ಹೊಸನಗರದ ನಗರ ಪೊಲೀಸರಿಂದ ಅಂತರ ಜಿಲ್ಲಾ ಕಳ್ಳರಿಬ್ಬರು ಸೆರೆ

Kranti Deepa

ಹೊಸನಗರ, ಆ.25 : ತಾಲೂಕಿನ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಕಬಳೆ ಹಾಗೂ ಮಾಸ್ತಿಕಟ್ಟೆ ಪ್ರದೇಶದಲ್ಲಿ ಆಗಸ್ಟ್ 21 ರಂದು ಸಂಭವಿಸಿದ ಕಳ್ಳತನ ಪ್ರಕರಣವನ್ನು ಪಿಎಸೈ ಶಿವಾನಂದ ಕೆ ನೇತ್ರತ್ವದ ಪೊಲೀಸರು ಕೇವಲ 48 ಗಂಟೆಗಳಲ್ಲಿ ಪ್ರಕರಣ ಭೇದಿಸಿ, ಇಬ್ಬರು ಅಂತರ ಜಿಲ್ಲೆ ಆರೋಪಿಗಳನ್ನು ದಸ್ತಗಿರಿ ಮಾಡಿದ್ದಾರೆ.

ನಗರ ಹೋಬಳಿಯ ಕಬಳೆ ಗ್ರಾಮದ ರಿಚರ್ಡ್ ಡಿ ಸೋಜಾ ಹಾಗೂ ಮಾಸ್ತಿಕಟ್ಟೆ ಗ್ರಾಮದ ಶೇಷಾದ್ರಿ ಇವರ ಮನೆಯಲ್ಲಿ ಯಾರೂ ಇಲ್ಲದ ವೇಳೆಯಲ್ಲಿ ಕಳ್ಳರು ಬೀಗ ಒಡೆದು ಮನೆಗಳ ಗಾಡ್ರೆಜ್‌ನಲ್ಲಿದ್ದ ಚಿನ್ನಾಭರಣ ಹಾಗೂ ನಗದು ಹಣವನ್ನು ದೋಚಿಕೊಂಡು ಹೋಗಿದ್ದರು.ರಿಚರ್ಡ್ ಡಿ ಸೋಜಾ ಅವರ ಮನೆಯಿಂದ 31 ಗ್ರಾಂ ತೂಕದ ಚಿನ್ನಾಭರಣ ಮೌಲ್ಯ 1,66   ಲ. ರೂ. ಹಾಗೂ 70 ಸಾವಿರ ರೂ. ನಗದು ಕಳ್ಳತನವಾಗಿತ್ತು ಹಾಗೂ ಮಾಸ್ತಿಕಟ್ಟೆಯ ಶೇಷಾದ್ರಿಯವರ ಮನೆಯಿಂದ 28 ಗ್ರಾಂ ಚಿನ್ನಾಭರಣ (ಮೌಲ್ಯ 1.11  ಲಕ್ಷ ), 30 ಸಾವಿರ ನಗದು ಮತ್ತು 3  ಸಾವಿರ ರೂ. ನ ಬೆಳ್ಳಿ ಆಭರಣ ದೋಚಲ್ಪಟ್ಟಿತು.ಪ್ರಕರಣ ದಾಖಲಾಗುತಿದ್ದಂತೆ ಹೊಸನಗರ ವೃತ್ತ ನಿರೀಕ್ಷಕ ಗುರಣ್ಣ ಎಸ್. ಹೆಬ್ಬಾಳ್ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಲಾಯಿತು.

ನಗರ ಪೊಲೀಸ್ ಠಾಣೆಯ ಪಿಎಸ್‌ಐ ಶಿವಾನಂದ ಕೋಳಿ ಹಾಗೂ ಅವರ ಸಿಬ್ಬಂದಿಗಳು, ಬೆರಳಚ್ಚು ವಿಭಾಗ ಹಾಗೂ ಎ.ಎನ್.ಸಿ. ತಂಡದ ತಾಂತ್ರಿಕ ಸಹಕಾರದಿಂದ ಪತ್ತೆ ಕಾರ್ಯಾಚರಣೆಯಲ್ಲಿ ಕೈಗೊಂಡು ಆಗಸ್ಟ್ 24 ರಂದು ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲೂಕಿನ ನಿವಾಸಿಗಳಾದ ಹನುಮಂತ ತೊಳೆಯಪ್ಪ ಕುಂಚಿಕೊರವರ (26 ವರ್ಷ) , ಮಂಜುನಾಥ ಬಿಸುಕಲ್ಲೊಡ್ಡರ (36 ವರ್ಷ) ಎಂಬ ಇಬ್ಬರು ಅಂತರ್ ಜಿಲ್ಲಾ ಕಳ್ಳರನ್ನು ದಸ್ತಗಿರಿ ಮಾಡಿ, ಅವರಿಂದ ಒಟ್ಟು 55 ಗ್ರಾಂ ಚಿನ್ನಾಭರಣ (ಮೌಲ್ಯ ಸುಮಾರು 4 ಲಕ್ಷ) ಹಾಗೂ ಕೃತ್ಯಕ್ಕೆ ಬಳಸಿದ ಸ್ಕೂಟಿ ವಶಪಡಿಸಿಕೊಂಡಿದ್ದಾರೆ.

Share This Article
";