ರದೇಶದ ಮೇಲೆ ಬೆಂಕಿ ಹಾಕಿ ಅವರನ್ನು ಕೊಂದು ಓಡಿಸಿ ಆ ಜಾಗದಲ್ಲಿ ಅರಮನೆಯನ್ನು ಕಟ್ಟಲಾಯಿತು. ಮೇಲು ವರ್ಗದ ಸಂಸ್ಕೃತಿ ಎಂದರೆ ಅದು ಹೊರಹಾಕುವ ಸಂಸ್ಕೃತಿಯಾಗಿದೆ, ನಮ್ಮ ದೇವಸ್ಥಾನದಿಂದ ನಮ್ಮ ಮಠದಿಂದ ನಮ್ಮ ಮನೆಯಿಂದ ನಮ್ಮ ಶಿಕ್ಷಣ ಸಂಸ್ಥೆಯಿಂದ ನಮ್ಮ ಮದುವೆ ಮನೆಯಿಂದ ಎಲ್ಲರನ್ನೂ ಹೊರ ಹಾಕುತ್ತೇವೆ. ಆದರೆ ಶರಣ ಸಂಸ್ಕೃತಿ ಒಳಗೊಳ್ಳುವ ಸಂಸ್ಕೃತಿ ಯಾಗಿದೆ. ಇವನಾರವ ಇವನಾರವ ಎನ್ನದಿರಯ್ಯ ಇವ ನಮ್ಮವ ಇವ ನಮ್ಮವ ಎನ್ನಿರಯ್ಯ ಎಂದ ಬಸವಣ್ಣನವರು ಈ ನಾಡಿನ ಶರಣ ಸಂಸ್ಕೃತಿಯವರು ಇದು ಒಳಗೊಳ್ಳುವ ಸಂಸ್ಕೃತಿಯಾಗಿದೆ ಎಂದರು.

ಇದೇ ಸಂದರ್ಭದಲ್ಲಿ ರಶ್ಮಿ ಕೆ ವಿಶ್ವನಾಥ ಇವರು ಬರೆದಿರುವ ಸ್ಪೂರ್ತಿಯ ಚಿಲುಮೆ ಸುಧಾ ಮೂರ್ತಿ ಎಂಬ ಪುಸ್ತಕವನ್ನು ಹಾಸನದ ಪತ್ರಕರ್ತರಾದ ನಾಗರಾಜ್ ಹೆತ್ತೂರ್ ಲೋಕಾರ್ಪಣೆ ಮಾಡಿದರು.

ರಾಷ್ಟ್ರೀಯ ಪ್ರಶಸ್ತಿ ಭಾಜನರು

ಇದೇ ಸಂದರ್ಭದಲ್ಲಿ ಕ್ರಾಂತಿದೀಪ ಪತ್ರಿಕೆಯ ಸಂಪಾದಕರಾದ ಎನ್ ಮಂಜುನಾಥ್ ಸೇರಿದಂತೆ ಎಂಟು ಜನ ಸಾಧಕರಿಗೆ ವಿವಿಧ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಲಾಯಿತು.
ಡಾಕ್ಟರ್ ಎಸ್ ಕೆ ಕರೀಂ ಖಾನ್  ಜಾನಪದ ಪುರಸ್ಕಾರವನ್ನು ಕೊಪ್ಪಳದ ಜಾನಪದ ಕಲಾವಿದರು ಸಾಹಿತಿಗಳು ಆದ ರಮೇಶ್ ಗಬ್ಬೂರ್, ರವರಿಗೆ, ಡಾ. ಯು. ಆರ್. ಅನಂತಮೂರ್ತಿ ಸಾಹಿತ್ಯ ಪುರಸ್ಕಾರವನ್ನು ಉತ್ತರ ಕನ್ನಡ ಜಿಲ್ಲೆಯ ಶ್ರೀದೇವಿ ಕೆರೆಮನೆಯವರಿಗೆ ನಾಡೋಜ ಡಾ.ದೇ. ಜ.ಗೌ.ಸಾಹಿತ್ಯ ಪ್ರಶಸ್ತಿಯನ್ನು ಮೈಸೂರಿನ ವಿಶ್ರಾಂತ ಪ್ರಾಂಶುಪಾಲರಾದ ಸಾತನೂರು ದೇವರಾಜುರವರಿಗೆ ಡಾ. ಎಂ. ಎಂ. ಕಲಬುರ್ಗಿ  ಸಂಶೋಧನಾ ಸಾಹಿತ್ಯ ಪುರಸ್ಕಾರವನ್ನು ಕುವೆಂಪು ವಿ.ವಿ. ಕನ್ನಡ ಭಾರತಿ ಪ್ರಾಧ್ಯಾಪಕರಾದ ಡಾ. ಜಿ. ಪ್ರಶಾಂತ್ ನಾಯಕ್ ರವರಿಗೆ, ಕಿ.ರಂ. ನಾಗರಾಜು ಸಾಹಿತ್ಯ ಪುರಸ್ಕಾರವನ್ನು ಕುವೆಂಪು ವಿ.ವಿ. ಕನ್ನಡ ಭಾರತಿ ನಿರ್ದೇಶಕರಾದ ನೆಲ್ಲಿಕಟ್ಟೆ ಸಿದ್ದೇಶ್ ರವರಿಗೆ ಡಾ. ಕಯ್ಯಾರ ಕಿಞ್ಞಣ್ಣ ರೈ ಗಡಿನಾಡ ಸಾಹಿತ್ಯ ಪುರಸ್ಕಾರವನ್ನು ಬೀದರ್ ನ ಸಾಹಿತಿ ಡಾ ಎಂ. ಜಿ. ದೇಶಪಾಂಡೆ ಅವರಿಗೆತಿರುಮಲಾಂಬ ಸಾಹಿತ್ಯ ಪುರಸ್ಕಾರವನ್ನು ಶಿವಮೊಗ್ಗದ ಡಾ!!  ಕೆ ಎಸ್ ಪವಿತ್ರ ರವರಿಗೆ ಡಿವಿ ಗುಂಡಪ್ಪ ಮಾಧ್ಯಮ ಪುರಸ್ಕಾರವನ್ನು ಶಿವಮೊಗ್ಗದ ಕ್ರಾಂತಿದೀಪ ಪತ್ರಿಕೆಯ ಸಂಪಾದಕ ಎನ್. ಮಂಜುನಾಥ್ ರವರಿಗೆ ಹಾಗೂ ಸಮಾಜ ಸೇವ ರತ್ನ ರಾಜ್ಯ ಪ್ರಶಸ್ತಿಯನ್ನು ಬಳ್ಳಾರಿಯ ಜಿ ನಾಗವೇಣಿ ರೆಡ್ಡಿ ಅಬುದಾಬಿಯ ರವಿಕಾಂತ ಹೆಗಡೆ ಮತ್ತು ಶಂಕರಘಟ್ಟದ ದೀನ ಬಂದು ಟ್ರಸ್ಟ್ ಎಂ ರಮೇಶ್ ರವರಿಗೆ ನೀಡಲಾಯಿತು.

ಕವಿ ಕಾವ್ಯ ಸಮ್ಮೇಳನದ ಉದ್ಘಾಟನೆಯನ್ನು ಕುವೆಂಪು ವಿಶ್ವವಿದ್ಯಾನಿಲಯದ ಮೌಲ್ಯಮಾಪನ ವಿಭಾಗದ ಕುಲ ಸಚಿವರಾದ ಪ್ರೊ. ಆರ್ ತಿಮ್ಮರಾಯಪ್ಪ ನಡೆಸಿಕೊಟ್ಟರು. ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಶಿವಮೊಗ್ಗದ ಜಿಲ್ಲಾಧ್ಯಕ್ಷರಾದ ಡಾ. ಹಸೀನಾ ಎಚ್ .ಕೆ. ಸ್ವಾಗತಿಸಿದರೆ, ಪ್ರಾಸ್ತಾವಿಕ ನುಡಿಯನ್ನು ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ಬೆಂಗಳೂರಿನ ಸಂಸ್ಥಾಪಕ ಅಧ್ಯಕ್ಷರಾದ ಕೊಟ್ರೇಶ್ ಎಸ್ ಉಪ್ಪಾರ್ ನುಡಿದರು. ವಾರ್ಷಿಕ ವರದಿಯನ್ನು ವೇದಿಕೆಯ ರಾಜ್ಯ ಜಂಟಿ ಕಾರ್ಯದರ್ಶಿಯಾದ ನಾಗರಾಜ್ ದೊಡ್ಡಮನಿ ಓದಿದರು. ವೇದಿಕೆಯಲ್ಲಿ ಶಿವಮೊಗ್ಗ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆಯ ಜಿಲ್ಲಾ ಗೌರವಾಧ್ಯಕ್ಷರಾದ ಡಾ. ಕೆ. ಜಿ. ವೆಂಕಟೇಶ್ ಉಪಸ್ಥಿತರಿದ್ದರು.

ಮಧ್ಯಾಹ್ನದ  ನಂತರ ಮೂರು ಕಡೆ ಕವಿಗೋಷ್ಠಿಯನ್ನು ನಡೆಸಲಾಯಿತು. ಒಂದನೇ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ದಾವಣಗೆರೆಯ ಕಾಲೇಜಿನ ಸಹಪ್ರಾಧ್ಯಾಪಕರು ಡಾ.ಕಾವ್ಯಶ್ರೀ ವಹಿಸಿದ್ದರು ಮತ್ತು ಬೆಂಗಳೂರಿನ ಸತೀಶ್ ಜವರೇಗೌಡರವರು ಆಶಯ ನುಡಿಗಳನ್ನು ಹಾಡಿದರು.

ಕವಿಗೋಷ್ಠಿ ಎರಡರ ಅಧ್ಯಕ್ಷತೆಯನ್ನು ಹಾಸನದ ಸಾಹಿತಿ ಎನ್ ಶೈಲಜಾ ವಹಿಸಿದ್ದರು ಸಾಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ. ಕುಂಸಿ ಉಮೇಶ್ ಆಶಯ ನುಡಿಗಳನ್ನು ಆಡಿದರು.

ಕವಿಗೋಷ್ಠಿ ಮೂರರ ಅಧ್ಯಕ್ಷತೆಯನ್ನು ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ. ಸಿದ್ದರಾಮ ಹೊನ್ಕಲ್ ವಹಿಸಿದ್ದರು ಆಶಯ ನುಡಿಗಳನ್ನು ಬೆಳಗಾವಿಯ ಸಾಹಿತಿ ಹಮೀದಾ ಬೇಗಂ ದೇಸಾಯಿ ನುಡಿದರು.

ಪ್ರತಿ ಗೋಷ್ಠಿಯಲ್ಲು ತಲಾ 30ಜನ ಕವಿಗಳು ಭಾಗವಹಿಸಿದ್ದರು. ಇಷ್ಟೊಂದು ಜನ ಕವಿಗಳು ಒಂದೇ ಬಾರಿಗೆ ಕುವೆಂಪು ವಿವಿಯಲ್ಲಿ ಭಾಗವಹಿಸಿ ಕವನ ಓದಿರುವುದು ಇದೇ ಮೊದಲು ಎಂದು ಸಮ್ಮೇಳನ ಅಧ್ಯಕ್ಷರಾದ ಡಾ. ರಾಜೇಂದ್ರ ಚೆನ್ನಿ ಅಭಿಪ್ರಾಯಪಟ್ಟರು.

Share This Article
";