ಶಿವಮೊಗ್ಗ,ಅ.23 : ಇಂದಿನ ಯುವ ಪೀಳಿಗೆಯು ಸೃಜನಶೀಲ ತಂತ್ರಜ್ಞಾನದ ಜಾಣತನವನ್ನು ಹೊಂದಿದ್ದು ಇದರೊಂದಿಗೆ ಆರ್ಥಿಕ ಹೂಡಿಕೆಯ ಅರಿವನ್ನು ವಿಸ್ತರಿಸಿಕೊಳ್ಳಿ ಎಂದು ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಅಭಿಪ್ರಾಯಪಟ್ಟರು.
ನಗರದ ಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಬುಧವಾರ ಕಾಲೇಜಿನ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಏರ್ಪಡಿಸಿದ್ದ ನೂತನ ಕೆನರಾ ಆ್ಯಸ್ಪೈರ್ಯ್ ಪ್ರಾಡೆಕ್ಟ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ಆರ್ಥಿಕ ಹೂಡಿಕೆ ಮತ್ತು ಉಳಿತಾಯದ ಕುರಿತಾಗಿ ಆಸಕ್ತಿ ಕಡಿಮೆಯೆ ನಿಜ. ಅದರೇ ಅಂತಹ ಆಸಕ್ತಿ ಮುಂದಿನ ದಿನಗಳಲ್ಲಿ ಅನೇಕ ಲಾಭಾಂಶವನ್ನು ತಂದುಕೊಡುವುದರಲ್ಲಿ ಸಂದೇಹವಿಲ್ಲ. ನಮ್ಮ ನಿರ್ಧಾರ ಗುರಿ ಹೂಡಿಕೆ ಮತ್ತು ರೂಪಾಯಿಯ ಮೌಲ್ಯವಾಗಿ ಪರಿವರ್ತಿಸುವತ್ತ ಗಮನಹರಿಸಬೇಕಿದೆ. ಅಂತಹ ನಿರ್ವಹಣೆಗೆ ಇಂತಹ ಬ್ಯಾಂಕಿಂಕ್ ಸೌಲಭ್ಯಗಳು ಪೂರಕವಾಗಿ ಸ್ಪಂದಿಸಲಿದೆ. ಆನ್ಲೈನ್ ನಲ್ಲಿ ಸಿಗುವ ಅನೇಕ ಲಾಭಾಂಶದ ಆಕರ್ಷಣೆಗಳಿಗೆ ಅಂಧತ್ವದ ಮೋಸ ಹೋಗದಿರಿ ಎಂದು ಹೇಳಿದರು.
ಎಂಬಿಎ ವಿಭಾಗದ ಮುಖ್ಯಸ್ಥರಾದ ಡಾ.ಸಿ.ಶ್ರೀಕಾಂತ್ ಮಾತನಾಡಿ, ಕೆನರಾ ಬ್ಯಾಂಕ್ ವಿದ್ಯಾರ್ಥಿ ಸ್ನೇಹಿ ಉಳಿತಾಯ ಖಾತೆಯ ಜೊತೆಗೆ ಕೌಶಲ್ಯತೆಯನ್ನು ದೀಪನಗೊಳಿಸುವ ವಿಷಯಗಳ ಕುರಿತಾಗಿ ಚಿಂತನೆ ನಡೆಸುತ್ತಿರುವುದು ಅಭಿನಂದನೀಯ. ಪ್ರತಿನಿತ್ಯದ ಕಲಿಕೆಯಲ್ಲಿ ಒದಗುವ ಆರ್ಥಿಕ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಇಂಥಹ ಯೋಜನೆಗಳ ಪ್ರಯೋಜನ ಪಡೆಯಿರಿ ಎಂದು ಹೇಳಿದರು.
ಉಪ ಮಹಾ ಪ್ರಬಂಧಕರಾದ ಆರ್.ದೇವರಾಜ್ ಮಾತನಾಡಿ, ವೈಯುಕ್ತಿಕ ಹಿತಾಸಕ್ತಿಯ ಜೊತೆಗೆ ಕುಟುಂಬದ ಆರ್ಥಿಕ ಅವಶ್ಯಕತೆಗಳ ಪೂರೈಕೆಗೆ ಅನೇಕ ಅವಕಾಶಗಳಿದ್ದು, ವಿದ್ಯಾರ್ಥಿಗಳು ಈ ಕುರಿತಾಗಿ ಒಂದಿಷ್ಟು ಆಲೋಚನೆ ಮಾಡಬೇಕಿದೆ. ಕೌಶಲ್ಯತೆ ನಮ್ಮೊಳಗಿನ ಶಕ್ತಿ. ಅಂತಹ ಶಕ್ತಿಯನ್ನು ಸ್ವಯಂ ಅಭಿವೃದ್ಧಿಯ ಜೊತೆಗೆ ಸಾಮಾಜಿಕ ಕಾರ್ಯಗಳಿಗೆ ವಿನಿಯೋಗಿಸಿ ಎಂದು ಹೇಳಿದರು.
ಯುವಸ್ನೇಹಿ ಕೆನರಾ ಆ್ಯಸ್ಪೈರ್ಯ್:
18 ವರ್ಷದಿಂದ 28 ವರ್ಷದ ಯುವ ಸಮೂಹಕ್ಕಾಗಿಯೇ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲವಾಗುವಂತೆ ರೂಪಿಸಿರುವ ಈ ವಿಶಿಷ್ಟ ಉಳಿತಾಯ ಖಾತೆಯು ಹಲವು ಪ್ರಯೋಜನಗಳನ್ನು ನೀಡುತ್ತಿದೆ. ಶೂನ್ಯ ಉಳಿತಾಯ ಖಾತೆ ಹೊಂದಬಹುದಾಗಿದ್ದು, ಐದು ಸಾವಿರ ರೂಪಾಯಿಗಳ ತ್ರೈಮಾಸಿಕ ಸರಾಸರಿ ಉಳಿತಾಯ ನಿರ್ವಹಿಸುವ ಖಾತೆದಾರರಿಗೆ ಕೋರ್ಸೆರಾ ಮೂಲಕ ಅಂತರಾಷ್ಟ್ರೀಯ ಕಂಪನಿಗಳ ಮೂಲಕ ಉಚಿತ ಉದ್ಯೋಗಶೀಲ ಪ್ರಮಾಣೀಕೃತ ಕೋರ್ಸ್ ತರಬೇತಿ ನೀಡಲಾಗುತ್ತದೆ.
ಜೊತೆಯಲ್ಲಿ ರುಪೇ ಪ್ಲಾಟಿನಂ ಮಿಲೇನಿಯಲ್ ಕಾರ್ಡ್‌ಗಳನ್ನು ಉಚಿತವಾಗಿ ನೀಡಲಾಗುತ್ತಿದ್ದು, 28 ವರ್ಷ ವಯಸ್ಸಿನವರೆಗೆ ಡೆಬಿಟ್ ಕಾರ್ಡ್‌ಗೆ ಯಾವುದೇ ನಿರ್ವಹಣಾ ವೆಚ್ಚವಿರುವುದಿಲ್ಲ. ಆನ್ಲೈನ್ ಮೂಲಕ ಖರೀದಿಯಲ್ಲಿ ಅನೇಕ ರಿಯಾಯಿತಿ ಹಾಗೂ ಕೊಡುಗೆಗಳು ಸಿಗಲಿದೆ. ವಿಶೇಷವಾಗಿ 0.50% ಶಿಕ್ಷಣ ಸಾಲದ ಬಡ್ಡಿದರದಲ್ಲಿ ರಿಯಾಯಿತಿ ಸಿಗಲಿದೆ. ಇದರೊಂದಿಗೆ ಅಪಘಾತ ವಿಮೆ, ಖರೀದಿ ರಕ್ಷಣೆ ಸೇರಿದಂತೆ ಅನೇಕ ಸೌಲಭ್ಯಗಳು ಒಳಗೊಂಡಿದೆ.
ಕಾರ್ಯಕ್ರಮದಲ್ಲಿ ಕೆನರಾ ಬ್ಯಾಂಕ್ ವಿಭಾಗೀಯ ಪ್ರಬಂಧಕರಾದ ಸ್ವರೂಪ ರಾಣಿ, ಕೆನರಾ ಜೆ.ಎನ್.ಎನ್.ಸಿ ಶಾಖೆಯ ವ್ಯವಸ್ಥಾಪಕರಾದ ಪಲ್ಲವಿ, ಉನ್ನತ ಅಧಿಕಾರಿಗಳಾದ ಗೀತಾಂಜಲಿ ಪ್ರಸನ್ನಕುಮಾರ್, ಉತ್ತೇಜ್, ಕಾಲೇಜಿನ ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ಎಂಬಿಎ ವಿಭಾಗದ ನಿರ್ದೇಶಕರಾದ ಡಾ.ಸಿ.ಶ್ರೀಕಾಂತ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.