ಮಕ್ಕಳನ್ನು ವಿದ್ಯಾವಂತರನ್ನಾಗಿಸಿ, ಉತ್ತಮ ಭವಿಷ್ಯ ರೂಪಿಸಿ : ಎಂ. ಶ್ರೀಕಾಂತ್

Kranti Deepa

 ಶಿವಮೊಗ್ಗ,ಅ.15  : ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ತಮ್ಮ ಕೆಲಸವನ್ನು ಮಾಡಲು ಬಿಡದೆ, ಅವರನ್ನು ವಿದ್ಯಾವಂತರನ್ನಾಗಿ ಮಾಡಿ ಉತ್ತಮ ಭವಿಷ್ಯವನ್ನು ನೀಡಬೇಕು ಎಂದು ಕಾಂಗ್ರೆಸ್ ಮುಖಂಡ ಎಂ. ಶ್ರೀಕಾಂತ್  ಕರೆ ನೀಡಿದರು.

ದೀಪಾವಳಿ ಹಬ್ಬದ ಪ್ರಯುಕ್ತ ಸದ್ಭಾವನಾ ಎಜುಕೇಶನ್ ಮತ್ತು ಚಾರಿಟೇಬಲ್ ಟ್ರಸ್ಟ್ ವತಿಯಿಂದ ಎಂ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆಯ ಮಹಿಳಾ ಪೌರ ಕಾರ್ಮಿಕರಿಗಾಗಿ ಸೀರೆ ವಿತರಣೆ ಹಾಗೂ ಮೃಷ್ಟಾನ್ನ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣವನ್ನು ಕೊಡಿಸಿ ವಿದ್ಯಾವಂತರನ್ನಾಗಿ ಮಾಡಬೇಕು. ಮಕ್ಕಳು ತಮ್ಮದೇ ಕೆಲಸವನ್ನು ಮುಂದುವರಿಸದಂತೆ ಉತ್ತಮ ಭವಿಷ್ಯವನ್ನು ಕಟ್ಟಿಕೊಡಬೇಕು ಎಂದು ಒತ್ತಿ ಹೇಳಿದರು.

ಹಿಂದಿನ ಬಾರಿ ದಸರಾ ಹಬ್ಬದ ಸಂದರ್ಭದಲ್ಲಿ ಮಹಿಳಾ ಪೌರ ಕಾರ್ಮಿಕರಿಗೆ ಸೀರೆ ವಿತರಿಸಲಾಗಿತ್ತು. ಈ ಬಾರಿ ದೀಪಾವಳಿ ಹಬ್ಬದ ಪ್ರಯುಕ್ತ ನೀಡಲಾಗುತ್ತಿದೆ.   ನಾಲ್ಕು ವರ್ಷಗಳಿಂದಲೂ ಈ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಬಂದಿರುವುದಾಗಿ ಅವರು ತಿಳಿಸಿದರು. “ನಾನು ಕೇವಲ ಚುನಾವಣೆಗೋಸ್ಕರ ಈ ಕೆಲಸ ಮಾಡುತ್ತಿಲ್ಲ. ನಿಮ್ಮೆಲ್ಲರ ಕಷ್ಟದ ಜೀವನವನ್ನು ನಾನು ಹತ್ತಿರದಿಂದ ಅರಿತಿದ್ದೇನೆ. ನಿಮ್ಮೊಂದಿಗೆ ಸದಾ ಇರುತ್ತೇನೆ. ಮುಂದಿನ ಬಾರಿ ಗೌರಿ ಗಣೇಶ ಹಬ್ಬದ ಸಂದರ್ಭದಲ್ಲಿ ಪುರುಷ ಪೌರ ಕಾರ್ಮಿಕರಿಗೂ ಇದೇ ರೀತಿ ಕಾರ್ಯಕ್ರಮ ಆಯೋಜಿಸಲಾಗುವುದು,” ಎಂದು ಅವರು ಭರವಸೆ ನೀಡಿದರು.

ಭಾವನಾತ್ಮಕ ಬಂಧದ ಕಾರ್ಯಕ್ರಮ: ಗೋವಿಂದ
ಮಹಾನಗರ ಪಾಲಿಕೆಯ ಅಧ್ಯಕ್ಷ ಗೋವಿಂದ ಮಾತನಾಡಿ, ನಾಲ್ಕು ವರ್ಷಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರಲಾಗುತ್ತಿದೆ. ಇದು ಕೇವಲ ಸಾಂಕೇತಿಕ ಕಾರ್ಯಕ್ರಮವಾಗಿರದೆ, ತಾಯ್ತನದಲ್ಲಿರುವ ಭಾವನಾತ್ಮಕ ಬಂಧದ ಕಾರ್ಯಕ್ರಮವಾಗಿದೆ. ಪ್ರೀತಿಯಿಂದ ತಂದೆ, ಅಣ್ಣ, ತಾಯಿ ಬಾಗಿನ ಕೊಡಲು ಬರುತ್ತಾರೆ ಎಂದು ಮಹಿಳೆಯರು ಕಾತರದಿಂದ ಕಾಯುತ್ತಿರುತ್ತಾರೆ. ಅದು ಸಾಧ್ಯವಾಗದೇ ಇದ್ದಾಗ ಅವರಿಗೆ ಬೇಸರವಾಗುತ್ತದೆ. ಇದನ್ನು ಅರಿತ ಶ್ರೀಕಾಂತ್ ಅಣ್ಣ ಎಲ್ಲರ ತಂದೆ-ಅಣ್ಣನ ಸ್ಥಾನದಲ್ಲಿ ನಿಂತು, ಚುನಾವಣೆ ಇಲ್ಲದ ಸಂದರ್ಭದಲ್ಲಿಯೂ ಸಮಾನತೆಯಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಅವರು ಅಧಿಕಾರಸ್ಥ ರಾಜಕಾರಣಿಯಾಗಿ ಬೆಳೆಯಬೇಕು, ಎಂದು ಹಾರೈಸಿದರು.

ಕಷ್ಟದಲ್ಲಿರುವವರಿಗೆ ನೆರವಾಗುವ ಜೀವ ಶ್ರೀಕಾಂತ್: ಕೆ.ಪಿ. ಶ್ರೀಪಾಲ್
ನ್ಯಾಯವಾದಿ  ಕೆ ಪಿ ಶ್ರೀಪಾಲ್  ಮಾತನಾಡಿ, “ಇಡೀ ದೇಶದಲ್ಲಿ ದೇವರಾಜ ಅರಸು ಅವರ ನಂತರ ಕರ್ನಾಟಕ ಕಂಡ ಉತ್ತಮ ನಾಯಕ ಎಂದರೆ ಅದು ಸಿದ್ದರಾಮಯ್ಯ. ಅದೇ ರೀತಿ ಶಿವಮೊಗ್ಗದಲ್ಲಿ ಕಷ್ಟದಲ್ಲಿರುವವರಿಗೆ ಶ್ರಮಿಸುವ ಜೀವ ಎಂದರೆ ಅದು ಶ್ರೀಕಾಂತ್. ಅವರು ಅನೇಕರಿಗೆ ಸಹಾಯ ಮಾಡಿದ್ದಾರೆ. ಇವರನ್ನು ವಿಧಾನಸೌಧಕ್ಕೆ ಕಳುಹಿಸುವ ಕೆಲಸವನ್ನು ನೀವೆಲ್ಲ ಮಾಡಬೇಕು, ಎಂದರು. ಸ್ಮಾರ್ಟ್ ಸಿಟಿಗಾಗಿ 2,000 ಕೋಟಿ ರೂಪಾಯಿ ವೆಚ್ಚ ಮಾಡಿದ್ದರೂ ರಸ್ತೆಗಳು ಸರಿಯಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ ಅವರು,  ಶ್ರೀಕಾಂತ್ ಅವರು ಬೇರೆಯವರಿಗೆ ಅವಕಾಶ ಕೊಟ್ಟು ಬೆಳೆಸಿದ್ದಾರೆ, ಯಾವುದೇ ಆಸ್ತಿಯನ್ನು ಮಾಡಿಕೊಳ್ಳದೆ ಸರಳವಾಗಿ ಬದುಕಿ ತೋರಿಸುತ್ತಿದ್ದಾರೆ ಎಂದರು.
ಮಹಾನಗರ ಪಾಲಿಕೆಯ ಮಾಜಿ ವಿರೋಧ ಪಕ್ಷದ ನಾಯಕಿ ರೇಖಾ ರಂಗನಾಥ್ ಮಾತನಾಡಿ,  “ಮಹಿಳೆಯರು ಎಲ್ಲಾ ಕ್ಷೇತ್ರದಲ್ಲೂ ತಮ್ಮದೇ ಆದ ಸ್ಥಾನ ಮತ್ತು ಛಾಪನ್ನು ಮೂಡಿಸುತ್ತಿದ್ದಾರೆ. ಪೌರ ಕಾರ್ಮಿಕ ಮಹಿಳೆಯರು ಮನೆಯ ನಿರ್ವಹಣೆಯ ಜೊತೆಗೆ, ವಿಶೇಷವಾಗಿ ಕೊರೊನಾ ಸಂದರ್ಭದಲ್ಲಿಯೂ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಹಕರಿಸಿದ ಅವರ ಸೇವೆ ಶ್ಲಾಘನೀಯ.  ಎಂದಿಗೂ ಅಧಿಕಾರದ ಆಸೆಯನ್ನು ಪಡದೆ, ಅಣ್ಣನ ಸ್ಥಾನದಲ್ಲಿ ನಿಂತುಕೊಂಡು ಈ ಉತ್ತಮ ಕಾರ್ಯವನ್ನು ಮಾಡುತ್ತಿದ್ದಾರೆ  ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ಈ ಸಂದರ್ಭದಲ್ಲಿ 300 ಕ್ಕೂ ಹೆಚ್ಚು ಮಹಿಳೆಯರಿಗೆ ತಲಾ 2,000 ಮೌಲ್ಯದ ಸೀರೆಯನ್ನು ವಿತರಿಸಲಾಯಿತು ಮತ್ತು 30 ಕ್ಕೂ ಹೆಚ್ಚು ಬಗೆಯ ಖಾದ್ಯಗಳ ಭೋಜನ ವ್ಯವಸ್ಥೆ ಮಾಡಲಾಗಿತ್ತು.

Share This Article
";