ಶಿವಮೊಗ್ಗ,ಅ.25 : ಕಾನೂನು ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಮಾತೃಭಾಷೆ ಮತ್ತು ಇಂಗ್ಲೀಷ್ ಭಾಷೆಯ ಮೇಲಿನ ಪ್ರಬುದ್ಧತೆ ಅತಿ ಮುಖ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಅಭಿಪ್ರಾಯಪಟ್ಟರು.
ನಗರದ ಸಿ.ಭೀಮಸೇನರಾವ್ ಕಾನೂನು ಮಹಾವಿದ್ಯಾಲಯದ ವತಿಯಿಂದ ಶುಕ್ರವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಮೂರು ವರ್ಷಗಳ ಹಾಗೂ ಐದು ವರ್ಷಗಳ ಎಲ್.ಎಲ್.ಬಿ ಕೋರ್ಸ್ ನೂತನವಾಗಿ ಪ್ರವೇಶಾತಿ ಪಡೆದಿರುವ ಕಾನೂನು ವಿದ್ಯಾರ್ಥಿಗಳಿಗಾಗಿ ಏರ್ಪಡಿಸಿದ್ದ ಅಭಿವಿನ್ಯಾಸ (ಓರಿಯಂಟೇಷನ್) ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಇಂದು ಕನ್ನಡದಲ್ಲಿ ವಾದ ಮಾಡಲು ಹಾಗೂ ಕಾನೂನು ಅಧ್ಯಯನ ನಡೆಸಲು ಅನೇಕ ಅವಕಾಶಗಳು ಲಭ್ಯವಾಗುತ್ತಿರುವುದು ಅಭಿನಂದನಾರ್ಹ. ಅದರೆ ಭಾರತೀಯ ಸಂವೀಧಾನದ ಮೂಲ ಪ್ರತಿಗಳನ್ನು ಅಧ್ಯಯನ ನಡೆಸಿ ಪರಿಪಕ್ವವಾಗಲು ಇಂಗ್ಲೀಷ್ ಎಂಬುದು ಅತ್ಯವಶ್ಯಕ. ಹಾಗಾಗಿಯೇ ಕನ್ನಡ ಮತ್ತು ಇಂಗ್ಲೀಷ್ ಎರಡನ್ನು ಸುಲಲಿತವಾಗಿ ಗ್ರಹಿಸುವ ಮತ್ತು ಗ್ರಹಿಸಿದ ವಿಚಾರಗಳನ್ನು ಬರವಣಿಗೆಯ ರೂಪಕ್ಕೆ ತರುವ ಕೌಶಲ್ಯತೆ ನಿಮ್ಮದಾಗಬೇಕಿದೆ. ವಕೀಲಿ ವೃತ್ತಿಯಲ್ಲಿ ಓದು ಎಂಬುದು ನಿರಂತರವಾಗಿ ನಡೆಯಬೇಕಾದ ಅನಿವಾರ್ಯತೆಯಿದೆ.
ಬರವಣಿಗೆ ಎಂಬುದು ವಕೀಲಿ ವೃತ್ತಿಯಲ್ಲಿ ಪ್ರಾಮುಖ್ಯತೆ ಪಡೆದ ವಿಚಾರ. ಕರಡು ಪ್ರತಿ ತಯಾರಿಸುವಾಗ ಬಳಸುವ ಕೆಲವು ಶಬ್ದಕೋಶಗಳಿಂದ ಇಡೀ ಪ್ರಕರಣವೇ ಏರಿಳಿತವಾಗುವ ಸಾಧ್ಯತೆಯಿರುತ್ತದೆ. ಅನುಭವಾತ್ಮಕ ಕಲಿಕೆಯು ನಿಜವಾದ ಕಲಿಕೆಯಾಗಿದ್ದು, ಅದಕ್ಕಾಗಿ ತರಗತಿಗಳನ್ನು ಚರ್ಚಾ ವೇದಿಕೆಗಳಾಗಿ ಬದಲಾಯಿಸಿಕೊಳ್ಳಬೇಕು. ಹಿಂಜರಿಕೆ ವಿಶ್ವಾಸರಹಿತ ನಡವಳಿಕೆಯಿಂದ ಹೊರಬರಲು ಇಂತಹ ಚರ್ಚಾ ವೇದಿಕೆಗಳು ಬಳಸಿಕೊಳ್ಳಿ. ಆಗ ಮಾತ್ರ ನಿಜವಾಗಿಯೂ ಕಾನೂನು ಅಧ್ಯಯನಕ್ಕೆ ತೆರೆದುಕೊಳ್ಳಲು ಸಾಧ್ಯ.
ಹಿರಿಯ ಸಿವಿಲ್ ನ್ಯಾಯಾಧೀಶರಾದ ಎಂ.ಎಸ್.ಸಂತೋಷ್ ಮಾತನಾಡಿ, ಕಾಲೇಜು ಜ್ಞಾನ ನೀಡುವ ಪ್ರಯತ್ನ ಮಾಡುತ್ತದೆ, ಅದರೆ ಒಳ್ಳೆಯ ವಿಷಯಗಳನ್ನು ಹಾಗೂ ಜ್ಞಾನವನ್ನು ಗ್ರಹಿಸುವ ಶಕ್ತಿಯನ್ನು ನೀವೆ ಕಲಿಯಬೇಕು.
ಜಾಗತೀಕರಣದ ನಂತರ ಕಾನೂನು ತಜ್ಞರಿಗೆ ಅನೇಕ ಉದ್ಯೋಗವಕಾಶಗಳು ದೊರೆಯುತ್ತಿದೆ. ಕಾನೂನು ಅಧ್ಯಯನದಲ್ಲಿ ನೀವು ಆಯ್ದುಕೊಳ್ಳುವ ವಿಶೇಷ ವಿಷಯಗಳ ಕುರಿತು ಸ್ಪಷ್ಟತೆ ಪಡೆಯಿರಿ. ಭಾಷಾ ಕಲಿಕೆ ಮತ್ತು ಬರವಣಿಗೆಯ ಕೌಶಲ್ಯತೆಯೇ ವಕೀಲಿ ವೃತ್ತಿಯಲ್ಲಿ ಉನ್ನತಿಗೆ ತೆಗೆದುಕೊಂಡು ಹೋಗಲಿದೆ ಎಂಬುದನ್ನು ಮರೆಯದಿರಿ ಎಂದು ಸಲಹೆ ನೀಡಿದರು.
ವೃತ್ತಿಯಲ್ಲಿ ಎಂದಿಗೂ ಮೌಲ್ಯಗಳನ್ನು ಬಿಟ್ಟು ಹೋಗಬೇಡಿ. ಯಶಸ್ಸು ಎಂಬುದು ನಿಮ್ಮನ್ನು ಮತ್ತಷ್ಟು ಕಲಿಕೆಗೆ ಪ್ರೇರಣೆ ನೀಡಬೇಕೆ ವಿನಃ, ದುರಹಂಕಾರದ ಅಂಧತ್ವಕ್ಕಲ್ಲ ಎಂಬುದು ನೆನಪಿರಲಿ. ಶಿಸ್ತು, ಸಮಯ ಪ್ರಜ್ಞೆ, ಸಾಮಾನ್ಯ ಜ್ಞಾನ ಸದಾ ನಿಮ್ಮನ್ನು ಕಾಪಾಡುತ್ತಲೆ ಇರುತ್ತದೆ ಎಂದು ಹೇಳಿದರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ಎ.ಅನಲಾ ಅಧ್ಯಕ್ಷತೆ ವಹಿಸಿದ್ದರು. ಸಹಪ್ರಾಧ್ಯಾಪಕರಾದ ಬಸಪ್ಪ.ಬಿ.ಸಿ, ಐಕ್ಯೂ ಎಸಿ ಸಂಯೋಜಕರಾದ ಡಾ.ಕಾಂತರಾಜ್ ಉಪಸ್ಥಿತರಿದ್ದರು. ಸಹಾಯಕ ಪ್ರಾಧ್ಯಾಪಕರಾದ ಅನುಪಮ.ಬಿ.ಯು ನಿರೂಪಿಸಿದರು, ಸೌಮ್ಯ.ಹೆಚ್.ಎ ಸ್ವಾಗತಿಸಿ, ಸಹ ಪ್ರಾಧ್ಯಾಪಕರಾದ ಡಾ.ಆದರ್ಶ್.ಎನ್ ವಂದಿಸಿದರು.