ಶಿವಮೊಗ್ಗ,ಜ.16 : ಪರಿಸರವನ್ನು ಅಭಿವೃದ್ಧಿಪಡಿಸಲು ಮೀಸಲಾಗಿರುವ ಪಿಇಎಸ್ ಟ್ರಸ್ಟ್ ಶಿವಮೊಗ್ಗ ಇದರ ಆಶ್ರಯದಲ್ಲಿನ ಅನ್ವೇಷಣಾ ಇನ್ನೋವೇಷನ್ ಅಂಡ್ ಎಂಟರ್‌ಪ್ರಿನರಲ್ ಫೋರಮ್ ಜನವರಿ ೧೮, ರಂದು “ಮಲೆನಾಡು ಸ್ಟಾರ್ಟ್‌ಅಪ್ ಸಮ್ಮೇಳನ 2025 ” ಅನ್ನು ಆಯೋಜಿಸಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಪಿಇಎಸ್‌ನ ಮುಖ್ಯ ಆಡಳಿತ ಸಂಯೋಜನಾಧಿಕಾರಿ ನಾಗರಾಜ, ಕಳೆದ ವರ್ಷ ನಡೆದ ಮಲೆನಾಡು ಸ್ಟಾರ್ಟ್‌ಅಪ್ ಸಮ್ಮೇಳನದಲ್ಲಿ, ಮಲೆನಾಡಿನ 1,500 ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಂಡಿದ್ದು, ದೊಡ್ಡ ಮಟ್ಟದ ಸ್ಪಂದನೆಯನ್ನು ಪಡೆದಿತ್ತು. ಈ ಬಾರಿಯ ಸಮ್ಮೇಳನವು ಇನ್ನಷ್ಟು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಸಜ್ಜಾಗಿದೆ. 250 ಕ್ಕೂ ಹೆಚ್ಚು ಸ್ಟಾರ್ಟ್‌ಅಪ್ ಆಕಾಂಕ್ಷಿಗಳು ಹಾಗೂ 400 ಕ್ಕೂ ಹೆಚ್ಚು ರೈತರ ಉತ್ಪಾದಕ ಸಂಸ್ಥೆಗಳ ಸದಸ್ಯರು ಮತ್ತು ರೈತ ಬಾಂಧವರು ಪಾಲ್ಗೊಳ್ಳಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ, 25 ಕ್ಕೂ ಹೆಚ್ಚು ಆಯ್ದ ಸ್ಟಾರ್ಟ್ ಅಪ್‌ಗಳು ತಮ್ಮ ವಿಶೇಷ ತಂತ್ರಜ್ಞಾನವನ್ನು ಪ್ರದರ್ಶಿಸಲಿದ್ದಾರೆ. ಇದೇ ಸಂದರ್ಭದಲ್ಲಿ 30 ಕ್ಕೂ ಹೆಚ್ಚು ನುರಿತ ತಜ್ಞರು, ಮಾರ್ಗದರ್ಶಕರು ಹಾಗೂ ಹೂಡಿಕೆದಾರರರು ಭಾಗವಹಿಸಲಿದ್ದು ಸುಮಾರು 1000 ಕ್ಕೂ ಹೆಚ್ಚು ಯುವಜನರು ಈ ಸಮ್ಮೇಳನದ ಪ್ರಯೋಜನವನ್ನು ಪಡೆಯಲಿದ್ದಾರೆ ಎಂದರು.
ಈ ಸಮ್ಮೇಳನದಲ್ಲಿ ಅನ್ವೇಷಣಾ ಇಂಕ್ಯುಬೇಶನ್ ಪ್ರೋಗ್ರಾಂನ ಮೊದಲ ಹಂತದಲ್ಲಿ ಅಭಿವೃದ್ಧಿಗೊಂಡ 10 ನವೋದ್ಯಮಗಳು ಹೊರ ಹೊಮ್ಮಲಿದ್ದು, ಎರಡನೇ ಹಂತದಲ್ಲಿ 20 ನವೋದ್ಯಮಗಳು ಅನ್ವೇಷಣಾದಿಂದ ಮಾರ್ಗದರ್ಶನವನ್ನು ಪಡೆಯಲು ಸಜ್ಜಾಗಿವೆ. ಮಾರ್ಗದರ್ಶಕರು ಹಾಗೂ ಹೂಡಿಕೆದಾರರ ಭೇಟಿ ಮತ್ತು ಜ್ಞಾನವಿನಿಮಯ, ಇವುಗಳನ್ನು ಒಂದೇ ವೇದಿಕೆಯಲ್ಲಿ ಪಡೆಯಲು ಅನುಕೂಲವಾಗುವಂತೆ ಈ ಸಮ್ಮೇಳನವನ್ನು ಆಯೋಜಿಸಲಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪಿಇಎಸ್ ನ ಸಿಇಓ ಬಿ. ಆರ್. ಸುಭಾಷ್, ಸಂಸದ ರಾಘವೇಂದ್ರ, ಅನ್ವೇಷಣಾದ ಸಿಇಓ ಹರೀಶ್ ಗದಗಿನ್ ಉಪಸ್ಥಿತರಿದ್ದರು.
ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಹಾಗೂ ಗ್ರಾಮೀಣಾಭಿವೃದ್ಧಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕರ್ನಾಟಕ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಹಾಗೂ ತೋಟಗಾರಿಕೆ ಇಲಾಖೆಯ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ , ಅನ್ವೇಷಣಾದ ಮ್ಯಾನೇಜಿಂಗ್ ಡೈರೆಕ್ಟರ್ ಸಿ ಎಂ ಪಾಟೀಲ್ ಆಗಮಿಸಲಿದ್ದಾರೆ. ಪಿಇಎಸ್ ಟ್ರಸ್ಟ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ ಆರ್ ಸುಭಾಷ್ ಅನ್ವೇಷಣಾ ಸಂಸ್ಥೆಯ ಕುರಿತು ಮಾತನಾಡಲಿದ್ದಾರೆ. ಅಧ್ಯಕ್ಷತೆಯನ್ನು ಸಂಸದ ಬಿ ವೈ ರಾಘವೇಂದ್ರ ವಹಿಸುವರು.
– ಪ್ರೊ. ನಾಗರಾಜ್