ಶಿಕಾರಿಪುರದ ಹೊಸೂರಿನಲ್ಲಿ ಚಿರತೆಯ ಕಳೆಬರ ಪತ್ತೆ

Kranti Deepa
ಶಿವಮೊಗ್ಗ, ಆ.29  : ಜಿಲ್ಲೆಯ ಶಿಕಾರಿಪುರ ತಾಲ್ಲೂಕು  ಹೊಸೂರು ಹೋಬಳಿಯಲ್ಲಿ ಗೊಗ್ಗದ ರಾಜ್ಯ ಅರಣ್ಯದ ಸರ್ವೆ ನಂ. 197 ರಲ್ಲಿ ಚಿರತೆಯೊಂದರ ಕಳೆಬರ ಪತ್ತೆಯಾಗಿದೆ. ಇಲ್ಲಿನ ಎಂಪಿಎಂ ನಡುತೋಪಿನಲ್ಲಿ ಚಿರತೆ ಪತ್ತೆಯಾಗಿದ್ದು, ಅದರ ಸಾವಿಗೆ ಕಾರಣ ಸ್ಪಷ್ಟವಾಗಿಲ್ಲ. ಅಧಿಕಾರಿಗಳ ಪ್ರಕಾರ,  ಮೂರು ವರ್ಷ ಪ್ರಾಯದ ಗಂಡು ಚಿರತೆಯ ಮೃತದೇಹ ಇದಾಗಿದೆ. ಈ ಸಂಬಂಧ  ಮರಣೋತ್ತರ ಪರೀಕ್ಷೆಯ ವರದಿಗೆ ಕಾಯಲಾಗುತ್ತಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಿ. ಮೋಹನ್ ಕುಮಾರ್ ಸ್ಥಳೀಯ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಮಹಜರ್ ನಡೆಸಿದ್ದಾರೆ.  ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ವಿ.ಎಸ್. ರವೀಂದ್ರ ನಾಯ್ಕ, ತಹಶೀಲ್ದಾರ್ ಮಂಜುಳಾ ಶಂಕರ ಭಜಂತ್ರಿ, ನಿಸರ್ಗ ಕನ್ಸರ್ವೇಶನ್ ಟ್ರಸ್ಟ್‌ನ ಜಿ.ಎನ್. ಅರುಣ್ ಕುಮಾರ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಗುರುಸಿದ್ದಪ್ಪ, ಹುಲಿ ಸಿಂಹಧಾಮದ ವೈದ್ಯಾಧಿಕಾರಿ ಮುರಳಿ ಮನೋಹರ್, ಮುಖ್ಯ ಪಶುವೈದ್ಯಾಧಿಕಾರಿಗಳಾದ ಡಾ||  ರವಿ, ಡಾ!  ಸುನೀಲ್ ಸೇರಿದಂತೆ ವಿವಿಧ  ಸಿಬ್ಬಂದಿಗಳು ಸ್ಥಳದಲ್ಲಿದ್ದರು.

Share This Article
";