ಭದ್ರಾವತಿ, ಸೆ.15 : ನಗರದ ಬಿ.ಹೆಚ್.ರಸ್ತೆಯ (ಡಾ: ರಾಜಕುಮಾರ್ ರಸ್ತೆ) ಹೊಸ ಸೇತುವೆಗೆ “ವಿಶ್ವಕರ್ಮ ಅಮರಶಿಲ್ಪಿ ಜಕಣಾಚಾರಿ” ಹೆಸರನ್ನು ನಗರಸಭೆಯು ನಾಮಕರಣ ಮಾಡಿದ್ದು ಅಧಿಕೃತವಾಗಿ ಜೆಸಿಬಿ ಯಂತ್ರದ ಮೂಲಕ ಕಬ್ಬಿಣದ ಬೃಹತ್ ನಾಮಫಲಕಗಳನ್ನು ಸೇತುವೆಯ ಎರಡೂ ಬದಿಯ ಕಮಾನುಗಳ ಮೇಲೆ ಭಾನುವಾರ ಅಳವಡಿಸಲಾಯಿತು.
ಮೈಸೂರು ರಾಜ್ಯದ ಮುಖ್ಯ ಕಮೀಷನರ್ ಆಗಿದ್ದ ಬ್ರಿಟೀಷ್ ಅಧಿಕಾರಿ ಕಬ್ಬನ್ ಬೆಂಕಿಪುರ ಭದ್ರಾವತಿಯ ಭದ್ರಾ ನದಿಗೆ ಅಡ್ಡಲಾಗಿ 186 ವರ್ಷಗಳ ಹಿಂದೆ ನಿರ್ಮಿಸಿದ ಹಳೇ ಸೇತುವೆಯ ಪಕ್ಕದಲ್ಲಿಯೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಪರ್‍ಯಾಯವಾಗಿ ನಿರ್ಮಿಸಿದ ಹೊಸ ಸೇತುವೆಗೆ ನಗರಸಭೆಯು ವಿಶ್ವಕರ್ಮ ಜನಾಂಗದವರ ಒತ್ತಾಸೆ ಮೇರೆಗೆ ಹಾಗೂ ಶಾಸಕರ ಆದೇಶದಂತೆ ಅಮರಶಿಲ್ಪಿ ಜಕಣಾಚಾರಿ ಸೇತುವೆ ಎಂದು ನಾಮಕರಣ ಮಾಡಿದೆ. ಸೇತುವೆಯ ಉತ್ತರ ದಿಕ್ಕಿನ ಮಾಧವಾಚಾರ್ ವೃತ್ತದ ಕಡೆಯ ಕಮಾನಿನಲ್ಲಿ ಮತ್ತು ದಕ್ಷಿಣ ದಿಕ್ಕಿನ ಸ್ವಸ್ತಿಕ್ ಸ್ಟೀಲ್ಸ್ ಮತ್ತು ಸಾಬ್‌ಜಾನ್‌ಸಾಬ್ ಅಂಗಡಿಯ ಕಡೆದ ಕಮಾನಿನ ಮೇಲೆ ಬೃಹತ್ ನಾಮಫಲಕಗಳನ್ನು ಅಳವಡಿಸಲಾಗಿದೆ.
ನಗರಸಭೆ ಎಂಜಿನಿಯರ್ ಪ್ರಸಾದ್, ಲಿಮ್ಕಾ ಬುಕ್ಸ್ ಆಫ್ ರೆಕಾರ್ಡ್ ಪ್ರಶಸ್ತಿ ವಿಜೇತ ಕಲಾವಿದ ಭದ್ರಾವತಿ ಗುರು, ರಾಮಕೃಷ್ಣ, ಗೋವರ್ಧನರಾವ್, ತಿಪ್ಪೇಸ್ವಾಮಿ, ಶಿವರುದ್ರಪ್ಪ ಇನ್ನು ಮುಂತಾದವರು ಉಪಸ್ಥಿತರಿದ್ದರು.